ಶಿವಮೊಗ್ಗ : ಸೆಪ್ಟಂಬರ್ ೧೧ : : ವೈಯಕ್ತಿಕ ಹಿತಾಸಕ್ತಿ ಮತ್ತು ಅಭಿವೃದ್ದಿ ಕಾರ್ಯಗಳ ಹೆಸರಿನಲ್ಲಿ ಅರಣ್ಯ ನಾಶದಂಚಿಗೆ ಬಂದು ನಿಂತಿದೆ. ಅರಣ್ಯ ಸಂರಕ್ಷಣೆಯಲ್ಲಿ ಬಿಷ್ನೋಯಿ ಸಮುದಾಯದ ನಾಯಕರಂತಹವರ ಸಂಖ್ಯೆ ಇಂದು ಕಾಣದಾಗಿದೆ. ೩೬೩ಜನರನ್ನು ಬಲಿಪಡೆದ ಕೇಜರ್ಲಿ ಹತ್ಯಾಕಾಂಡ ಸಾಮಾಜಿಕ ದುರಂತ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ ಅವರು ಹೇಳಿದರು.
ಅವರು ಇಂದು ಅರಣ್ಯ ಇಲಾಖೆಯು ಶ್ರೀಗಂಧದ ಕೋಠಿಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಅರಣ್ಯ ಹುತಾತ್ಮರ ದಿನಾಚರಣೆ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ನಮನ ಸಲ್ಲಿಸಿ ಮಾತನಾಡುತ್ತಿದ್ದರು. ಅರಣ್ಯ ರಕ್ಷಣೆಯ ಮಹತ್ವದ ಸೇವೆಯಲ್ಲಿ ತಮ್ಮ ಬದುಕನ್ನು ಮುಡುಪಾಗಿಸಿಕೊಂಡ ಅರಣ್ಯ ರಕ್ಷಕರಿಗೆ ಅವರ ಅವಲಂಬಿತರಿಗೆ ನ್ಯಾಯೋಚಿತವಾಗಿ ದೊರೆಯಬೇಕಾದ ಗೌರವ, ಸೌಲಭ್ಯಗಳು ದೊರೆಯದಿರುವುದು ಅತ್ಯಂತ ನೋವಿನ ಸಂಗತಿ. ಅರಣ್ಯ ರಕ್ಷಕರಿಗೆ, ಅವರ ಕುಟುಂಬದ ಅವಲಂಬಿತರ ನೆಮ್ಮದಿಯ ಬದುಕಿಗೆ ನೈತಿಕ ಸ್ಥೈರ್ಯ ನೀಡುವ ಬಗ್ಗೆ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕಾದ ಅಗತ್ಯವಿದೆ ಎಂದರು.
ಅರಣ್ಯ, ಪರಿಸರ, ಪ್ರಾಣಿ ಸಂಕುಲ, ವನ್ಯಮೃಗಗಳ ಸಂರಕ್ಷಣೆಯಲ್ಲಿ ಸರ್ಕಾರ, ಇಲಾಖೆಯ ಅಧಿಕಾರಿಗಳೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ.ಹನುಮಂತಪ್ಪ ಅವರು ಹುತಾತ್ಮರನ್ನು ಸಂಸ್ಮರಿಸಿ ಮಾತನಾಡಿ, ಹೆಚ್ಚುತ್ತಿರುವ ಜನಸಂಖ್ಯೆಗೆ ಪೂರಕವಾಗಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳಿಂದಾಗಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಹಿಂದೆಂದಿಗಿಂತ ಇಂದು ಅದರ ರಕ್ಷಣೆ ಅಗತ್ಯವಿದೆ. ಇಂದಿನ ಅವಶ್ಯಕತೆಗಿಂತ ಭವಿಷ್ಯದ ದಿನಗಳಲ್ಲಿ ಎದುರಿಸಬಹುದಾದ ಸಮಸ್ಯೆ-ಸವಾಲುಗಳ ಬಗ್ಗೆಯೂ ಚರ್ಚಿಸುವ ಅವಶ್ಯಕತೆ ಇದೆ ಎಂದರು.
