Site icon TUNGATARANGA

ಕೋಮುವಾದಿ ಶಕ್ತಿಗಳ ವಿರುದ್ಧ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ/ನಾಡಿನ ಸಮಸ್ಯೆಗಳನ್ನು ಮರೆತಿರುವ ದುಷ್ಟ ರಾಜಕಾರಣಕ್ಕೆ ಕಡಿವಾಣ ಹಾಕಿ ಪ್ರಜಾಪ್ರಭುತ್ವವನ್ನು ರಕ್ಷಿಸಿ ಅಗ್ರಹ

ಶಿವಮೊಗ್ಗ: ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸುವ ಕೋಮುವಾದಿ ಶಕ್ತಿಗಳ ವಿರುದ್ಧ ದಲಿತ ಸಂಘರ್ಷ ಸಮಿತಿಯ(ಸಂಯೋಜಕ) ಕಾರ‍್ಯಕರ್ತರು ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಾಗರಿಕರ ಸಮಸ್ಯೆಗಳನ್ನು ಮರೆತು ಕಾಂಗ್ರೆಸ್ ವಿರುದ್ಧ ನಡೆಸುತ್ತಿರುವ ಸಂವಿಧಾನ ವಿರೋಧಿ ಚಟುವಟಿಕೆ ತಡೆಯಲು ಮಾರ್ಗಸೂಚನೆ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.


ಚುನಾಯಿತ ಪ್ರತಿನಿಧಿಗಳು ಮತ್ತು ಆಡಳಿತಾರೂಢ ಸರ್ಕಾರಗಳು ಸಮುದಾಯಗಳ ಸಾರ್ವಭೌಮತ್ವವನ್ನು ಕಾಪಾಡಬೇಕೇ ಹೊರತೂ ಅಶಾಂತಿಯನ್ನಲ್ಲ. ಸಾಮಾಜಿಕ ನ್ಯಾಯ ಸಿಗದೇ, ಮಾನವ ಹಕ್ಕುಗಳು ದೊರೆಯದೇ ಇರುವ ಸಂದರ್ಭದಲ್ಲಿ ಆ ಬಗ್ಗೆ ಹೋರಾಟ ಮಾಡುವುದು ಬಿಟ್ಟು ಸಲ್ಲದ ವಿಷಯಗಳಿಗೆ ಬಿಜೆಪಿ ಮತ್ತು ಜೆಡಿಎಸ್ ಪ್ರತಿಭಟನೆ ಮಾಡುತ್ತಿವೆ ಎಂದು ದೂರಿದರು.


ಕೋಮುವಾದಿಗಳ ಪ್ರಾಬಲ್ಯ ಹೆಚ್ಚಾಗುತ್ತಿದೆ. ಇದನ್ನು ಮಣಿಸಲು ಪ್ರಗತಿಪರ ಮತ್ತು ಅಹಿಂದ ದಲಿತ ಸಂಘಟನಗಳು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಇದನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸುವ ದೃಷ್ಟಿಯಿಂದ ಮುಡಾದಂತಹ ಹಗರಣ ಹುಟ್ಟು ಹಾಕಿವೆ ಎಂದು ದೂರಿದರು.


ಕೂಡಲೇ ಬೀದಿ ರಂಪಾಟದಲ್ಲಿ ತೊಡಗಿರುವ ದ್ವೇಷ ರಾಜಕೀಯ ಮಾಡುತ್ತಿರುವ, ನಾಡಿನ ಸಮಸ್ಯೆಗಳನ್ನು ಮರೆತಿರುವ ಇಂತಹ ದುಷ್ಟ ರಾಜಕಾರಣಕ್ಕೆ ಕಡಿವಾಣ ಹಾಕಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ವಿ. ನಾಗರಾಜ್, ಎಲ್. ರಾಜು, ಅಣ್ಣಯ್ಯ, ಜಗದೀಶ್, ವಿರೂಪಾಕ್ಷಪ್ಪ ಮತ್ತಿತರರು ಇದ್ದರು.

Exit mobile version