ಶಿವಮೊಗ್ಗ: ಮಕ್ಕಳಲ್ಲಿ ಹಬ್ಬದ ಬಗ್ಗೆ ದಸರಾ ಕುರಿತಾದ ಸಂಗತಿಗಳನ್ನು ತಿಳಿಸಲು ಮಕ್ಕಳ ದಸರಾ ಆರಂಭಿಸಲಾಯಿತು. ನಾಡಹಬ್ಬದ ಸಂದರ್ಭದಲ್ಲಿ ಮಕ್ಕಳಿಗೆ ಏನೇನು ತಿಳಿಸಬೇಕು ಎಂಬ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಮಕ್ಕಳ ದಸರಾ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಈ ಬಾರಿಯೂ ಶಿವಮೊಗ್ಗ ದಸರಾದಲ್ಲಿ ಸಾಂಸ್ಕೃತಿ ಮೆರುಗು ನೀಡಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ಮಕ್ಕಳ ಯಶಸ್ಸಿಗೆ ಶ್ರಮಿಸಿದೆ. ಈ ಮಕ್ಕಳು ಮುಂದೆ ಸಾಧನೆ ಮಾಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಒಂದಷ್ಟು ಕೊರತೆ ಆಗಿದೆ. ಚುನಾಯಿತ ಪ್ರತಿನಿಧಿಗಳು ಇಲ್ಲ. ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಪಾಲಿಕೆಯಿಂದ ಶಿವಮೊಗ್ಗ ದಸರಾ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಮಕ್ಕಳಿಗೆ ಶುಭವಾಗಲಿ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ಶಿವಮೊಗ್ಗ ದಸರಾ ನಮಗೆ ದೊರೆತ ಭಾಗ್ಯ. ಇಡೀ ನಗರವನ್ನು ಸಾಂಸ್ಕೃತಿಕವಾಗಿ ಸಂಚಲನಗೊಳಿಸಿದೆ. ಮಕ್ಕಳು, ಪೋಷಕರು, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸೇರುವುದೇ ಅಪರೂಪ
ಸಾಂಸ್ಕೃತಿಕ ವಾತಾವರಣದಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕಿದೆ. ಮಕ್ಕಳು ಹಾಡು, ಅಭಿನಯ, ಜನಪದ, ಆಟ, ಅಂಕಗಳ ಪ್ರತಿಭೆಯನ್ನು ಮಕ್ಕಳು ದಸರಾದಲ್ಲಿ ಅನಾವರಣಗೊಳಿಸಿದ್ದಾರೆ. ಸಂಸ್ಕೃತಿ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ತಾಯಿ ಬೇರು ಮಾತೃ ಭಾಷೆ ಕನ್ನಡ ಮರೆಯುತ್ತಿದ್ದೇವೆ. ಮಕ್ಕಳಿಗೆ ತಾಯಿ ಭಾಷೆ ಕಲಿಸಬೇಕು.
ಫೆ. ೨೨ ರನ್ನು ವಿಶ್ವ ಮಾತೃ ಭಾಷೆ ದಿನಾಚರಣೆ, ಪ್ರಪಂಚದಲ್ಲಿ ಸುಮಾರು ೮ ಸಾವಿರ ಭಾಷೆಗಳಿದ್ದು, ಅವುಗಳು ಉಳಿಯಬೇಕೆಂಬುದು ಇದರ ಉದ್ದೇಶ. ಮಕ್ಕಳಿಗೆ ಸರಿಯಾಗಿ ಮಾತೃ ಭಾಷೆ ತಿಳಿಸಿದರೆ ಪ್ರತಿಭೆ ಹೊರತರಲು ಸಾಧ್ಯ. ಶಿಕ್ಷಣ ಅಂಕಗಳ ಹಿಂದೆ ಓಡುತ್ತಿದೆ. ಗುಣಮಟ್ಟ ಸಾಧ್ಯವಾಗುತ್ತಿಲ್ಲ. ಇಂತಹ ತರಾತುರಿ ಬಿಟ್ಟು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.
ಆರ್ಯಸ್ವರೂಪ್, ಸಮರ್ಥ ಎಸ್. ಪೂಜಾರ್, ಬಿನು ಹೆಚ್.ಪಿ., ಬಿಇಒ ರಮೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ನಿರಂಜನ್ ಮೊದಲಾದವರು ಇದ್ದರು.
ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹೆಚ್ಚು ಅಂಕ ಪಡೆದ ಮಕ್ಕಳನ್ನು ಸನ್ಮಾನಿಸಲಾಯಿತು.