Site icon TUNGATARANGA

ಕರ್ನಾಟಕವನ್ನು ಮುಸ್ಲಿಂ ರಾಜ್ಯ ಮಾಡಲು ಹೊರಟರೆ ಬಿಜೆಪಿ ಬಿಡಲ್ಲ: ಶಾಸಕ ಎಸ್.ಎನ್. ಚನ್ನಬಸಪ್ಪ ಹಾಗೂ ಮಾಜಿ ಶಾಸಕ ಹರತಾಳು ಹಾಲಪ್ಪ ಆಕ್ರೋಶ

ಶಿವಮೊಗ್ಗ: ಕರ್ನಾಟಕ ರಾಜ್ಯವನ್ನು ವಕ್ಫ್ ಮಂಡಳಿ ಮೂಲಕ ಮುಸ್ಲಿಂ ರಾಜ್ಯವನ್ನಾಗಿ ಮಾಡಲು ಸರ್ಕಾರ ಹೊರಟಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹಾಗೂ ಮಾಜಿ ಶಾಸಕ ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಮಂಡಳಿಯಿಂದ ರೈತರಿಗೆ ನೋಟಿಸ್ ನೀಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ರೈತರ ಜಮೀನುಗಳನ್ನು ಕಸಿದುಕೊಂಡು ವಕ್ಫ್ ಮಂಡಳಿಗೆ ಸೇರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕ ಚನ್ನಬಸಪ್ಪ ಮಾತನಾಡಿ, ಮುಸ್ಲಿಮರನ್ನು ನಾವು ಬಂಧುಗಳು ಎಂದು ಕರೆಯುತ್ತೇವೆ. ಈಗ ಹಾಗೆ ಕರೆಯಲು ಅಸಹ್ಯವಾಗುತ್ತಿದೆ. ಮಾಡಬಾರದ ಕೆಲಸಕ್ಕೆ ಅವರು ಕೈಹಾಕುತ್ತಿದ್ದಾರೆ. ಮುಸಲ್ಮಾನ್ ಲ್ಯಾಂಡ್ ಮಾಫಿಯಾವನ್ನು ವಕ್ಪ್ ಮೂಲಕ ಕಾಂಗ್ರೆಸ್ ಮಾಡುತ್ತಿದೆ. ರೈತರಿಗೆ ನೋಟಿಸ್ ಕೊಟ್ಟರೂ, ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.


ಮುಖ್ಯಮಂತ್ರಿಗಳೇ ನಿಮ್ಮ ಮುಸ್ಲಿಂ ಓಲೈಕೆಯನ್ನು ಎಲ್ಲಿಯವರೆಗೂ ಮುಂದುವರೆಸುತ್ತೀರಿ. ಒಂದು ಕೆಲಸ ಮಾಡಿ ಇಡೀ ರಾಜ್ಯವನ್ನೇ ವಕ್ಫ್ ಮಂಡಳಿಗೆ ಬರೆದುಕೊಟ್ಟುಬಿಡಿ. ಒಂದು ಕಡೆ ಓಲೈಕೆಯಾದರೆ ಮತ್ತೊಂದು ಕಡೆ ರಾಜ್ಯ ಸರ್ಕಾರ ರೈತ ದ್ರೋಹಿ ಸರ್ಕಾರವಾಗಿದೆ ಎಂದು ದೂರಿದರು.
ಶಿವಮೊಗ್ಗದಲ್ಲಿ ಕೂಡ ಶಿವಪ್ಪನಾಯಕನ ವಂಶಸ್ಥರ ಸಮಾಧಿ ಜಾಗವನ್ನು ವಕ್ಫ್ ಮಂಡಳಿಗೆ ಸೇರಿಸುವ ಹುನ್ನಾರ ನಡೆದಿದೆ. ಈಗಾಗಲೇ ಈದ್ಗಾ ಮೈದಾನ ನಮ್ಮ ಜಾಗ ಎಂದು ಹೇಳುತ್ತಿದ್ದಾರೆ. ಅದು ಮಹಾನಗರ ಪಾಲಿಕೆ ಹೆಸರಿನಲ್ಲಿದೆ. ಆಸ್ತಿ ಸಂರಕ್ಷಣೆ ಮಾಡಲು ಆಗದಿರುವ ಸರ್ಕಾರ ಇದು. ಜಮೀರ್ ಇದು ನಿಮ್ಮಪ್ಪನ ಮನೆ ಆಸ್ತಿಯಲ್ಲ, ನೀನು ಇರುವ ಬಂಗಲೆ ಜಾಗ ವಕ್ಫ್ ಬೋರ್ಡ್‌ಗೆ ಬರೆದುಕೊಡು. ಆಗ ಗೊತ್ತಾಗುತ್ತದೆ. ಈ ರಾಜ್ಯವನ್ನು ವಕ್ಫ್ ರಾಜ್ಯವನ್ನಾಗಿ ಮಾಡಲು ಹಿಂದೂ ಸಮಾಜ ಬಿಡುವುದಿಲ್ಲ ಎಂದರು.


ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ರೈತರ ಜಮೀನನ್ನು ನಮ್ಮ ಜಮೀನು ಎಂದು ಹೇಳಿ ಸುಪರ್ದಿಗೆ ತೆಗೆದುಕೊಳ್ಳಲು ಜಮೀರ್ ಅಹಮ್ಮದ್ ಹೊರಟಿದ್ದಾರೆ. ಅವರಿಗೆ ತಳಬುಡ ಗೊತ್ತಿಲ್ಲ. ಪಹಣಿ ತಿದ್ದಪಡಿಯಾಗಿದೆ ಎಂದು ಭೂಸ್ವಾಧೀನಕ್ಕೆ ಹೋಗುವ ಕೆಲಸವನ್ನು ಅವರು ಮಾಡಿ ಶಾಂತಿಯನ್ನು ಕದಡುತ್ತಿದ್ದಾರೆ ಎಂದು ದೂರಿದರು.
ದೇಶದಲ್ಲಿ ವಕ್ಫ್ ಕಾಯ್ದೆ ಹಾಗೂ ಅರಣ್ಯ ಕಾಯ್ದೆಗಳು ಬದಲಾಗಬೇಕು. ವಕ್ಪ್ ಬಗ್ಗೆ ಪ್ರಶ್ನೆ ಮಾಡಲು ಕೋರ್ಟ್‌ನಲ್ಲಿ ಬರುವುದಿಲ್ಲ. ವಕ್ಫ್ ಕೋರ್ಟ್‌ನಲ್ಲೇ ಆಗಬೇಕು. ಸಾಗರದಲ್ಲೂ ಕೂಡ ವಿವಾದವಿದೆ. ಗಣಪತಿ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡು ವಕ್ಫ್ ಜಮೀನು ಎಂದು ಹೇಳಿಕೊಂಡು ಬಂದಿದ್ದರು. ಇದಕ್ಕೆಲ್ಲಾ ಪರಿಹಾರ ಎಂದರೆ ವಕ್ಪ್ ಕಾಯ್ದೆ ತಿದ್ದುಪಡಿಯಾಗಬೇಕು ಎಂದರು.

Exit mobile version