Site icon TUNGATARANGA

ವಿವಿಧತೆಯಲ್ಲಿ ಏಕತೆ ಸಾರಿದ ದಿನವೇ ಗಣರಾಜ್ಯೋತ್ಸವ: ಕೆ.ಎಸ್. ಈಶ್ವರಪ್ಪ


ಶಿವಮೊಗ್ಗ,ಜ.೨೬:
ಭಾರತ ಸರ್ವತಂತ್ರ ಸ್ವತಂತ್ರವಾಗಿ, ಗಣತಂತ್ರ ವ್ಯವಸ್ಥೆಯನ್ನು ಒಪ್ಪಿಕೊಂಡು ಇದೀಗ ೭೨ನೇ ವರ್ಷಕ್ಕೆ ಕಾಲಿರಿಸಿದ್ದೇವೆ. ಭಾರತ ಪ್ರಜಾಪ್ರಭುತ್ವ ದೇಶವಾಗಿ ಘೋಷಣೆಯಾದ, ಜಗತ್ತಿನ ಅತಿದೊಡ್ಡ ಲಿಖಿತ ಹಾಗೂ ಪರಿಣಾಮಕಾರಿ ಸಂವಿಧಾನವನ್ನು ಜಾರಿಗೊಳಿಸಿದ ಐತಿಹಾಸಿಕ ದಿನವಿದು. ಪ್ರತಿಯೊಬ್ಬ ನಾಗರಿಕನೂ ಸ್ವತಂತ್ರವಾಗಿ ಸ್ವಾಭಿಮಾನದಿಂದ ಬದುಕುವ ಮುಕ್ತ ಅವಕಾಶವನ್ನು ಸಂವಿಧಾನ ನಮಗೆ ನೀಡಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಇಂದು ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ೭೨ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಭದ್ರತಾ ತುಕಡಿಗಳ ಗೌರವ ವಂದನೆ ಸಲ್ಲಿಸಿದ ಬಳಿಕ ಮಾತನಾಡಿದರು.


