ಶಿವಮೊಗ್ಗ,ಅ.೨೬: ಶಿವಮೊಗ್ಗ ಜಿಲ್ಲಾ ಬಂಜಾರ ಸಂಘಕ್ಕೆ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿದ್ದು, ಇದರಿಂದ ಸಂಘಕ್ಕೆ ಸ್ವಯಂ ಘೋಷಿತ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ಕೆ.ಬಿ. ಅಶೋಕ್‌ನಾಯ್ಕ ಅವರ ಬಣದ ಪದಾಧಿಕಾರಿಗಳ ನೇಮಕ ರದ್ದಾಗಿದೆ ಎಂದು ಸಂಘದ ಅಜೀವ ಸದಸ್ಯರಾದ ಶಿವಕುಮಾರ್ ತಿಳಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಘದ ಹಣ ದುರುಪಯೋಗ ಪಡಿಸಿ ಭ್ರಷ್ಟಚಾರ ಮಾಡಿದ್ದು, ಕಳೆದ ಜುಲೈ ೧೩ರಂದು ನಡೆದ ಸಂಘದ ಸರ್ವ ಸದಸ್ಯರ ಸಭೆಗೆ ಸಂಘದಲ್ಲಿ ೭೦೦ಕ್ಕೂ ಹೆಚ್ಚು ಸದಸ್ಯರಿದ್ದರು ಸಹ ಕೆಲವೇ ಸದಸ್ಯರಿಗೆ ಆಹ್ವಾನ ಪತ್ರಿಕೆ ಕಳುಹಿಸಿ ಸಭೆ ನಡೆಸಿದ್ದು ಅಲ್ಲದೆ ಕೇವಲ ೧೯ ಜನ ಸೇರಿ ಅವಿರೋಧವಾಗಿ ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದು, ಸದರಿ ಆಡಳಿತ ಮಂಡಳಿಗೆ ಅನುಮೋದನೆ ನೀಡಬಾರದು ಎಂದು ೪೫ ಅಜೀವ ಸದಸ್ಯರು ದೂರು ನೀಡಿ, ಸಂಘದ ಬೈಲಾ ಮತ್ತು ಕಾಯ್ದೆ ಉಲ್ಲಂಘನೆಯಾಗಿದೆ. ನಿಯಮಾನುಸಾರ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದ್ದು, ಏಕಪಕ್ಷೀಯವಾಗಿ ಸಂಘಕ್ಕೆ ಆಯ್ಕೆ ಮಾಡಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಆಡಳಿತಾಧಿಕಾರಿಗಳನ್ನು ಸರ್ಕಾರ ನೇಮಕ ಮಾಡಲಾಗಿದೆ ಎಂದರು.
ಹಣ ದುರುಪಯೋಗ ಮಾಡಿರುವ ಜಿಲ್ಲಾಧ್ಯಕ್ಷರಾಗಿದ್ದ ಕೆ.ಬಿ.ಅಶೋಕ್‌ನಾಯ್ಕ, ಜಿಲ್ಲಾ ಬಂಜಾರ ಸಂಘಕ್ಕೆ ವಾಣಿಜ್ಯ ಉದ್ದೇಶ ಇಟ್ಟುಕೊಂಡು ಸಮಾಜವನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಗಿ ಇಂದು ಇಡೀ ಸಮಾದವರೆಲ್ಲರು ತಲೆತಗ್ಗಿಸುವಂತಹ ರೀತಿಯಲ್ಲಿ ಸರ್ಕಾರದಿಂದ ಆಡಳತಾಧಿಕಾರಿ ನೇಮಕವಾಗುವುದಕ್ಕೆ ಕಾರಣರಾಗಿರುವ ಇವರು ಕೂಡಲೇ ಸಮಾಜ ಬಾಂಧವರಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಅನಧಿಕೃತವಾಗಿ ಸಂಘದ ಖಾತೆಯಿಂದ ಹಣ ದುರುಪಯೋಗ ಪಡಿಸಿ ಭ್ರಷ್ಟಚಾರ ಮಾಡಿದ್ದಾರೆ. ಭ್ರಷ್ಟಚಾರವಾಗಿರುವ ಹಣವನ್ನು ಕೂಡಲೇ ಸಂಘದ ಖಾತೆಗೆ ಜಮಾ ಮಾಡಬೇಕು . ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಿ ಸಮಾಜಕ್ಕೆ ನ್ಯಾಯ ಕೊಡಿಸುವ ಕೆಲಸ ಮುಂದುವರೆಯುತ್ತದೆ ಎಂದರು.
