Site icon TUNGATARANGA

Tunga Taranga Web Exclusive| ಜೈಲ್ ರಸ್ತೆಯಲ್ಲಿ ನಗರ ಸಾರಿಗೆ ಬಸ್ ಬಿಡಲೇನು ಸಮಸ್ಯೆ.?

ಕುವೆಂಪು ರಸ್ತೆಯಲ್ಲಿ ನಗರ ಸಾರಿಗೆ ಹೊರತುಪಡಿಸಿ ಭಾರಿ ವಾಹನ ನಿಷೇಧ ಜಾರಿಯಾದರೆ ಸಾಧ್ಯ..!



ಶಿವಮೊಗ್ಗ,ಜ.28:

ಇಲ್ಲಿನ ಖಾಸಗಿ ಬಸ್ ಸಂಚಾರಿ ವ್ಯವಸ್ಥೆ ಜನರ ಅಹವಾಲುಗಳನ್ನು ಕೇಳುತ್ತಿದೆ ಅದಕ್ಕೆ ಅಧಿಕಾರಿಗಳು ಜನಸ್ಪಂದನೆಯ ಮೂಲಕ ಎಲ್ಲಾ ನಗರ ಸಾರಿಗೆ ಬಸ್‌ಗಳ ಮಾರ್ಗವನ್ನು ಅಳವಡಿಸಿದ್ದಾರೆ ಎಂಬುದು ಸರಿಯಷ್ಟೆ.

ರೂಟ್ ಮ್ಯಾಪ್
ಹಿಂದೆ RTO ಕಛೇರಿ ಪತ್ರ


ಆದರೆ ಶಿವಮೊಗ್ಗ ಜೆಪಿಎನ್ ರಸ್ತೆ ಮೂಲಕ ಸರ್ಕೀಟೌಸ್‌ನಿಂದ ಕುವೆಂಪು ರಸ್ತೆ ಮೂಲಕ ಶಿವಮೂರ್ತಿ ಸರ್ಕಲ್‌ನಿಂದ ಇದೇ ರಸ್ತೆ ಮೂಲಕ ಲಕ್ಷ್ಮೀ ಟಾಕೀಸ್‌ಗೆ ಓಡಾಡುತ್ತಿದ್ದ 8 ನಗರ ಸಾರಿಗೆ ಬಸ್‌ಗಳನ್ನು ಕಳೆದ 7 ವರ್ಷಗಳಿಂದ ಲಕ್ಷ್ಮೀ ಚಿತ್ರ ಮಂದಿರ ಬಳಿಯ ಸೇತುವೆ ನಿರ್ಮಾಣಕ್ಕಾಗಿ ನಿಲ್ಲಿಸಿದ್ದು, ಇಲ್ಲಿಯವರೆಗೂ ಆರಂಭಗೊಂಡಿಲ್ಲ.


