ಶಿವಮೊಗ್ಗ: ನದಿಯ ಶುದ್ಧತೆ ಮತ್ತು ಪಾವಿತ್ರ್ಯತೆ ಕಾಪಾಡುವ ಉದ್ದೇಶದಿಂದ ನಿರ್ಮಲ ತುಂಗಾಭದ್ರಾ ಅಭಿಯಾನ ಶಿವಮೊಗ್ಗ ವತಿಯಿಂದ ನಡೆಸುತ್ತಿರುವ ಜಲಜಾಗೃತಿ, ಜನಜಾಗೃತಿ ಹಾಗೂ ಪಾದಾಯಾತ್ರೆಗೆ ಬೆಂಬಲ, ಸಹಕಾರ ನೀಡುವಂತೆ ಅಭಿಯಾನದ ಪದಾಧಿಕಾರಿಗಳು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಸೇರಿದಂತೆ ಆಡಳಿತ ಮಂಡಳಿಗೆ ಕೋರಿದರು.
ನಗರ, ಪಟ್ಟಣ, ಗ್ರಾಮಗಳಲ್ಲಿ ತ್ಯಾಜ್ಯ ನೀರು ನದಿಗೆ ನೇರವಾಗಿ ಸೇರದಂತೆ ಎಲ್ಲ ಕಡೆಗಳಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪನೆ ಮಾಡಲು ಒತ್ತಾಯಿಸುವುದು. ತುಂಗಾ, ಭದ್ರಾ ನದಿಗಳ ಪಾವಿತ್ರ್ಯತೆ ಕಾಪಾಡುವುದು. ನದಿಗಳಲ್ಲಿ ನೀರಿನ ಹರಿವು ಇರುವಂತೆ ಯೋಜನೆ ರೂಪಿಸಲು ಸರ್ಕಾರಕ್ಕೆ ಒತ್ತಾಯಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಶೃಂಗೇರಿಯಿಂದ ಕಿಷ್ಕಿಂದೆ ತನಕ ಪಾದಾಯಾತ್ರೆ ನಡೆಸಲಾಗುತ್ತಿದೆ ಎಂದು ಅಭಿಯಾನದ ಪದಾಧಿಕಾರಿಗಳು ತಿಳಿಸಿದರು.
ಜಲಚರ ಸಂತತಿಗಳ ನಾಶವಾಗುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲು ಒತ್ತಾಯಿಸುವುದು. ನದಿ ನೀರಿನ ಗುಣಮಟ್ಟವನ್ನು ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಡಿಸಬೇಕು. ಶುದ್ಧತೆಯಲ್ಲಿ ವ್ಯತ್ಯಯ ಕಂಡುಬಂದರೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವುದು. ಸಾರ್ವಜನಿಕರಲ್ಲಿ ಜಲ ಜಾಗೃತಿ ಮತ್ತು ಸ್ವಚ್ಛತೆ ಜಾಗೃತಿ ಮೂಡಿಸುವುದು. ತುಂಗಾಭದ್ರಾ ನದಿ ನೀರು ಕಲುಷಿತವಾಗುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಪಶ್ಚಿಮಘಟ್ಟ ಅಧ್ಯಯನ ಕೇಂದ್ರ ಸ್ಥಾಪಿಸುವಂತೆ ಕೋರಿಕೆ ಸಲ್ಲಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಜಂಟಿ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಾಂಚಿ ಆರ್.ಮನೋಹರ, ರಮೇಶ್ ಹೆಗಡೆ, ನಿರ್ಮಲ ತುಂಗಾಭದ್ರಾ ಅಭಿಯಾನ ಶಿವಮೊಗ್ಗದ ಪ್ರೊ. ಬಿ.ಎಂ.ಕುಮಾರಸ್ವಾಮಿ, ಎಂ.ಶಂಕರ್, ತ್ಯಾಗರಾಜ್, ದಿನೇಶ್ ಶೇಠ್, ಬಾಲಕೃಷ್ಣನಾಯ್ಡು ಇತರರಿದ್ದರು.