ಶಿವಮೊಗ್ಗ,ಸೆ.13:
ಭದ್ರಾವತಿ ತಾಲೂಕು ಹೊಳೆನೆರಳಕೇರಿಯಲ್ಲಿ ಅನ್ಯ ಕೋಮಿನ ಯುವಕರು ಹಿಂದೂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ವಿರೋಧಿಸಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಹೊಳೆನೆರಳಕೇರಿಯ ಸೃಜನ್ ಗೌಡ ಎಂಬಾತನನ್ನು ಕೆಲವು ಅನ್ಯಕೋಮಿನ ಯುವಕರು ಅಪಹರಿಸಿ ಹಣವನ್ನು ದೋಚಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಂತರ ಇದನ್ನು ಅಪಘಾತವೆಂದು ಸುಳ್ಳು ಕತೆ ಸೃಷ್ಟಿ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಘಟನೆ ನಡೆದು 10 ದಿನಗಳಾದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಇದರಿಂದ ಸುತ್ತಮುತ್ತಲ ಗ್ರಾಮಸ್ಥರಿಗೆ ಭಯವಾಗಿದ್ದು, ಹೊರಗಡೆ ಹೋಗಲು ಕೂಡ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕು. ಆರೋಪಿಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನೀಡಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.
ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟ ಮತ್ತು ಪೆಟ್ರೋಲ್ ಬಾಂಬ್ ಎಸೆತ ಇದು ಪೂರ್ವ ನಿಯೋಜಿತ ಕೃತ್ಯ ಎಂದು ಸಾಬೀತಾಗಿದೆ. ಗಣೇಶೋತ್ಸವ ಸಮಿತಿ ಅಧ್ಯಕ್ಷ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿದ್ದು, ಕಾಂಗ್ರೆಸ್ ಹಿಂದೂಗಳಿಗೂ ಕೂಡ ಈ ಸರ್ಕಾರದಲ್ಲಿ ರಕ್ಷಣೆ ಇಲ್ಲ ಎಂಬುದನ್ನು ಇನ್ನಾದರೂ ಕಾಂಗ್ರೆಸ್ ನವರು ಅರಿತುಕೊಳ್ಳಬೇಕು. ಪೊಲೀಸ್ ಇಲಾಖೆಯಿಂದ ಪೂರ್ವಭಾವಿಯಾಗಿ ಮೆರವಣಿಗೆಗೆ ಬೇಕಾದ ಎಲ್ಲಾ ಅನುಮತಿ ಪಡೆದಿದ್ದರೂ ಸೂಕ್ತ ಬಂದೋಬಸ್ತ್ ಒದಗಿಸಿಲ್ಲ. ಗಲಭೆಗೆ ಪೊಲೀಸ್ ವೈಫಲ್ಯವೇ ಕಾರಣ. ಕೂಡಲೇ ತುಷ್ಠೀಕರಣ ನೀತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ವಾಸುದೇವ, ರಾಜೇಶ್ ಗೌಡ, ಪ್ರಸಾದ್, ಸುನಿತಮ್ಮ, ಆನಂದ್, ಸುರೇಶ್ ಬಾಬು, ಜಿತೇಂದ್ರಗೌಡ, ನಟರಾಜ್, ಶಾರದಾ, ಕಾವ್ಯ, ವಿಜಯ್ ಸೇರಿದಂತೆ ಹಲವರಿದ್ದರು.