Site icon TUNGATARANGA

ಶಿವಮೊಗ್ಗ | ಜಿ.ಎಸ್.ಟಿ. ಸರಳೀಕರಣಗೊಳಿಸಲು ಆಗ್ರಹಿಸಿ ಪ್ರತಿಭಟನೆ

ಶಿವಮೊಗ್ಗ: ಜಿ.ಎಸ್.ಟಿ. ಕಾಯ್ದೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ಮತ್ತು ವ್ಯಾಪಾರಸ್ಥರ ಮೇಲಿನ ಹೊರೆಯನ್ನು ತಗ್ಗಿಸಿ ಸರಳೀಕರಣಗೊಳಿಸಲು ಆಗ್ರಹಿಸಿ, ರಾಷ್ಟ್ರವ್ಯಾಪಿ ಏಕಕಾಲದಲ್ಲಿ ಪ್ರತಿಭಟನೆಗೆ ನೀಡಿದ ಕರೆಯಂತೆ ಶಿವಮೊಗ್ಗ ಜಿಲ್ಲಾ ಟ್ಯಾಕ್ಸ್ /ಅಸೋಸಿಯೇಷನ್, ತೆರಿಗೆ ಸಲಹೆಗಾರರ ಸಂಘ, ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಲೆಕ್ಕಪತ್ರ ಪರಿಶೋಧಕರ ಸಂಘ, ಕರ್ನಾಟಕ ತೆರಿಗೆದಾರರ ಸಂಘದ ವತಿಯಿಂದ ಇಂದು ಅಶ್ವಥ್ ನಗರದಲ್ಲಿರುವ ಸೆಂಟ್ರಲ್ ಜಿ.ಎಸ್.ಟಿ. ಕಛೇರಿ ಮುಂದೆ ಮತ್ತು ಗೋಪಾಳದ ಎಸ್‌ಜಿ ಎಸ್‌ಟಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹಾಗೂ ಪ್ರಧಾನ ಮಂತ್ರಿಗಳಿಗೆ ಹಾಗೂ ಜಿಎಸ್‌ಟಿ ಕೌನ್ಸಿಲ್ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿ.ಎಸ್.ಟಿ. ಜಾರಿಗೆ ಬಂದಾಗ ವ್ಯಾಪಾರಸ್ಥರು ಸಹಜವಾಗಿಯೇ ಸ್ವಾಗತಿಸಿದ್ದರು. ಆದರೆ ಇತ್ತೀಚೆಗೆ ಜಿ.ಎಸ್.ಟಿ.ಯಲ್ಲಿ ಹೊಸ ಹೊಸ ಕಾಯ್ದೆಗಳು, ತಿದ್ದುಪಡಿಗಳು, ಆದೇಶಗಳು ಹೆಚ್ಚಾಗಿದ್ದು ಇದು ವ್ಯಾಪರಸ್ಥರಿಗೆ ತೆರಿಗೆ ಕಟ್ಟುವವರಿಗೆ ಕಿರಿ ಕಿರಿಯನ್ನುಂಟುಮಾಡಿದೆ. ಇದರಿಂದ ಕೈಗಾರಿಕೋದ್ಯಮಿಗಳಲ್ಲಿ ತಳ ಮಳ ಆರಂಭವಾಗಿದೆ. ಈ ಬದಲಾವಣೆಯ ಕಾನೂನುಗಳನ್ನು ಪಾಲಿಸುವುದಕ್ಕಿಂತ ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಯೋಚಿಸತೊಡಗುತ್ತಿದ್ದಾರೆ ಎಂದರು.
ಇದನ್ನ ವಿರೋಧಿಸಿ ಜಿ.ಎಸ್.ಟಿ.ಯನ್ನು ಸರಳೀಕರಣಗೊಳಿಸಲು ಆಗ್ರಹಿಸಿ ಕೆಲವು ನಿಯಮ ಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಜಿ.ಎಸ್.ಟಿ.ಗೆ ಮರು ರೂಪಕೊಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಈ ಹಿನ್ನಲೆಯಲ್ಲಿ ಈಡೀ ರಾಷ್ಟ್ರದ್ಯಂತ ಸಣ್ಣ ಮತ್ತು ವ್ಯಾಪರಸ್ಥರು, ವಾಣಿಜ್ಯೋದ್ಯಮಿಗಳು, ವಿವಿಧ ತೆರಿಗೆ ಸಲಹೆಗಾರರು ದೇಶದ ಉದ್ದಗಲಕ್ಕೂ ಶಾಂತ ರೀತಿಯಾಗಿ ಪ್ರತಿಭಟನೆಯನ್ನು ಮಾಡಲಿದ್ದಾರೆ. ಶಿವಮೊಗ್ಗದಲ್ಲಿಯೂ ಸಹ ಈ ಪ್ರತಿಭಟನೆ ನಡೆಯಲಿದೆ ಎಂದರು.
