Site icon TUNGATARANGA

ಸರ್ಕಾರ ಯಾವ ಮುಖ ಇಟ್ಟು ಈ ಜಯಂತಿ ಆಚರಿಸುತ್ತಿದೆ : ಮಾಜಿ ಗೃಹಮಂತ್ರಿ ಆರಗಜ್ಞಾನೇಂದ್ರ

ಶಿವಮೊಗ್ಗ,ಅ.೧೭: ವಾಲ್ಮೀಕಿ ಜಯಂತಿ ಈ ಬಾರಿ ಅದ್ಧೂರಿಯಾಗಿ ಆಚರಿಸಿದೆ. ವಿಶೇಷವಾಗಿ ಜಾಹಿರಾತು ನೀಡಿದ್ದು, ಅನೇಕ ಕಾರ್ಯಕ್ರಮಗಳನ್ನು ಘೋಷಿಸಿದೆ. ಆದರೆ ಸರ್ಕಾರ ಯಾವ ಮುಖ ಇಟ್ಟು ಈ ಜಯಂತಿ ಆಚರಿಸುತ್ತಿದೆ ಎಂದು ಮಾಜಿ ಗೃಹಮಂತ್ರಿ ಆರಗಜ್ಞಾನೇಂದ್ರ ಹೇಳಿದ್ದಾರೆ.


ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಲೆಕ್ಕಾಧಿಕಾರಿ ಚಂದ್ರಶೇಖರ್, ಆತ್ಮಹತ್ಯೆ ಮಾಡಿಕೊಂಡ ಪರಿಣಾಮ ಈ ನಿಗಮದ ಅವ್ಯವಹಾರ ಬೆಳಕಿಗೆ ಬಂದಿದೆ. ಆದ್ದರಿಂದ ಸರ್ಕಾರ ಮೊದಲು ರಾಜ್ಯದ ಜನರ ಕ್ಷಮೆ ಕೇಳಿ ಬಳಿಕ ವಾಲ್ಮೀಕಿ ಜಯಂತಿ ಆಚರಣೆ ಮಾಡಬೇಕಿತ್ತು ಎಂದರು.
ಮೊದಲು ಮುಖ್ಯಮಂತ್ರಿಗಳು ಹಗರಣವೇ ನಡೆದಿಲ್ಲ,ಮಂತ್ರಿಗಳು ಭಾಗಿಯಾಗಿಲ್ಲ ಎಂದರು. ಚಂದ್ರಶೇಖರ್ ಅವರ ಡೆತ್ ನೋಟ್‌ನಲ್ಲಿ ಮಂತ್ರಿಗಳ ಹೆಸರು ಇತ್ತು, ಆದರೂ ತನಿಖೆಗೆ ಎಸ್‌ಐಟಿ ನೇಮಕ ಮಾಡಿ ಎಫ್‌ಐಆರ್‌ನಲ್ಲಿ ಮಂತ್ರಿಗಳ ಹೆಸರು ಕೈಬಿಡಲಾಗಿತ್ತು. ಇ.ಡಿ. ಈ ಪ್ರಕರಣಕ್ಕೆ ಕೈಹಾಕಿದ ಮೇಲೆ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದ್ದು, ಅದರಲ್ಲಿ ಸಚಿವ ನಾಗೇಂದ್ರರೇ ಈ ಪ್ರಕರಣದ ಕಿಂಗ್‌ಪಿನ್ ಹೇಳಿದೆ.