ವಿವಿಧತೆಯಲ್ಲಿ ಏಕತೆಯೇ ನಮ್ಮ ಶಕ್ತಿ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೆ, ನೂರಾರು ಭಾಷೆ, ಧರ್ಮ, ಪ್ರಾಂತ್ಯ, ವೈವಿಧ್ಯಮಯ ಸಂಸ್ಕೃತಿಗಳಿಂದ ಕೂಡಿರುವ ನಮ್ಮ ದೇಶ ವಿವಿಧತೆಯಲ್ಲಿ ಏಕತೆಯ ಮಂತ್ರವನ್ನು ಸಾಕಾರಗೊಳಿಸಿದೆ. ದೇಶದ ಐಕ್ಯತೆ, ಸಮಗ್ರತೆಯನ್ನು ಇನ್ನಷ್ಟು ಬಲಪಡಿಸುವ ಪಣವನ್ನು ನಾವು ಇಂದು ತೊಡಬೇಕಾಗಿದೆ. ಎಂದರು.
ಕಳೆದ ವರ್ಷ ಕಾಡಿದ ಕರೋನಾ ಮಹಾಮಾರಿ ನಮ್ಮ ಮುಂದೆ ಹಲವಾರು ಸವಾಲುಗಳನ್ನು ತಂದೊಡ್ಡಿತ್ತು. ಇಡೀ ದೇಶವೇ ಒಂದಾಗಿ ಕರೋನಾ ವಿರುದ್ಧ ಹೋರಾಡಿ ಯಶಸ್ವಿಯಾಗಿ ಹಿಮ್ಮೆಟ್ಟಿಸಿರುವುದು ಹೆಮ್ಮೆಯ ಸಂಗತಿ. ಇದೀಗ ಕರೋನಾ ವಿರುದ್ಧ ಲಸಿಕೆಯನ್ನು ನಾವು ಸಿದ್ಧಪಡಿಸಿದ್ದು, ಇದಕ್ಕಾಗಿ ನಮ್ಮ ವಿಜ್ಞಾನಿಗಳಿಗೆ ಪ್ರಣಾಮ ಅರ್ಪಿಸುತ್ತೇನೆ. ಲಸಿಕೆಯ ಸದುಪಯೋಗ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸುಲಭವಾಗಿ ದೊರೆಯುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ, ಕರೋನಾ ಸಂಕಷ್ಟದ ಸಂದರ್ಭದಲ್ಲೂ, ಪಿಂ ಸ್ವನಿಇ, ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾದಂತಹ ಯೋಜನೆಗಳ ಮೂಲಕ ಜನಸಾಮಾನ್ಯರ ಬದುಕನ್ನು ಕಟ್ಟುವ ಕಾರ್ಯದಲ್ಲಿ ಯಶಸ್ವಿಯಾಗಿದೆ. ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯವನ್ನು ಅಭಿವೃದ್ಧಿಪಡಿಸುವ ಪಿಎಂ ಸ್ವನಿಧಿ ಯೋಜನೆ ಅಡಿಯಲ್ಲಿ, ೧೦ಸಾವಿರ ರೂಪಾಯಿ ವಿಶೇಷ ಕಿರು ಸಾಲ ಸೌಲಭ್ಯ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ೩ಸಾವಿರಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳು ಇದರ ಪ್ರಯೋಜನ ಪಡೆಯುತ್ತಿದ್ದು, ಆರ್ಥಿಕ ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಇದು ಮಹತ್ತರ ಹೆಜ್ಜೆಯಾಗಿದೆ.
ಜಲಜೀವನ ಮಿಷನ್ ಅಡಿ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ೯೯೫ ಕಾಮಗಾರಿಗಳಿಗೆ ೨೮೫ ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಈಗಾಗಲೇ ೯೫೨ ಜನವಸತಿಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಲಾಗಿದ್ದು, ೩೦೨ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ.  ಗ್ರಾಮೀಣ ಕುಡಿಯುವ ನೀರು ಯೋಜನೆಗಳಿಗಾಗಿ ಇದುವರೆಗೆ ೪೪ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ೧೬೫೧ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ ಸಂಪರ್ಕ ಉತ್ತಮಪಡಿಸುವ ಮೂಲಕ ಗ್ರಾಮೀಣ ಆರ್ಥಿಕತೆಗೆ ವೇಗ ನೀಡುವುದು ನಮ್ಮ ಕನಸು. ಜಿಲ್ಲೆಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಸುಮಾರು ೪ಕೋಟಿ ರೂ. ವೆಚ್ಚದಲ್ಲಿ ೩೨ಕಿಮಿ ರಸ್ತೆ ನಿರ್ಮಿಸಲಾಗಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ೧೪೧ಕಿ.ಮೀ ಉದ್ದದ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ರೈತಾಪಿ ಜನರನ್ನು ಸ್ವಾವಲಂಬಿಗಳಾಗಿ ಮಾಡುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದೇವೆ. ಇದಕ್ಕೆ ಪೂರಕವಾಗಿ, ಕೆರೆಗಳ ಪುನರುಜ್ಜೀವನಕ್ಕೆ ಒತ್ತು ನೀಡಲಾಗಿದೆ. ಜಿಲ್ಲೆಯಲ್ಲಿ ೭೦೨ ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗಿದ್ದು, ೪೪೭ ಕೆರೆಗಳ ಹೂಳೆತ್ತಲಾಗಿದೆ. ಮಣ್ಣಿನ ತೇವಾಂಶ ಸಂರಕ್ಷಣೆಗಾಗಿ ವ್ಯಾಪಕವಾಗಿ ಬದುಗಳನ್ನು ನಿರ್ಮಿಸುವ ಮೂಲಕ ನೀರನ್ನು ಹಿಡಿದಿಡುವ ಕಾರ್ಯವನ್ನು ಮಾಡಲಾಗಿದೆ.
ಶಿವಮೊಗ್ಗ ಹೊರವಲಯದಲ್ಲಿ ೭೭೦ಎಕ್ರೆ ವಿಸ್ತಾರವಾದ ಪ್ರದೇಶದಲ್ಲಿ ೩೮೪ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ, ಈ ವರ್ಷದ ಅಂತ್ಯದ ಒಳಗಾಗಿ ಬಳಕೆಗೆ ಸಿದ್ಧವಾಗುವ ನಿರೀಕ್ಷೆಯಿದೆ. ಶಿವಮೊಗ್ಗ ನಗರದ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ೪೫೦ಕೋಟಿ ರೂ. ವೆಚ್ಚದ ಹೊರವರ್ತುಲ ರಸ್ತೆ ಕಾಮಗಾರಿ, ಅಂದಾಜು ೪೮೦೦ ಕೋಟಿ ರೂ. ವೆಚ್ಚದ ಶಿವಮೊಗ್ಗ-ತುಮಕೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ, ೫೨೮ಕೋಟಿ ರೂ. ಮೊತ್ತದ ಶಿವಮೊಗ್ಗ-ಚಿತ್ರದುರ್ಗ ರಸ್ತೆ ಕಾಮಗಾರಿಗಳು ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲಿದೆ. ಹಲವು ವರ್ಷಗಳ ಕನಸಾಗಿದ್ದ ೪೨೩ಕೋಟಿ ರೂ. ವೆಚ್ಚದ ಕಳಸವಳ್ಳಿ-ಸಿಗಂದೂರು ಬೃಹತ್ ಸೇತುವೆ ನಿರ್ಮಾಣ ಭರದಿಂದ ನಡೆಯುತ್ತಿದೆ.
ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಗರ ಪ್ರದೇಶದಲ್ಲಿ ಒಟ್ಟು ೧೫,೧೫೨ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಇದುವರೆಗೆ ೪,೯೫೩ ಮನೆಗಳು ಪೂರ್ಣಗೊಂಡಿದ್ದು, ೧,೦೭೫ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
‘ವಸುಧೈವಕುಟುಂಬಕಂ ಎಂಬ ವಿಶಾಲ ಚಿಂತನೆಯನ್ನು ಜಗತ್ತಿಗೆ ನೀಡಿದ ದೇಶ ನಮ್ಮದು. ಶಾಂತಿ, ಸಹನೆ, ಸಹಬಾಳ್ವೆ ನಮ್ಮ ಸಹಜ ಪ್ರವೃತ್ತಿ. ಪರಸ್ಪರ ಸಹಕಾರ, ಬೆಂಬಲದೊಂದಿಗೆ ಎಲ್ಲರೂ ಕೈ ಜೋಡಿಸಿ ದೇಶದ ಅಭಿವೃದ್ಧಿಗೆ ಶ್ರಮಿಸೋಣ. ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿದು, ಸಂವಿಧಾನ ರಕ್ಷಿಸೋಣ ಎಂದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಹಾಗೂ ಕ್ರೀಡಾಪಟುಗಳಿಗೆ ಕ್ರೀಡಾಕಿಟ್ ವಿತರಣೆಯನ್ನು ಮಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ರುದ್ರೇಗೌಡ, ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಸಿಇಓ ಎಂ.ಎಲ್. ವೈಶಾಲಿ, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಟಿ.ಹೆಚ್. ಶೇಖರ್, ಆರ್ಯವೈಶ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್, ಅಪರ ಜಿಲ್ಲಾಧಿಕಾರಿ ಅನುರಾಧ, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಹಾಗೂ ಪಾಲಿಕೆ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Exit mobile version