Site icon TUNGATARANGA

ದಸರಾ ಅಂಗವಾಗಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಅಯೋಜನೆ ಭಾಗವಹಿಸಲು ಇರಬೇಕಾದ ಅಹರ್ತೆಗಳೇನು ?ಭಾಗವಹಿಸುವವರು ಈ ಕೂಡಲೇ ನೋಂದಾಯಿಸಿಕೊಳ್ಳಿ

ಶಿವಮೊಗ್ಗ, ಸೆಪ್ಟಂಬರ್ ೨೦

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ೨೦೨೪-೨೫ ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಸೆ.೨೩ ಮತ್ತು ೨೪ ರಂದು ಬೆಳಗ್ಗೆ ೯.೩೦ಕ್ಕೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಸೆ. ೨೩ ರಂದು ಬೆಳಗ್ಗೆ ೧೦.೦೦ಕ್ಕೆ ಉದ್ಘಾಟನೆ ಕಾರ್ಯಕ್ರಮ ಏರ್ಪಡಿಸಲಾಗಿದೆ.


ಈ ಕ್ರೀಡಾಕೂಟದಲ್ಲಿ ಅಥ್ಲೇಟಿಕ್ಸ್, ವಾಲಿಬಾಲ್, ಫುಟ್‌ಬಾಲ್, ಖೋಖೋ, ಕಬಡ್ಡಿ, ಬ್ಯಾಸ್ಕೆಟ್‌ಬಾಲ್, ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಹ್ಯಾಂಡ್‌ಬಾಲ್, ಟೇಬಲ್ ಟೆನ್ನಿಸ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್, ಯೋಗ ಮತ್ತು ಆಯ್ಕೆಯ ಕ್ರೀಡೆಗಳು ಟೆನ್ನಿಸ್, ನೆಟ್‌ಬಾಲ್, ಈಜು ಕ್ರೀಡೆಗಳನ್ನು ಆಯೋಜಿಸಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವೈಯುಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವೀತಿಯ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮಸ್ಥಾನ ಪಡೆದವರು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ.


ಅರ್ಹತೆ ಪಡೆದ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಕ್ರೀಡಾಕೂಟ ನಡೆಯುವ ದಿನಾಂಕದಂದು ಬೆಳಗ್ಗೆ ೧೦.೦೦ ರೊಳಗಾಗಿ ನೆಹರೂ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಂಡು ಹೆಸರನ್ನು ನೋಂದಾಯಿಸಿಕೊಳ್ಳುವುದು. ತಾಲೂಕುಗಳಿಂದ ಭಾಗವಹಿಸುವ ತಾಲೂಕು ವಿಜೇತ ಕ್ರೀಡಾಪಟುಗಳಿಗೆ ಶಿವಮೊಗ್ಗಕ್ಕೆ ಬಂದುಹೋಗುವ ಸಾಮಾನ್ಯ ಪ್ರಯಾಣಭತ್ಯೆ ನೀಡಲಿದ್ದು ಮಧ್ಯಾಹ್ನದ

ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ, ಕ್ರೀಡಾಪಟುಗಳು ಆಧಾರ್‌ಕಾರ್ಡ್ ಕಡ್ಡಾಯ ತರಬೇಕು. ಯಾವುದೇ ತಂಡ/ಸ್ಪರ್ಧಿ ಸಂಘಟಕರ/ತೀರ್ಪುಗಾರರ ವಿರುದ್ಧ ಪ್ರತಿಭಟನೆ ಮಾಡಿದರೆ ಅಂತಹ ತಂಡ/ಸ್ಪರ್ಧಿಯನ್ನು ಕ್ರೀಡಾಕೂಟದಿಂದ ನಿಷೇಧಿಸಲಾಗುವುದು. ಯಾವುದೇ ತಂಡ

ತೀರ್ಪಿನ ಬಗ್ಗೆ ಅಥವಾ ಸ್ಪರ್ಧೆಗೆ ಸಂಬಂಧಿಸಿ ಯಾವುದೇ ವಿಚಾರಗಳಿಗೆ ಮೇಲ್ಮನವಿಯನ್ನು ರೂ.೫೦೦/- ಶುಲ್ಕದೊಂದಿಗೆ ಕ್ರೀಡಾ ಸಂಘಟನಾ ಸಮಿತಿ ಅಧ್ಯಕ್ಷರಿಗೆ ಸಲ್ಲಿಸಬಹುದಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮಾಹಿತಿಗಾಗಿ ಇಲಾಖೆಯ ದೂ.ಸಂ.: ೦೮೧೮೨-೨೨೩೩೨೮ ನ್ನು ಸಂಪರ್ಕಿಸುವುದು.

Exit mobile version