೮೭ಕೋಟಿ ಹಗರಣ ಹಾಗಿದ್ದು ನಿಜ ಎಂದು ಸ್ವತಃ ಮುಖ್ಯಮಂತ್ರಿಗಳೇ ಸದನದಲ್ಲಿ ಹೇಳಿಕೆ ನೀಡಿದ್ದಾರೆ. ಇ.ಡಿ.ಚಾರ್ಜ್‌ಶೀಟ್‌ನಲ್ಲಿ ೧೪.೮ ಕೋಟಿ ರೂ., ಬಳ್ಳಾರಿ ಶಾಸಕರಾದ ಭರತ್ ರೆಡ್ಡಿ, ಕಂಪ್ಲಿ ಶಾಸಕ ಗಣೇಶ್, ಕೂಡ್ಲಿಗೆ ಶಾಸಕ ಶ್ರೀನಿವಾಸ್ ಅವರ ಮೂಲಕ ಮತದಾರರಿಗೆ ಹಂಚಲಾಗಿದೆ ಎಂದು ದಾಖಲೆ ಸಹಿತ ಇ.ಡಿ.ಹೇಳಿದೆ. ಆದರೆ, ಎಸ್.ಐ.ಟಿ., ಚಾರ್ಜ್‌ಶೀಟ್‌ನಲ್ಲಿ ಯಾವುದೇ ಅಂಶಗಳಿಲ್ಲದೆ ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಅದಕ್ಕಾಗಿಯೇ ಬಿಜೆಪಿ ಈ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿದೆ ಅಲ್ಲದೆ, ತೆಲಂಗಾಣದ ಹಲವು ಬೇನಾಮಿ ಖಾತೆಗಳಿಗೆ ನಿಗಮದ ಹಣ ಜಮಾ ಯಾಗಿದೆ ಎಂದರು.


ಮೃತ ಚಂದ್ರಶೇಖರ್ ಪತ್ನಿ, ಹೇಳಿಕೆಯನ್ನು ಮೂರು ಬಾರಿ ಬದಲಾಯಿಸಲಾಗಿದೆ. ಶಿವಮೊಗ್ಗದ ಡಿ.ವೈ.ಎಸ್.ಪಿ. ಅವರು ತಾವೇ ಹೇಳಿಕೆಯನ್ನು ಬರೆದು ಚಂದ್ರಶೇಖರ್ ಪತ್ನಿಯ ಸಹಿ ಹಾಕಿಸಿಕೊಂಡಿದ್ದಾರೆ. ಡೆತ್‌ನೋಟ್ ಅನ್ವಯ ಎಫ್.ಐ.ಆರ್. ದಾಖಲಿಸಿಲ್ಲ ಎಂದರು.
ವಾಲ್ಮೀಕಿ ಸಮುದಾಯದ ಗಂಗಾ ಕಲ್ಯಾಣ ಯೋಜನೆ, ವಿದ್ಯಾರ್ಥಿ ವೇತನ, ಭೂಮಿ ಖರೀದಿಗೆ ಸಹಾಯ ಧನ, ಮಾರ್ಚ್ ಅಂತ್ಯದೊಳಗೆ ನೀಡಬೇಕಿತ್ತು. ಅದನ್ನು ನಿಗಮದಿಂದ ನೀಡದೆ ಆ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ . ಈ ಸರ್ಕಾರ ಭ್ರಷ್ಟ ಸರ್ಕಾರವಾಗಿದ್ದು, ಅಭಿವೃದ್ಧಿ ಶೂನ್ಯ ಸರ್ಕಾರವಾಗಿದೆ. ಗುತ್ತಿಗೆದಾರರಿಗೆ ಹಣ ನೀಡದೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಗನವಾಡಿ ಕಾರ್ಯಕರ್ತರಿಗೆ ವೇತನ ಬಿಡುಗಡೆಯಾಗಿಲ್ಲ. ಗ್ಯಾರಂಟಿ ಕೂಡ ವಿಫಲವಾಗಿದೆ ಎಂದರು.


ಸಚಿವ ನಾಗೇಂದ್ರ ಇ.ಡಿ. ವಿರುದ್ದ ನೀಡಿದ್ಧ ಹೇಳಿಕೆ ಅವರ ಜಾಮೀನಿನ ಮೇಲೆ ಪರಿಣಾಮ ಬೀರಲಿದೆ. ಅವರ ಜಾಮೀನು ರದ್ಧತಿಗೆ ನಾವು ಪ್ರಯತ್ನಿಸುತ್ತೇವೆ. ಮುಂಬರುವ ಮೂರುಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಎನ್‌ಡಿಎ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಪ್ರಮುಖರಾದ ಎಸ್.ದತ್ತಾತ್ರಿ, ಜ್ಞಾನೇಶ್ವರ್, ಶಿವರಾಜ್, ಚಂದ್ರಶೇಖರ್, ಅಣ್ಣಪ್ಪ ಮೊದಲಾದವರು ಇದ್ದರು.

Exit mobile version