ಹುಡುಕಾಟದ ವರದಿ:ಜಿ. ಸ್ವಾಮಿ
ಶಿವಮೊಗ್ಗ, ಸೆ.04:
ನಿತ್ಯದ ದೈಹಿಕ ವ್ಯಾಯಾಮ, ಕಸರತ್ತುಗಳ ಮೂಲಕ ಆರೋಗ್ಯ ಹಾಗೂ ಮಾನಸಿಕ ಸ್ಥಿಮಿತತೆ ಜೊತೆಗೆ ದೇಹದ ರಕ್ಷಣೆಯ ಜವಾಬ್ದಾರಿ ಪ್ರತಿಯೊಬ್ಬರಲ್ಲೂ ಸಾಮಾನ್ಯವಾಗಿ ಕಾಡುತ್ತಿದೆ. ಅದಕ್ಕಾಗಿ ನಾನಾ ಬಗೆಯ ವ್ಯಾಯಾಮಗಳು,
ಬಗೆ ಬಗೆಯ ಆಟೋಟಗಳು ನಿರಂತರವಾಗಿ ನಡೆಯುತ್ತಿರುತ್ತವೆ, ಅದರ ನಡುವೆ ಎಲ್ಲೆಂದರಲ್ಲಿ ಕಾಣುತ್ತಿರುವ ಜಿಮ್ ಸೆಂಟರ್ ಗಳಲ್ಲಿ ಅಪಾರ ಸಂಖ್ಯೆಯ ಯುವ ಪೀಳಿಗೆ ಅದರಲ್ಲೂ ಮಾಧ್ಯಮ ವಯಸ್ಸಿನವರು ಸಹ ಈ ಜಿಮ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.
ಶಿವಮೊಗ್ಗ ನಗರದ ಎಲ್ಲೆಂದರಲ್ಲಿ ಅತಿ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಆರಂಭಗೊಂಡಿರುವ ಈ ