ಸಾಗರ : ವಿಧಾನಸಭೆ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೇಸ್ ಗೆದ್ದಾಗಿದೆ. ಸರ್ಕಾರ ನೀಡಿದ ಐದು ಗ್ಯಾರಂಟಿಗಳು ಕಾಂಗ್ರೇಸ್ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಇಲ್ಲಿನ ಜೋಸೆಫ್ ನಗರದಲ್ಲಿರುವ ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ಮನೆಗೆ ಶನಿವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಐದು ಗ್ಯಾರಂಟಿಗಳು ರಾಜ್ಯದ ಎಲ್ಲ ವರ್ಗದ ಬಡವರಿಗೆ ಹೆಚ್ಚಿನ ಅನುಕೂಲವಾಗಿದೆ. ಚುನಾವಣೆಯಲ್ಲಿ ಇದು ಮತವಾಗಿ ಪರಿವರ್ತನೆಯಾಗಲಿದೆ ಎಂದರು.
ಜಾತಿಗಣತಿಗಾಗಿ ಸರ್ಕಾರ ೧೬೦ ಕೋಟಿ ರೂಪಾಯಿ ಖರ್ಚು ಮಾಡಿದೆ. ಯಾರೋ ಜಾತಿಗಣತಿ ಬೇಡ ಎಂದು ಹೇಳಿದರೆ ಕೇಳುವುದಿಲ್ಲ. ಸರ್ಕಾರ ಅವರು ನಡೆಸುತ್ತಿಲ್ಲ. ನಾವು ಸರ್ಕಾರ ನಡೆಸುತ್ತಿದ್ದೇವೆ. ಸಾರ್ವಜನಿಕ ಹಣ ಖರ್ಚು ಮಾಡಿ ಜಾತಿಗಣತಿ ಮಾಡಿಸಿದ್ದೇವೆ. ಜನರಿಗೆ ಅದರ ಮಾಹಿತಿ ಕೊಡಬೇಕಾದದ್ದು ನಮ್ಮ ಕರ್ತವ್ಯವಾಗಿರುತ್ತದೆ. ಜಾತಿ ಗಣತಿಗೆ ಸಂಬಂಧಪಟ್ಟಂತೆ ಕೆಲವರು ಅವರವರ ಅಭಿಪ್ರಾಯ ತಿಳಿಸಿದ್ದಾರೆ ಎಂದು ಹೇಳಿದರು.
ಶರಾವತಿ ಮುಳುಗಡೆ ಸಂತ್ರಸ್ತರದ್ದು ಕಳೆದ ನಾಲ್ಕೈದು ದಶಕಗಳ ಜ್ವಲಂತ ಸಮಸ್ಯೆಯಾಗಿದೆ. ಏಕಕಾಲದಲ್ಲಿ ಎಲ್ಲವನ್ನೂ ಬಗೆಹರಿಸಲು ಸಾಧ್ಯವಿಲ್ಲ. ಹಂತಹಂತವಾಗಿ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಸುಮಾರು ೧೨ಸಾವಿರ ಎಕರೆ ಭೂಮಿ ಮುಳುಗಡೆಯಾಗಿದೆ ಎನ್ನಲಾಗುತ್ತಿದೆ. ಸರ್ಕಾರ ಈ ವಿಷಯವನ್ನು ಪ್ರಣಾಳಿಕೆಯಲ್ಲಿ ಹೇಳಿತ್ತು. ಅದನ್ನು ಬಗೆಹರಿಸಲು ಸಹ ಬದ್ದವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಪ್ರಮುಖರಾದ ಕಲಸೆ ಚಂದ್ರಪ್ಪ, ಸುರೇಶಬಾಬು, ತಾರಾಮೂರ್ತಿ, ಅನ್ವರ್ ಭಾಷಾ, ಮೈಕೆಲ್ ಡಿಸೋಜ, ಡಿ.ದಿನೇಶ್, ಸರಸ್ವತಿ ನಾಗರಾಜ್ ಇನ್ನಿತರರು ಹಾಜರಿದ್ದರು.