ಅಜೀವ ಸದಸ್ಯರು ಮಾಡಿರುವ ಆರೋಪದ ಬಗ್ಗೆ ತನಿಖಾಧಿಕಾರಿಗಳು ಸಾಭೀತುಪಡಿಸಿರುವುದರಿಂದ ಅವರ ವರದಿ ಮೇರೆಗೆ ಶಿವಮೊಗ್ಗದ ಸಹಕಾರ ಸಂಘಗಳ ಉಪನಿಬಂಧಕರು ಆಡಳಿತಾಧಿಕಾರಿಯಾಗಿ ನೇಮಕ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ಹಿನ್ನಲೆಯಲ್ಲಿ ಸರ್ಕಾರವು ಅ.೨೪ರಂದು ಶಿವಮೊಗ್ಗ ತಹಶೀಲ್ದಾರ್‌ರವರನ್ನು ಆಡಳಿತಾಧಿಕಾರಿಯಾಗಿ ನೇಮಕ ಆದೇಶ ಹೊರಡಿಸಿದೆ ಎಂದರು.
ಸಮಾಜದ ಬಡ ವಿದ್ಯಾರ್ಥಿಗಳು ಹಳೆ ಕಟ್ಟಡದಲ್ಲಿ ವಿದ್ಯಾಭ್ಯಾಸ ಮಾಡಿ ಓದಿಕೊಂಡು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಇಂದು ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತ ಜೀವನ ನಡೆಸುತ್ತಿದ್ದಾರೆ. ಆದರೆ ವಿದ್ಯಾರ್ಥಿನಿಲಯ, ಕಸೂತಿ ಕೇಂದ್ರ ಹಾಗೂ ತರಬೇತಿ ಕೇಂದ್ರ ನಡೆಸಲು ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಪಡೆದು ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿ ಕಲ್ಯಾಣ ಮಂಟಪ ಕಟ್ಟಲಾಗಿದೆ, ಇದರಿಂದ ಬಂದ ಹಣವನ್ನು ಸಹ ದುರುಪಯೋಗ ಮಾಡಲಾಗಿದೆ ಎಂದು ದೂರಿದರು.
ಕೂಡಲೇ ಜಿಲ್ಲಾ ಬಂಜಾರ ಸಮಸ್ತ ಜನತೆಗೆ ಕ್ಷಮೆಯಾಚಿಸಿ ದುರುಪಯೋಗ ಮಾಡಿಕೊಂಡ ಹಣವನ್ನು ಸಂಘದ ಖಾತೆಗೆ ಜಮಾ ಮಾಡಿ ಸಮಾಜಕ್ಕೆ ನ್ಯಾಯ ಕೊಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಜೀವ ಸದಸ್ಯರಾದ ರೇಣುನಾಯ್ಕ, ಹರೀಶ್ ವೈ. ಅಂಜನಾಪುರ, ಹನುಮಂತನಾಯ್ಕ, ಜಯಾನಾಯ್ಕ, ಶಿವರಾಜಕುಮಾರ ನಾಯ್ಕ, ಕುಮಾರ ನಾಯ್ಕ, ಗೇಮ್ಯಾನಾಯ್ಕ, ಶೇಖರ ನಾಯ್ಕ ಉಪಸ್ಥಿತರಿದ್ದರು.
ಬಹುಮುಖಿ ಆಯೋಜನೆ