ನಿರ್ಮಿಸಲು ಒತ್ತು ನೀಡಲಾಗುತ್ತಿದೆ
ಶಿವಮೊಗ್ಗ : ಅಕ್ಟೋಬರ್ ೦೪ : : ಇತ್ತೀಚಿನ ದಿನಗಳಲ್ಲಿ ಸರ್ಕಾರವು ಆಡಳಿತದ ಅನುಕೂಲಕ್ಕಾಗಿ ನಿರ್ಮಿಸಲಾಗುತ್ತಿರುವ ವಿವಿಧ ಇಲಾಖೆಗಳ ಕಟ್ಟಡವನ್ನು ಆತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಶುದ್ಧ ಗಾಳಿ, ಬೆಳಕು ಇರುವಂತೆ ವಿನ್ಯಾಸವನ್ನು ರೂಪಿಸಿ ಕಟ್ಟಡಗಳ
ನಿರ್ಮಿಸಲು ಒತ್ತು ನೀಡಲಾಗುತ್ತಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಲೋಕೋಪಯೋಗಿ ಇಲಾಖೆಯು ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ೧೫ಕೋಟಿ ರೂ.ಗಳ ವೆಚ್ಚದಲ್ಲಿ ಮೂರು ಅಂತಸ್ತಿನಲ್ಲಿ ನಿರ್ಮಿಸಲಾದ ೨೪ ಮನೆಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು. ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಿದಾಗ
ಅನೇಕ ಲೋಪಗಳನ್ನು ಗಮನಿಸಿ, ಸಾರ್ವಜನಿಕರು ಮಾತನಾಡಿಕೊಳ್ಳುವುದನ್ನು ಗಮನಿಸಿದ್ದೇವೆ. ಆದರೆ, ಪ್ರಸ್ತುತ ನಿರ್ಮಿಸಲಾಗಿರುವ ಕಟ್ಟಡ ಉತ್ತಮ ಗುಣಮಟ್ಟದಿಂದ ಕೂಡಿರುವುದನ್ನು ಗಮನಿಸಬಹುದಾಗಿದೆ ಅಲ್ಲದೆ,
ಅದರ ಮೇಲುಸ್ತುವಾರಿ ಹಾಗೂ ನಿರ್ವಹಣೆಗೆ ಗಮನಹರಿಸಲಾಗಿದೆ. ವಿಶೇಷವಾಗಿ ಈ ಕಟ್ಟಡವು ಅತ್ಯಂತ ವಿಶಾಲವಾಗಿದ್ದು, ಶುದ್ಧ ಗಾಳಿ ಮತ್ತು ಬೆಳಕಿನಿಂದ ಕೂಡಿದೆ ಎಂದರು.
ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ-ಸಿಬ್ಬಂಧಿಗಳು ಊರಿಂದೂರಿಗೆ ವರ್ಗಾವಣೆಗೊಂಡು ಬರುವ ಸಂದರ್ಭದಲ್ಲಿ ಉತ್ತಮ ವಸತಿ ಗೃಹ ಲಬಿಸದಿದ್ದಲ್ಲಿ ಅಸಂತುಷ್ಟರಾಗುವುದು ಸಹಜವಾಗಿದೆ. ನೌಕರರಿಗೆ ಉತ್ತಮವಾದ ವಸತಿಗೃಹ ಲಬ್ಯವಾಗಿದ್ದಾಗ, ಅವರ ನೆಮ್ಮದಿಯ ಬದುಕಿಗೆ ಅನುಕೂಲವಾಗಿ, ತಮ್ಮ ಕಾರ್ಯಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಅಂತೆಯೇ ಪೊಲೀಸ್ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳಿಗೂ ವಸತಿಗೃಹಗಳ ತುರ್ತು ಅಗತ್ಯವಿರುವುದನ್ನು ಗಮನಿಸಲಾಗಿದ್ದು, ಶೀಘ್ರದಲ್ಲಿ ಅವರ ವಸತಿಗೃಹ ನಿರ್ಮಾಣದ ಬಗ್ಗೆಯೂ ಕ್ರಮವಹಿಸಲಾಗುವುದು ಎಂದ ಅವರು, ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ ಅಲ್ಲದೇ ಇನ್ನಷ್ಟು ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಕೆ.ಪಿ.ಎಸ್.ಮಾದರಿ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ ೩ಕೋಟಿ ರೂ.ಗಳಿಂದ ೧೦ಕೋಟಿ ರೂ.ಗಳವರೆಗೆ ಸಿ.ಎಸ್.ಆರ್.ನಿಧಿಯನ್ನು ಬಳಸಿಕೊಂಡು ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಪ್ರೋ ಸಂಸ್ಥೆಯ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಸಹಯೋಗದೊಂದಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ಒಂದರಿಂದ ಹತ್ತನೆಯ ತರಗತಿಯವರೆಗಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಲ್ಲಾ ಮಕ್ಕಳಿಗೆ ವಾರದ ಆರು ದಿನಗಳ ಕಾಲ ಪೌಷ್ಟಿಕ ಆಹಾರ ಮೊಟ್ಟೆ
ನೀಡುವ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರತಿಭಾವಂತ ಶಿಕ್ಷಕರಿದ್ದು, ದೈನಂದಿನ ಪಠ್ಯ ಚಟುವಟಿಕೆಗಳು
ನಿರಂತರವಾಗಿವೆ. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಇನ್ನಷ್ಟು ರಚನಾತ್ಮಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು. ಮಕ್ಕಳಲ್ಲಿ ಭವಿಷ್ಯದ ಭರವಸೆ ಮೂಡಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡುತ್ತಿದೆ ಎಂದ
ಅವರು, ಮಕ್ಕಳು ಸತ್ಪ್ರಜೆಗಳಾಗಲು ಶಿಕ್ಷಣದ ಅಗತ್ಯವಿದ್ದು, ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯೆ ಶ್ರೀಮತಿ ಬಲ್ಕಿಶ್‌ಬಾನು, ಮುಖಂಡರಾದ ಆರ್.ಪ್ರಸನ್ನಕುಮಾರ್, ಬೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಸೂಪರಿಂಟೆಂಡೆಂಟ್ ಇಂಜಿನಿಯರ್ ಗಣೇಶ್ ವಿಜಯಕುಮಾರ್, ನಾಗೇಶ್, ಕೃಷ್ಣರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.