Site icon TUNGATARANGA

ಹೆಣ್ಣು ಮಕ್ಕಳ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು:ಒಕ್ಕಲಿಗ ಸಮಾಜದ ಮುಖಂಡ ಆರ್.ಎಂ. ಮಂಜುನಾಥಗೌಡ ಆಗ್ರಹ

ಶಿವಮೊಗ್ಗ: ಒಕ್ಕಲಿಗ ಸಮಾಜದ ವಿರುದ್ಧ ಅತ್ಯಂತ ಕೆಟ್ಟದಾಗಿ ಮಾತನಾಡಿರುವ, ನಿಂದಿಸಿರುವ, ಹೆಣ್ಣು ಮಕ್ಕಳ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿರುವ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒಕ್ಕಲಿಗ ಸಮಾಜದ ಮುಖಂಡ ಆರ್.ಎಂ. ಮಂಜುನಾಥಗೌಡ ಆಗ್ರಹಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಕ್ಕಲಿಗ ಸಮುದಾಯಕ್ಕೆ ಒಂದು ಸಾಂಸ್ಕೃತಿಕ ಹಿನ್ನಲೆ ಇದೆ. ಈ ನಾಡು ಕಟ್ಟುವಲ್ಲಿ ಒಕ್ಕಲಿಗರ ಪಾತ್ರ ಹೆಚ್ಚಾಗಿದೆ. ನಮ್ಮ ಸ್ವಾಭಿಮಾನಕ್ಕೆ ಆತ್ಮ ಗೌರವಕ್ಕೆ ಈಗ ಮುನಿರತ್ನ ಅವರ ಹೇಳಿಕೆಯಿಂದ ಧಕ್ಕೆ ಉಂಟಾಗಿದೆ. ನಾಲ್ಕು ಬಾರಿ ಶಾಸಕರಾಗಿದ್ದ, ಸಚಿವರೂ ಆಗಿದ್ದ ಮುನಿರತ್ನ ಅವರು ನಮ್ಮ ಸಮಾಜವನ್ನು ಹೀಗಳೆದಿದ್ದಾರೆ. ಕಳಂಕ ತಂದಿದ್ದಾರೆ. ಕೇವಲ ನಮ್ಮ ಸಮಾಜಕ್ಕೆ ಅಷ್ಟೇ ಅಲ್ಲ, ದಲಿತರ ಬಗ್ಗೆಯೂ ಮಾತನಾಡಿದ್ದಾರೆ. ಜಾತಿ ಹೆಸರು ಹೇಳಿ ನಿಂದಿಸಿದ್ದಾರೆ. ಗುತ್ತಿಗೆದಾರ ಚೆಲುವರಾಜ್ ಅವರೊಂದಿಗೆ ಮಾತನಾಡಿದ ಸಂಭಾಷಣೆ ಕೇಳಿದರೆ ಮುನಿರತ್ನ ಎಷ್ಟು ನೀಚರೆಂದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಈ ಹಿಂದೆಯೇ ಉರಿಗೌಡ, ನಂಜೇಗೌಡ ಪ್ರಸ್ತಾಪ ತೆಗೆದು ಇದನ್ನು ಸಿನಿಮಾ ಮಾಡುವುದಾಗಿ ಹೇಳಿದ್ದರು. ನಮ್ಮ ಸಮಾಜದ ನಿರ್ಮಲಾನಂದನಾಥ ಸ್ವಾಮೀಜಿ ಬುದ್ಧಿವಾದ ಹೇಳಿದ್ದರು. ಕ್ಷಮೆ ಕೇಳಿ ಹೋಗಿದ್ದ ಮುನಿರತ್ನ ಮತ್ತೆ ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಿದ್ದಾರೆ. ಮಹಿಳೆಯರ ಬಗ್ಗೆ ಅವರಿಗಿರುವ ಕೀಳು ಅಭಿರುಚಿ ಎಷ್ಟೆಂದು ಗೊತ್ತಾಗುತ್ತದೆ. ತಾಯಿಯಾಗಲಿ, ಸೋದರಿಯಾಗಲಿ ಅವರನ್ನೂ ಬಿಡದೇ ಮಂಚಕ್ಕೆ ಕರೆಯುವ ಅವರ ಮಾತುಗಳು ಅವರ ಕೆಟ್ಟ ಸಂಸ್ಕೃತಿ ತೋರಿಸುತ್ತದೆ ಎಂದರು.