ವನ್ಯಪ್ರಾಣಿ ಮತ್ತು ವನ್ಯಸಂಪತ್ತು ರಕ್ಷಣೆ ಇಂದು ಸವಾಲಾಗಿ ಪರಿಣಮಿಸಿದೆ. ಅಲ್ಲದೇ ಅದರ ರಕ್ಷಣೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕಾದ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಅಪಾಯಕಾರಿ ಸನ್ನಿವೇಶಗಳೂ ಎದುರಾಗಲಿವೆ. ಕಾಡ್ಗಿಚ್ಚುಗಳಂತಹ ಸಂದರ್ಭದಲ್ಲಿ ವನ್ಯಪ್ರಾಣಿಗಳ ರಕ್ಷಣೆ ತ್ರಾಸದಾಯಕ ಎಂದ ಅವರು, ಪ್ರಕೃತಿ-ಪರಿಸರವನ್ನು ಹಿಂದಿನವರು ಭಕ್ತಿ, ಭಾವದಿಂದ ದೈವತ್ವಕ್ಕೆ ಏರಿಸಿ, ಪೂಜ್ಯಭಾವದಿಂದ ಕಾಣುತ್ತಿದ್ದರು. ಅದು ಇಂದು ಕಾಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್ ಅವರು ಮಾತನಾಡಿ, ಜಗತ್ತಿನ ಮನುಕುಲವನ್ನು ಒಂದು ಮಾಡುವಲ್ಲಿ ಪ್ರಕೃತಿ ಮತ್ತು ಪರಿಸರದ ಮಹತ್ವ ಪ್ರಧಾನವಾದುದ್ದಾಗಿದೆ. ಅರಣ್ಯ ರಕ್ಷಣೆ ಇಲಾಖೆಯ ಒಂದು ಕಾರ್ಯಕ್ರಮ ಮಾತ್ರವಾಗಿರದೇ ಮಾನವೀಯ ನೆಲೆಯಲ್ಲಿಯೂ ಕಾರ್ಯನಿರ್ವಹಿಸಬಹುದಾದ ಸೇವಾ ವಲಯ ಎಂಬುದನ್ನು ಪಿ.ಶ್ರೀನಿವಾಸ್ ಅವರಂತಹ ಅನೇಕ ಹಿರಿಯ ಅರಣ್ಯಾಧಿಕಾರಿಗಳು ಸಾಬೀತುಪಡಿಸಿದ್ದಾರೆ. ಅರಣ್ಯ ಇಲಾಖೆ ಮತ್ತು ಸಾರ್ವಜನಿಕರ ನಡುವೆ ಅವಿನಾಭಾವ ಸಂಬಂಧ ಇರುವುದನ್ನು ಅವರು ಜನರಿಗೆ ಪರಿಚಯಿಸಿದರು ಎಂದರು.
ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಈ.ಶಿವಶಂಕರ್ ಅವರು ತಮ್ಮ ಸೇವಾವಧಿಯಲ್ಲಿ ಈವರೆಗೆ ಹುತಾತ್ಮರಾದ ಅರಣ್ಯ ಸಿಬ್ಭಂಧಿಗಳನ್ನು ಯಾದಿಯನ್ನು ವಾಚಿಸಿ, ಸಂಸ್ಮರಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರಗೀತೆಯೊಂದಿಗೆ ಸಮವಸ್ತ್ರಧಾರಿ ಪೊಲೀಸ್ ಸಿಬ್ಬಂಧಿಗಳು ಕವಾಯತಿನಲ್ಲಿ ಭಾಗವಹಿಸಿ, ಮೂರು ಸುತ್ತಿನ ಕುಶಾಲ ತೋಪುಗಳನ್ನು ಹಾರಿಸಿ, ಹುತಾತ್ಮ ಅರಣ್ಯ ಸಿಬ್ಬಂಧಿಗಳಿಗೆ ಗೌರವ ಸಲ್ಲಿಸಲಾಯಿತು. ಅಲ್ಲದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರೆಲ್ಲರೂ ಹುತಾತ್ಮರ ಪುತ್ಥಳಿಗೆ ಪುಷ್ಪಗುಚ್ಚವಿಟ್ಟು ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಪ್ರಸನ್ನಕೃಷ್ಣ ಬೆಟಗಾರ್ ಅವರು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ನಿವೃತ್ತ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.