ಲಕ್ಷ್ಮೀ ಚಿತ್ರ ಮಂದಿರ ಬಳಿಯ ಚಾಲನ್ ಸೇತುವೆ ಶಿಥಿಲಗೊಂಡಿದ್ದರಿಂದ 2013 ಲ್ಲಿ ಲಕ್ಷ್ಮೀ ಟಾಕೀಸ್, ಜೈಲ್ ಸರ್ಕಲ್, ಕುವೆಂಪು ರಸ್ತೆ ಮೂಲಕ ಸರ್ಕೀಟೌನ್ ಮತ್ತು ಜೆಪಿಎನ್ ರಸ್ತೆ ಮೂಲಕ ಸಂಚರಿಸುತ್ತಿದ್ದ ನಗರ ಸಾರಿಗೆ ಬಸ್‌ಗಳ ಪರವಾನಿಗೆಯಲ್ಲಿ ನಿಬಂಧನೆಗೊಳಪಟ್ಟು ಮಾರ್ಗ ಬದಲಾವಣೆ ಮಾಡಿಕೊಂಡು ಓಡಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅನುಮತಿ ನೀಡಲಾಗಿತ್ತು.
ಆದರೆ ಲಕ್ಷ್ಮೀ ಚಿತ್ರ ಮಂದಿರ ಬಳಿಯ ಸೇತುವೆ ಕಾಮಗಾರಿ ಮುಗಿದರೂ ಸಹ ಕುವೆಂಪು ರಸ್ತೆಯಲ್ಲಿ ಭಾರಿ ವಾಹನಗಳು ಓಡಾಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಮಾಡಿದ್ದ ಆದೇಶದ ನೆಪದಲ್ಲಿ ಈಗಲೂ ಈ ಮಾರ್ಗದಲ್ಲಿ ನಗರ ಸಾರಿಗೆ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡದಿರುವುದು ಸ್ಥಳೀಯ ನಿವಾಸಿಗಳ ಆಕ್ಷೇಪಕ್ಕೆ ಕಾರಣವಾದೆ.
ನಂಜಪ್ಪ ಆಸ್ಪತ್ರೆ, ಶಿವಮೊಗ್ಗ ಜಿಲ್ಲಾ ಪಂಚಾಯತ್, ಸುಬ್ಬಯ್ಯ ಆಸ್ಪತ್ರೆ, ದುರ್ಗಿಗುಡಿ, ಜೈಲ್ ರಸ್ತೆ, ಹೊಸಮನೆ, ಕುವೆಂಪುರಸ್ತೆಗೆ ಹೋಗುವ ಜನರು ನಗರ ಸಾರಿಗೆ ವ್ಯವಸ್ಥೆ ಇಲ್ಲದೇ ಆಟೋಗಳಿಗೆ ಭಾರಿ ದುಬಾರಿ ಹಣ ನೀಡಿ ಹೋಗಬೇಕಾದ ಪರಿಸ್ಥಿತಿ ಬಂದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹಿಂದೆ 8 ಬಸ್‌ಗಳು ಇದೇ ಮಾರ್ಗಗಳಿಂದ ಬೊಮ್ಮನಕಟ್ಟೆ, ವಿನೋಬನಗರ, ನವುಲೆ, ಕಾಶಿಪುರ ಸೇರಿದಂತೆ ಬಹುತೇಕ ಪ್ರದೇಶಗಳಿಗೆ ಜನರನ್ನು ಕರೆದೊಯ್ಯುತ್ತಿದ್ದವು. ಇಲ್ಲಿ ಜೆಪಿಎನ್ ರಸ್ತೆಯಿಂದ ಜೈಲ್ ಸರ್ಕಲ್‌ನವರೆಗೆ ಮಧ್ಯ ಸಿಗುವ ಚಿಕ್ಕ ಅಳತೆಯ ಕುವೆಂಪು ರಸ್ತೆ ಹಾಗೂ ಶಿವಮೂರ್ತಿ ಸರ್ಕಲ್‌ನಿಂದ ಜೈಲ್ ರಸ್ತೆ ಸಂಪರ್ಕಿಸುವ ಮಧ್ಯ ಸಿಗುವ ಕುವೆಂಪು ರಸ್ತೆ ಯಾವುದೇ ಭಾರಿ ವಾಹನಗಳ ಸಂಚಾರದಿಂದ ಮುಕ್ತವಾಗಿರುವ ಹಿನ್ನೆಲೆಯಲ್ಲಿ ಬಸ್‌ಗಳನ್ನು ಬಿಡುವಂತಿಲ್ಲ ಎಂಬ ನೆಪವೊಡ್ಡಿ ಸಾರಿಗೆ ಪ್ರಾಧಿಕಾರ, ಕೆಲ ಬಸ್‌ಮಾಲೀಕರು ಇಲ್ಲಿನ ಜನರಿಗೆ ಸಂಚಾರಿ ಸೌಲಭ್ಯ ಸಿಗದಂತೆ ನೋಡಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ.
ಕಳೆದ ನಾಲ್ಕು ವರ್ಷಗಳಿಂದ ಜೈಲ್ ಸರ್ಕಲ್ ನಿವಾಸಿಗಳು ಹತ್ತಾರು ಭಾರಿ ಶಿವಮೊಗ್ಗ ಜಿಲ್ಲಾದಿಕಾರಿಗಳಿಗೆ ಹಾಗೂ ಸಾರಿಗೆ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕುವೆಂಪು ರಸ್ತೆಯ ಭಾರಿ ವಾಹನಗಳ ನಿಷೇಧ ನಗರ ಸಾರಿಗೆ ಬಸ್‌ಗಳನ್ನು ಹೊರತು ಪಡಿಸಿ ಎಂದು ಬದಲಿಸಿದರೆ ಮಾತ್ರ ಆ ೮ ಬಸ್‌ಗಳು ಎಂದಿನಂತೆ ತಮ್ಮ ನಿತ್ಯದ ಸಂಚಾರನ್ನು ಮಾಮೂಲಿ ಮಾರ್ಗದಲ್ಲಿ ಮಾಡಲು ಸಾಧ್ಯ.
ಈ ಕೂಡಲೇ ಇತ್ತ ಜಿಲ್ಲಾಧಿಕಾರಿಗಳು ಗಮನಹರಿಸಬೇಕಾಗಿದೆ. ಇಲ್ಲದಿದ್ದರೆ ತುಂಬಾ ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಬಸ್ ಸಂಚಾರವನ್ನು ಆರಂಭಿಸಲು ಅಲ್ಲಿನ ನಿವಾಸಿಗಳು ಪ್ರತಿಭಟನೆಗಿಳಿಯುವ ಎಚ್ಚರಿಕೆ ನೀಡಿದ್ದಾರೆ. ಜನರ ಉದ್ದೇಶಗಳಿಗೆ ಸ್ಪಂದಿಸುವ ಕಾರ್ಯ ನಡೆದೀತೆ..?

Exit mobile version