ಬಿಜೆಪಿ ಮುಖಂಡರು ಇಷ್ಟಾದರೂ ಮುನಿರತ್ನ ಅವರ ಬಗ್ಗೆ ಖಂಡನೆ ಮಾಡುತ್ತಿಲ್ಲ. ಇಷ್ಟು ಬೇಗ ಬಂಧಿಸಬೇಕಿತ್ತೇ ಎಂದು ಪ್ರಶ್ನೆ ಮಾಡುತ್ತಾರೆ. ಇದು ಅವರಿಗೆ ಅರ್ಥವಾಗಬೇಕು. ಇಷ್ಟು ಕೆಟ್ಟದಾಗಿ ವರ್ತಿಸಿರುವ ಆತನ ಬಗ್ಗೆ ಯಾವ ಮುಲಾಜು ತೋರದೇ ಬಿಜೆಪಿಯಲ್ಲಿರುವ ದಲಿತರು ಮತ್ತು ಒಕ್ಲಲಿಗರಲ್ಲದೇ ಎಲ್ಲರೂ ಖಂಡಿಸಬೇಕಾಗಿದೆ ಎಂದರು.


ರೌಡಿ ಕೊರಂಗು ಸಹೋದರನಾಗಿರುವ ಮುನಿರತ್ನ ವಿರುದ್ಧ ಬೇರೆ ಸಮಾಜದವರಾಗಿದ್ದರೆ ದೊಡ್ಡ ದುರಂತವನ್ನೇ ಮಾಡುತ್ತಿದ್ದರು. ಪಕ್ಷಭೇದವಿಲ್ಲದೇ ಈತನನ್ನು ಖಂಡಿಸಬೇಕಾಗಿದೆ. ಈತ ಎಷ್ಟು ನೀಚತನದ ವ್ಯಕ್ತಿಯಾಗಿದ್ದಾನೆ ಎಂದರೆ ಏಡ್ಸ್ ನಿವಾರಣಾ ಸಂಸ್ಥೆ ಕಟ್ಟಿ ಏಡ್ಸ್ ಅನ್ನೇ ಹರಡಲು ಹೊರಟವನೀತ. ಇಂತಹ ವ್ಯಕ್ತಿ ನಮ್ಮ ರಾಜ್ಯದಲ್ಲಿ ಇರಬೇಕಾ ಎಂದು ಪ್ರಶ್ನಿಸಿದರು.


ಮುಖ್ಯಮಂತ್ರಿಗಳು ಎಸ್‌ಐಟಿ ತನಿಖೆಗೆ ಒಪ್ಪಿಸಿರುವುದು ಸ್ವಾಗತಾರ್ಹವೇ. ಆದರೆ, ಆತನ ವಿರುದ್ಧ ಕಠಿಣ ಕ್ರಮದ ಅವಶ್ಯಕತೆ ಇದೆ. ಈತ ಇದೇ ಮೊದಲ ಬಾರಿ ಈ ರೀತಿ ಮಾಡಿಲ್ಲ. ಬಿಬಿಎಂಪಿಯಲ್ಲಿ ಕಡತಗಳನ್ನು ಸುಟ್ಟು ಹಾಕಿದ ಆರೋಪವೂ ಈತನ ಮೇಲಿದೆ. ತನಿಖೆಯಲ್ಲಿ ಇವೆಲ್ಲವೂ ಹೊರಗೆ ಬರಬೇಕು. ಬಿಜೆಪಿ ಮುಖಂಡರು ಮೊದಲು ಈತನನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಅಷ್ಟೇ ಅಲ್ಲ, ಶಾಸಕ ಸ್ಥಾನದಿಂದಲೇ ಅನರ್ಹಗೊಳಿಸಬೇಕು. ಮತ್ತೆ ಎಂದೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಬಾರದು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಒಕ್ಕಲಿಗ ಸಮಾಜದ ಮುಖಂಡರಾದ ಬಿ.ಎ. ರಮೇಶ್ ಹೆಗ್ಡೆ, ಪುಟ್ಟಸ್ವಾಮಿ, ಭಾರತಿ ರಾಮಕೃಷ್ಣ, ಚೇತನ್ ಗೌಡ, ಚಂದ್ರಕಾಂತ್, ಗುಂಡಪ್ಪ ಗೌಡ, ಪ್ರತಿಮಾ ಡಾಕಪ್ಪ, ಸುದರ್ಶನ್, ಮೋಹನ್ ಉಂಬ್ಳೆಬೈಲ್, ಧರ್ಮೇಶ್, ಪ್ರಭಾಕರ್, ಗೋ. ರಮೇಶ್ ಗೌಡ, ರಘು, ಕೃಷ್ಣಮೂರ್ತಿ, ಸಂದೀಪ್ ಮೊದಲಾದವರಿದ್ದರು.

Exit mobile version