Site icon TUNGATARANGA

Tunga Taranga Web Exclusive| ಪಾಲಿಕೆಯ ಮೇಯರ್‌ಗಿರಿಗೆ ಮಾತುಗಾರ ಚೆನ್ನಿ…?!

ಬಿಜೆಪಿ ಪ್ರಮುಖರ ಸದ್ದಿಲ್ಲದ ಮಾತುಕತೆ…!


ಶಿವಮೊಗ್ಗ,ಜ.30: ಹಳ್ಳ ಹಿಡಿದಿರುವ ಸ್ಮಾರ್ಟ್ ಸಿಟಿ ಕಾಮಗಾರಿಯ ಬಗ್ಗೆ ವಿರೋಧದ ಮಾತುಗಳು ಹೆಚ್ಚಾಗುವ ಮುನ್ನ ಮಾತುಗಾರರೊಬ್ಬರನ್ನು ಪಾಲಿಕೆಯ ಚುಕ್ಕಾಣಿಗೆ ಬಿಟ್ಟರೆ ಅನಗತ್ಯ ಮಾತುಗಳಿಗೆ ನಮ್ಮಿಂದ ಸಮಜಾಯಿಷಿ ನೀಡಲು ಸಾಧ್ಯ ಎಂದು ಭಾರತೀಯ ಜನತಾ ಪಕ್ಷ ಬರುವ ಪಾಲಿಕೆ ಮೇಯರ್ ಸ್ಥಾನಕ್ಕೆ ಬಿಜೆಪಿ ಜಿಲ್ಲಾ ಮುಖಂಡ ಎಸ್. ಚನ್ನಬಸಪ್ಪ (ಚೆನ್ನಿ) ಅವರನ್ನು ಕೂರಿಸಲು ಮುಂದಾಗಿದೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ.
ನಿನ್ನೆಗೆ ಅಧಿಕಾರವಧಿ ಮುಗಿಸಿದ ಮೇಯರ್ ಸುವರ್ಣ ಶಂಕರ್ ಹಾಗೂ ಉಪಮೇಯರ್ ಸುರೇಖಾ ಮುರುಳೀಧರ್ ಕೊರೊನಾದ ಸಂಕಷ್ಟ ಕಾಲದಲ್ಲೂ ಅತ್ಯಂತ ಸಮರ್ಥವಾಗಿ ಆಡಳಿತ ನಡೆಸಿದರೆನ್ನಬಹುದು. ಆದರೆ ಈ ಸಂಕಷ್ಟದ ಅವಧಿಯ ಜೊತೆ ಸ್ಮಾರ್ಟ್ ಸಿಟಿ ಕಾಮಗಾರಿ ಹಾಗೂ ನಗರದ ನಾನಾ ಕಿರಿಕಿರಿಯ ಸಂಗತಿಗಳಿಗೆ ಜನರ ಹಾಗೂ ವಿರೋಧಪಕ್ಷಗಳ ಮಾತಿಗೆ ಉತ್ತರಿಸುವಲ್ಲಿ ಸೋತರೆನ್ನಬಹುದು. ಇದು ಮಹಾನಗರಪಾಲಿಕೆ ಸಭೆಗಳಲ್ಲಿ ಕಂಡುಬರುತ್ತಿತ್ತು. ವಿರೋಧ ಪಕ್ಷದ ನಾಯಕರಾಗಿ ಯೋಗೇಶ್  ಅವರ ತಂಡದ ಕಾರ್ಯ ಹೌದೆನ್ನುವಂತಿತ್ತು.
ಈ ಎಲ್ಲಾ ಒಡನಾಟದ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಪ್ರಮುಖರು ಮತ್ತೆ ಚನ್ನಬಸಪ್ಪರಿಗೆ ಮಣೆ ಹಾಕಲು ಮುಂದಾಗಿದಾರೆನ್ನಲಾಗಿದೆ. ಇಲ್ಲಿ ಅವಕಾಶವಿದ್ದರೂ ಸುಮ್ಮನೆ ಕೂರಬೇಕಾದ ಪರಿಸ್ಥಿತಿ ಜ್ಞಾನೇಶ್ವರ್ ಅವರದಾಗಿದೆ. ಸೂಡಾದ ವಾಜಪೇಯಿ ಬಡಾವಣೆ ಅವ್ಯವಹಾರದ ವಿಷಯದಲ್ಲಿ ಅವರೂ ಸಿಕ್ಕಿಕೊಂಡಿದ್ದು, ಅಧಿಕಾರ ಪಡೆಯುವ ಅವಕಾಶವಿಲ್ಲವೆನ್ನಲಾಗಿದೆ.


