Site icon TUNGATARANGA

ಅ.28 ರಂದು : ಮೂಲ ಮಂಜೂರಾತಿದಾರರಾದ ದಲಿತರಿಗೆ ಭೂಮಿಯ ಸ್ವಾಧೀನವನ್ನು ವಾಪಾಸ್ಸು ಬಿಡಿಸಿಕೊಡಬೇಕು ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ: ಎಂ.ಗುರುಮೂರ್ತಿ

ಶಿವಮೊಗ್ಗ,ಅ.೨೫: ಮೂಲ ಮಂಜೂರಾತಿದಾರರಾದ ದಲಿತರಿಗೆ ಭೂಮಿಯ ಸ್ವಾಧೀನವನ್ನು ವಾಪಾಸ್ಸು ಬಿಡಿಸಿಕೊಡಬೇಕು ಎಂದು ಆಗ್ರಹಿಸಿ ಅ.೨೮ರ ಬೆಳಿಗ್ಗೆ ೧೧ಕ್ಕೆ ಡಿ.ಎಸ್.ಎಸ್.ಕಚೇರಿಯಿಂದ ಡಿಸಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ತಿಳಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭದ್ರಾವತಿ ತಾಲ್ಲೂಕು ಕೂಡ್ಲಿಗೆರೆ ಹೋಬಳಿ, ಕಾಚಗೊಂಡನಹಳ್ಳಿ ಗ್ರಾಮದ ಸರ್ವೆ ನಂ.೧೫ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಭೋವಿ ಸಮುದಾಯದ ೪೯ ಕುಟುಂಬಗಳಿಗೆ ಮಂಜೂರಾದ ಭೂಮಿಯನ್ನು ಬಲಿಷ್ಠ ಜಾತಿ ಹಾಗೂ ವರ್ಗದವರು ಪರಿಶಿಷ್ಟರನ್ನು ಭೂಮಿಯ ಸ್ವಾಧೀನದಿಂದ ಒಕ್ಕಲೆಬ್ಬಿಸಿದ್ದು ಇದರ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸರ್ವೆ ನಂ.೧೫ರಲ್ಲಿ ಒಟ್ಟು ೫೨೮.೨೭ ಗುಂಟೆ ಜಮೀನಿದ್ದು, ಈ ಜಮೀನಿನಲ್ಲಿ ಭದ್ರಾವತಿ ನಗರದ ಭೋಮಿ ಕಾಲೋನಿಯಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿಗೆ ಸೇರಿದ ಭೋವಿ ಸಮಾಜದ ೪೯ ಜನರಿಗೆ ತಲಾ ಎರಡು ಎಕರೆಯಂತೆ ಒಟ್ಟು ೯೮ ಎಕರೆ ಭೂಮಿಯನ್ನು ದರಕಾಸ್ತು ಮೂಲಕ ಸರ್ಕಾರ ಮಂಜೂರು ಮಾಡಿತ್ತು. ಮಂಜೂರಾದ ಕೆಲವು ವರ್ಷಗಳ ಕಾಲ ದಲಿತರು ಭೂಮಿಯ ಸ್ವಾಧೀನಾನುಭವದಲ್ಲಿದ್ದು ಖಾತೆ ಪಹಣಿ ಮತ್ತು ಮಂಜೂರಾತಿ ಪತ್ರ ಎಲ್ಲವನ್ನು ಪಡೆದುಕೊಂಡಿದ್ದಾರೆ. ನಂತರ ವರ್ಷಗಳಲ್ಲಿ ಕಾಚಗೊಂಡನಹಳ್ಳಿಯ ಬಲಿಷ್ಟ ವರ್ಗಗಳು ಭೋವಿ

ಸಮುದಾಯದವರ ಮೇಲೆ ದೌರ್ಜನ್ಯ ಮಾಡಿ ಭೂಮಿ ಸ್ವಾಧೀನದಿಂದ ಒಕ್ಕಲೆಬ್ಬಿಸಿ ಕಬಳಿಸಿದ್ದಾರೆ ಎಂದು ಆರೋಪಿಸಿದರು.
ಆದ್ದರಿಂದ ಮೂಲ ಮಂಜೂರಾತಿದಾರರಾದ ದಲಿತರಿಗೆ ಭೂಮಿಯ ಸ್ವಾಧೀನವನ್ನು ವಾಪಾಸ್ಸು ಬಿಡಿಸಿಕೊಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಎಂ.ಏಳುಕೋಟಿ, ಮುಖಂಡರಾದ ಶಿವಬಸಪ್ಪ, ಚಂದ್ರಪ್ಪ, ಜೋಗಿ, ಬೊಮ್ಮನಕಟ್ಟೆ ಕೃಷ್ಣಪ್ಪ, ಹರಿಗೆ ರವಿ, ತಮ್ಮಯ್ಯ, ರಮೇಶ್ ಚಿಕ್ಕಮರಡಿ ಉಪಸ್ಥಿತರಿದ್ದರು.

Exit mobile version