Site icon TUNGATARANGA

ಅ.26 ಮತ್ತು 27 ರಂದು ಶಿವಮೊಗ್ಗದ ನಮ್ ಟೀಮ್ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ನೀನಾಸಂ ನಾಟಕೋತ್ಸವ

ಶಿವಮೊಗ್ಗ,ಅ.೨೪: ಶಿವಮೊಗ್ಗದ ನಮ್ ಟೀಮ್ ವತಿಯಿಂದ ಅ.೨೬ ಮತ್ತು ೨೭ರಂದು ಕುವೆಂಪು ರಂಗಮಂದಿರದಲ್ಲಿ ನೀನಾಸಂ ನಾಟಕೋತ್ಸವವನ್ನು ಆಯೋಜಿಸಲಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ನಮ್ ಟೀಮ್ ವತಿಯಿಂದ ನೀನಾಸಂ ನಾಟಕೋತ್ಸವವನ್ನು ಆಯೋಜಿಸಲಾಗುತ್ತಿದ್ದು, ಈಗಾಗಲೇ ರಾಜಾದಾದ್ಯಂತ ಪ್ರದರ್ಶನ ಕಂಡು ವೀಕ್ಷಕರ ಮೆಚ್ಚುಗೆ ಪಡೆದಿರುವ ಎರಡು ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ನಮ್‌ಟೀಮ್‌ನ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಕಳೆದ ೨೪ ವರ್ಷಗಳಿಂದ ಶಿವಮೊಗ್ಗವನ್ನು ಕೇಂದ್ರಿಕರಿಸಿ ರಂಗಚಟುವಟಿಕೆಯನ್ನು ಮಾಡುತ್ತಿರುವ ನಮ್‌ಟೀಮ್ ರಂಗತಂಡವು ಇಲ್ಲಿಯವರೆಗೆ ಶಿವಮೊಗ್ಗದಲ್ಲಿ ೩೭ ನಾಟಕೋತ್ಸವವನ್ನು ಆಯೋಜಿಸಿದ್ದು, ಸ್ವನಿರ್ಮಿತ ೪೬ ನಾಟಕಗಳನ್ನು ರಂಗದ ಮೇಲೆ ತಂದಿದೆ. ರಾಜ್ಯ ಮತ್ತು ಹೊರರಾಜ್ಯದಲ್ಲಿ ಇದುವರೆಗೆ ೨೪೫ ನಾಟಕಗಳ ಪ್ರದರ್ಶನ ಹಾಗೂ ಆಯೋಜನೆ ಮಾಡಿದೆ ಎಂದರು.


ಅ.೨೬ರಂದು ಸಂಜೆ ೬.೪೫ಕ್ಕೆ “ಮಾಲತೀಮಾಧವ” ನಾಟಕ ಪ್ರದರ್ಶನಗೊಳ್ಳಲಿದ್ದು, ಅಕ್ಷರ ಕೆ.ವಿ. ನಿರ್ದೇಶನ ಮಾಡಿದ್ದಾರೆ. ವಿದ್ಯಾ ಹೆಗಡೆ ಸಂಗೀತ ವಿನ್ಯಾಸ, ರಚನೆ ಭವಭೂತಿ, ಕನ್ನಡ ರೂಪಾಂತರವನ್ನು ಹೆಚ್.ಎಂ.ಗಣೇಶ್ ಹಾಗೂ ಕೆ.ಎಸ್.ಭಾರ್ಗವ ಮಾಡಿದ್ದಾರೆ ಎಂದರು.
ಅ.೨೭ರಂದು ಸಂಜೆ ೬.೪೫ಕ್ಕೆ “ಅಂಕದ ಪರದೆ” ನಾಟಕ ಪ್ರದರ್ಶನಗೊಳ್ಳಲಿದ್ದು, ಅಭಿರಾಮ್ ಭಡ್ಯಮ್ಕರ್‌ರಿಂದ ರಚನೆ, ಜಯಂತ್ ಕಾಯ್ಕಿಣಿ ಕನ್ನಡಕ್ಕೆ ರೂಪಾಂತರ, ನಿರ್ದೇಶನವನ್ನು ವಿದ್ಯಾನಿಧಿ ವನಾರಸೆ ಮಾಡಿದ್ದಾರೆ. ನೇರ ನಾಟಕ ಪ್ರದರ್ಶನಗಳು ನಡೆಯಲಿದ್ದು, ವೇದಿಕೆ ಕಾರ್ಯಕ್ರಮ ಇರುವುದಿಲ್ಲ ಎಂದರು.


ಒಂದು ನಾಟಕಕ್ಕೆ ಪ್ರವೇಶ ದರ ೧೦೦ ರೂ. ಎರಡು ನಾಟಕ್ಕಕ್ಕೆ ನಿಗಧಿಪಡಿಸಲಾಗಿದೆ. ಶಿವಮೊಗ್ಗದ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಮುಂಗಡ ಟಿಕೆಟ್ ಪಡೆಯಲು ೯೮೪೫೫ ೧೮೮೬೬ ಸಂಪರ್ಕಿಸಿ.
ಪತ್ರಿಕಾಗೋಷ್ಠಿಯಲ್ಲಿ ನಮ್‌ಟೀಮ್‌ನ ಖಜಾಂಚಿ ಸಮನ್ವಯ ಕಾಶಿ, ಹೊತ್ತಾರೆ ಶಿವು ಉಪಸ್ಥಿತರಿದ್ದರು.

Exit mobile version