ಅಂತೆಯೇ ಕಳೆದ ಚುನಾವಣೆಯ ಹೊತ್ತಿನಲ್ಲಿ ಸುವರ್ಣ ಶಂಕರ್ ಅವರ ವಿರುದ್ದ ಹೋರಾಟಕ್ಕಿಳಿದಿದ್ದ ಅನಿತಾರವಿಶಂಕರ್ ಸಹ ಮೇಯರ್ ಗಿರಿಯತ್ತ ನೋಡುತ್ತಿದ್ದಾರೆ. ಆದರೆ ವಿರೋಧ ಪಕ್ಷ ಕ್ರಿಯಾಶೀಲವಾಗಿರುವಾಗ ಪಕ್ಷವನ್ನು ಹಾಗೂ ಜನಪ್ರತಿನಿಧಿಗಳನ್ನು ಉಳಿಸಿಕೊಳ್ಳುವ ಕಾರ್ಯದಲ್ಲಿ ಅನಿತಾ ಅವರು ಆಕ್ಟೀವ್ ಆಗಿ ವರ್ತಿಸಬಲ್ಲರೇ…? ಇನ್ನು ಸುನೀತಾ ಅಣ್ಣಪ್ಪ ಹೆಸರೂ ಸಹ ಸ್ಪೀಡಾಗಿ ಓಡಾಡುತ್ತಿದೆಯಾದರೂ ಈಗಷ್ಟೆ ಇಬ್ಬರು ಮಹಿಳೆಯರಿಗೆ ಅಧಿಕಾರ ನೀಡಿದ್ದು ಇಲ್ಲಿ ಚರ್ಚಿತವಾಗುತ್ತಿದೆ.
ಮತ್ತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಈಶ್ವರಪ್ಪ ತಂಡದ ನಡುವೆ ಪೈಪೋಟಿ ನಡೆಯುವುದೇ..? ಸಂಸದ ರಾಘವೇಂದ್ರ ಅವರು ಹೇಗೆ ಹೆಜ್ಜೆ ಇಡಲಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರವಾಗಿ ಇಂತಹೊಂದು ಒಳ ನಿರ್ಧಾರ ಆಗಿದೆ ಎನ್ನಲಾಗುತ್ತಿದೆ. ವಿರುದ್ದದ ಮಾತುಗಳಿಗೆ ಗಟ್ಟಿಯಾಗಿ ಸಮಜಾಯಿಷಿ ನೀಡುವವರ ಹುಡುಕಾಟವೇ ಮುಖ್ಯವೆನ್ನಲಾಗಿದೆ. ಮೀಸಲಾತಿ ಬಹುತೇಕ ಸಾಮಾನ್ಯಕ್ಕೆ ಮೀಸಲಾಗಲಿದೆ ಎನ್ನಲಾಗುತ್ತಿದೆ.


ಲೋಕಾಯುಕ್ತ ವರದಿಯ ಅಂಗೀಕಾರ ಸರ್ಕಾರದಿಂದ ಅಸಾಧ್ಯವೇ ಹೌದು. ಏಕೆಂದರೆ ಆಡಳತ ಪಕ್ಷ ತನ್ನವರನ್ನು ಹೇಗೆ ತಾನೇ ತಪ್ಪಿತಸ್ಥ ಸ್ಥಾನದಲ್ಲಿ  ನಿಲ್ಲಿಸಲು ಸಾಧ್ಯ…? ಆ ವರದಿಗೆ ಗೌರವಿಸುವ ಅದರನ್ವಯ ಜನಪ್ರತಿನಿಧಿಯಾದವರು ನಡೆದು ಕೊಳ್ಳುವ ಮನೋಭಾವ ಬೆಳೆಯಬೇಕಿದೆ. ಅದು ಬಿಜೆಪಿಯಲ್ಲಿ ಅಸಾಧ್ಯವೆನ್ನಲು ಈಗಲೂ ಕುರ್ಚಿಯನ್ನು ಅಪ್ಪಿ ಹಿಡಿದವರು ಬಿಡಲೊಪ್ಪುತ್ತಿಲ್ಲವಲ್ಲವೇ…? ಇನ್ನಷ್ಟು ಹುಡುಕಾಟದ ಸುದ್ದಿಯೊಂದಿಗೆ ಮತ್ತೆ ಸಿಗೋಣ.

Exit mobile version