ರಿಟರ್ನ್ಸ್ ಸಲ್ಲಿಸುವಲ್ಲಿ ವಿಳಂಬವಾದರೆ ವಿಪರೀತ ದಂಡವನ್ನು ಹಾಕಲಾಗುತ್ತದೆ ಇದನ್ನು ಮನ್ನ ಮಾಡಬೇಕು, ತೆರಿಗೆದಾರರಿಗೆ, ವ್ಯಾಪರಸ್ಥರಿಗೆ, ಕಂಪ್ಯೂಟರ್ ಜ್ಞಾನ ಇರುವುದಿಲ್ಲ, ತೆರಿಗೆಯ ಎಲ್ಲಾ ವಿವರಗಳನ್ನು ಕಂಪ್ಯೂಟರ್ ಮೂಲಕವೇ ಸಲ್ಲಿಸಬೇಕು ಎಂಬುದು ಕಷ್ಟ ಸಾಧ್ಯವಾಗುತ್ತದೆ ಮತ್ತು ಜಿ.ಎಸ್.ಟಿ. ಕಾನೂನುಗಳು ದಿನದಿಂದ ದಿನಕ್ಕೆ ಜಟಿಲವಾಗುತ್ತ ಹೋಗುತ್ತಿವೆ. ಕಾನೂನುಗಳ ಬಗ್ಗೆ ಅರಿವು ಇರುವುದಿಲ್ಲ. ಉದ್ದೇಶ ಪೂರಕವಾಗಿ ಅಲ್ಲದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇಲ್ಲಿ ಅವಕಾಶವಿರುವುದಿಲ್ಲ. ಇದರಿಂದ ದಂಡ ತೆರುವುದು ಅನಿವಾರ್ಯವಾಗುತ್ತದೆ. ಸರಿಯಾದ ಸಮಯಕ್ಕೆ ಲೆಕ್ಕಪತ್ರ ಕೊಡುವುದು ಕೂಡ ಕಷ್ಟವಾಗುತ್ತದೆ. ಇದೊಂದು ರೀತಿಯ ಜಟಿಲ ಜಿ.ಎಸ್.ಟಿ.ಯಾಗಿದೆ ಎಂದರು.
ನಾವು ಜಿ.ಎಸ್.ಟಿ.ಯನ್ನು ವಿರೋಧಿಸುವುದಿಲ್ಲ. ಆದರೆ, ಈ ಕಾಯ್ದೆಯಲ್ಲಿರುವ ತಪ್ಪುಗಳನ್ನು ಸರ್ಕಾರದ ಗಮನಕ್ಕೆ ತರಬೇಕಾದುದು ನಮ್ಮ ಕಾಳಜಿಯಾಗಿದೆ. ಹಾಗಾಗಿ ಜಿ.ಎಸ್.ಟಿ.ಯ ನಿಯಮ ೮೬ (ಬಿ) ರದ್ದುಗೊಳಿಸಬೇಕು. ೩೬ (೪) ಪ್ರಾರಂಭಿಸಲು ಸಮಯ ಒದಗಿಸಬೇಕು. ರಿಟರ್ನ್ಸ್ ಸಲ್ಲಿಸುವಲ್ಲಿ ವಿಳಂಬವಾದರೆ ದಂಡ ಹಾಕಬಾರದು, ರಿಟನ್ಸ್‌ಗಳನ್ನು ರಿವಿಜನ್ ಮಾಡುವ ಅವಕಾಶ ಕಲ್ಪಿಸಬೇಕು, ಜಿ.ಎಸ್.ಟಿ ಪೋರ್ಟಲ್‌ನಿಂದ ಆಗುತ್ತಿರುವ ಸಮಸ್ಯೆಗಳನ್ನು ಮತ್ತು ವಿಳಂಬವನ್ನು ಪರಿಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಕೂಡಲೇ ಕೇಂದ್ರ ಸರ್ಕಾರ ಈ ಬಗ್ಗೆ ತುರ್ತು ಗಮನಹರಿಸುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಘದ ಪದಾಧಿಕಾರಿಗಳಾದ ಎಸ್.ಎಸ್.ಉದಯಕುಮಾರ್, ಬಿ.ಆರ್.ಸಂತೋಷ್, ಬಿ.ಗೋಪಿನಾಥ್, ಎ.ಎಂ.ಸುರೇಶ್, ಯು. ಮದುಸೂಧನ್ ಐತಾಳ್, ಲಕ್ಷ್ಮೀದೇವಿ ಗೋಪಿನಾಥ್, ಶಿವರಾಜ್, ಲೆಕ್ಕಪರಿಶೋಧಕರಾದ ರಾಮಚಂದ್ರ, ಜಫರುಲ್ಲಾ ಸತ್ತಾರ್ ಖಾನ್ ಮತ್ತು ತೆರಿಗೆ ಅಧಿಕಾರಿಗಳಾದ ನಾಗರಾಜ್, ನಂದಕಿಶೋರ್ ಮೊದಲಾದವರು ಇದ್ದರು.


Exit mobile version