Site icon TUNGATARANGA

ಅಧಿಕಾರಿಗಳ ವಿರುದ್ಧ ಶಾಸಕ ಸಂಗಮೇಶ್ ಗರಂ…!

ಭದ್ರಾವತಿ: ನಗರದ ವಿವಿಧ ಇಲಾಖೆಗಳ ವಿವಿಧ ಅನುದಾನಗಳಡಿಯಲ್ಲಿ ಕೈಗೊಂಡಿರುವ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ನಡೆಯಿತು.
 ತಾಲೂಕು ಆಡಳಿತಕ್ಕೆ ಸಂಬಂಧಿಸಿದಂತೆ ಸರ್ಕಾರಿ ನಿವೇಶನಗಳ ಒಟ್ಟು 23 ಎಕರೆ ಜಾಗವನ್ನು ಗುರುತಿಸಿ ಸರ್ವೆ ಮಾಡಿ ಗಡಿ ನಿಗದಿಪಡಿಸುವ ಸಂಬಂಧ ಕೈಗೊಂಡ ಕ್ರಮಗಳ ಕುರಿತು ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್‌ರವರು ಸಭೆಗೆ ಮಾಹಿತಿ ನೀಡಿ, ನಗರಸಭೆ ವ್ಯಾಪ್ತಿಯ ತಿಮ್ಲಾಪುರ, ಬೊಮ್ಮನಕಟ್ಟೆ ಮತ್ತು ಉಜ್ಜನಿಪುರದಲ್ಲಿ ಸರ್ಕಾರಿ ಭೂಮಿಯನ್ನು ಗುರುತಿಸಲಾಗಿದೆ. ಈ ಬಾರಿ ಪೂರ್ಣ ಬಂದೋಬಸ್ತ್ ಮಾಡಿಕೊಂಡು ತೆರವು ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಇದರಿಂದ ಆಕ್ರೋಶಗೊಂಡ ಶಾಸಕರು,  ನಮಗೆ ಬೇಕಾಗಿರುವುದು ಕೇವಲ 23 ಎಕರೆ ಖಾಲಿ ಜಾಗ ಮಾತ್ರ. ಈ ಸಂಬಂಧ ಸುಮಾರು ಒಂದು ವರ್ಷದಿಂದ ಖಾಲಿ ಇರುವ ಸರ್ಕಾರಿ ಜಾಗ ಗುರುತಿಸುವಂತೆ ತಾಲೂಕು ಆಡಳಿತಕ್ಕೆ ತಿಳಿಸಲಾಗಿದೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ತಾಲೂಕು ಆಡಳಿತ ಮತ್ತು ಕಂದಾಯ ಇಲಾಖೆ ಸತ್ತು ಹೋಗಿರುವಂತೆ ಕಂಡು ಬರುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯತನ ಎದ್ದು ಕಾಣುತ್ತಿದ್ದು, ಯಾವ ರೀತಿ ಕ್ರಮ ಕೈಗೊಳ್ಳಬೇಕೆಂದು ಗೊತ್ತಾಗುತ್ತಿಲ್ಲ. ಮುಂದಿನ ಒಂದು ವಾರದೊಳಗೆ ಜಾಗವನ್ನು ಗುರುತಿಸಿ ಸರ್ವೆ ಮಾಡಿ ಗಡಿ ನಿಗದಿಪಡಿಸಿ ಕಂದಾಯ ಇಲಾಖೆ ಸ್ವತ್ತು ಎಂದು ಫಲಕ ಹಾಕುವಂತೆ ಎಚ್ಚರಿಸಿದರು.  


ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಹೊಸಮನೆ ಶಿವಾಜಿ ಸರ್ಕಲ್ ರಸ್ತೆ, ತಾಲೂಕು ಕಚೇರಿ ರಸ್ತೆ ಮತ್ತು ಹೊಸ ಸೇತುವೆ ರಸ್ತೆಗಳ ಅಭಿವೃದ್ಧಿ ಕಾಮಗಾರಿ, ಸೀಗೆಬಾಗಿಯಿಂದ ರಂಗಪ್ಪ ವೃತ್ತದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ, ಬಿಳಕಿ ಕ್ರಾಸ್‌ನಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ, ಮತ್ತು ಜಯಶ್ರೀ ಸರ್ಕಲ್ ರಸ್ತೆ ಮತ್ತು ವೇಲೂರು ಶೆಡ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ಸಾರ್ವಜನಿಕರಿಂದ ಸಾಕಷ್ಟು ದೂರುಗಳಿಗೆ ಕೇಳಿ ಬರುತ್ತಿವೆ. ಜನರು ರಸ್ತೆ ಹಾಳಾಗಿರುವ ಸಂಬಂಧ ಪೌರಾಯುಕ್ತರನ್ನು ಪ್ರಶ್ನಿಸುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯವರು ಒಂದು ವರ್ಷ ಕಳೆದರೂ ಸಹ  ಒಂದು ಸಾಮಾನ್ಯ ಸೀಮೆಂಟ್ ರಸ್ತೆ ನಿರ್ಮಾಣ ಮಾಡಿಲ್ಲ. ಶಿವಾಜಿ ಸರ್ಕಲ್‌ನಿಂದ ಕಬಳಿಕಟ್ಟೆ ವರೆಗೆ ರಸ್ತೆಯ ಅಕ್ಕಪಕ್ಕದಲ್ಲಿರುವ ಮರಗಳನ್ನು ಕಡಿತಲೆಗೊಳಿಸಿಲ್ಲ, ವಿದ್ಯುತ್ ಕಂಬಗಳನ್ನು ತೆರವುಗೊಳಿಸಿಲ್ಲ. ಕೆಇಬಿ ಇಲಾಖೆ ಒಂದು ದರಿದ್ರ ಇಲಾಖೆಯಾಗಿದೆ. ವಿದ್ಯುತ್ ಬಿಲ್ ಕಟ್ಟಲಿಲ್ಲ ಎಂದರೆ ವಿದ್ಯುತ್ ಕಡಿತ ಮಾಡುತ್ತಾರೆ. ಆದರೆ ಅವರು ಮಾಡಬೇಕಾಗಿರುವ ಕೆಲಸ ಮಾತ್ರ ಸರಿಯಾಗಿ ಮಾಡುವುದಿಲ್ಲ. ತಕ್ಷಣ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.  
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸಂಬಂಧಿಸಿದಂತೆ ಅಮೃತ್ ಯೋಜನೆಯಡಿ ಕೈಗೊಳ್ಳುತ್ತಿರುವ ಕುಡಿಯುವ ನೀರಿನ ಅಭಿವೃದ್ಧಿ ಕಾಮಗಾರಿಗಳು ಹಾಗು ಒಳಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಒಳಚರಂಡಿ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಕಾಮಗಾರಿಗೆ ಅಗತ್ಯವಿರುವ ಸೀಮೆಂಟ್, ಜಲ್ಲಿಕಲ್ಲು ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ಸರಿಯಾಗಿ ಪೂರೈಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಕಾಮಗಾರಿ ಸಮರ್ಪಕವಾಗಿ ನಡೆಸುವ ಮೂಲಕ ಶೀಘ್ರವಾಗಿ ಮುಕ್ತಾಯಗೊಳಿಸಬೇಕೆಂದರು.
 ಈ ನಡುವೆ ಶಾಸಕರು ಕೆಎಸ್‌ಆರ್‌ಟಿಸಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಲಾಖೆಗೆ ಹಣ ಮುಖ್ಯ ಅಲ್ಲ. ಜನರಿಗೆ ಸೇವೆ ಕೊಡುವುದು ಮುಖ್ಯ. ಆದಾಯ ಬರುವುದಿಲ್ಲ ಎಂದು ಅಗತ್ಯವಿರುವ ಕಡೆ ಬಸ್‌ಗಳನ್ನು ಬಿಡದಿರುವುದು ಸರಿಯಲ್ಲ. ಶಾಲೆಗಳು ಆರಂಭಗೊಂಡು ಹಲವು ದಿನಗಳು ಕಳೆದಿವೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡಬೇಕು. ವಿದ್ಯಾರ್ಥಿಗಳು ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ಪ್ರತಿಭಟನೆ ಮಾಡಿದ ನಂತರ ಇಲಾಖೆಗೆ ಜ್ಞಾನೋದಯವಾಗಿದೆ. ಇಲಾಖೆ ಅಧಿಕಾರಿಗಳು ಇದಕ್ಕೂ ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಸಾರಿಗೆ ವ್ಯವಸ್ಥೆಯನ್ನು ಸೂಕ್ತ ರೀತಿ ಕಲ್ಪಿಸಿಕೊಡಬೇಕೆಂದು ಅಸಮಾಧಾನ ವ್ಯಕ್ತಪಡಿಸಿದರು.
ಉಳಿದಂತೆ ನಗರಸಭೆವತಿಯಿಂದ ಕೈಗೊಳ್ಳಲಾಗುತ್ತಿರುವ ಕೆಎಂಆರಪಿ ಯೋಜನೆಯಡಿ ರು. 21 ಕೋ. ಅನುದಾನದದ ಒಳಚರಂಡಿ ಅಭಿವೃದ್ಧಿ ಕಾಮಗಾರಿ, ಖಾಸಗಿ ಬಸ್ ನಿಲ್ದಾಣದ ಅಭಿವೃದ್ಧಿ, ನಗರದ ವಿವಿಧ ವೃತ್ತಗಳ ಅಭಿವೃದಧಿ, ನಗರಸಭೆ ಕಛೇರಿಯ ನೂತನ ಕಟ್ಟಡ, ಸ್ಟ್ರೀಟ್ ವೆಂಡಿಂಗ್ ಜೋನ್ ಕಾಮಗಾರಿ, ಮೀನು ಮಾರುಕಟ್ಟೆ ಅಭಿವೃದ್ಧಿ, ಬಸವೇಶ್ವರ ವೃತ್ತದ ಅಭಿವೃದ್ಧಿ, ನಗರೋತ್ಥಾನ ಹಂತ-3 ರ ಉಳಿಕೆ ಅನುದಾನದ ಕಾಮಗಾರಿಗಳು ಮತ್ತು ವಸತಿ ಯೋಜನೆಗಳ ಪ್ರಗತಿ ಹಾಗು ಕೆಆರ್‌ಐಡಿಎಲ್ ವತಿಯಿಂದ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಮತ್ತು ಮೆಸ್ಕಾಂ ನಗರ ಉಪ ವಿಭಾಗದ ವತಿಯಿಂದ ಕೈಗೊಳ್ಳಲಾಗುತ್ತಿರುವ ವಿವಿಧ ಕಾಮಗಾರಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ನಗರಸಭೆ ಪೌರಾಯುಕ್ತ ಮನೋಹರ್, ವಲಯ ಅರಣ್ಯಾಧಿಕಾರಿ ಮಂಜುನಾಥ್, ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಶರತ್ಚಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು
.

Exit mobile version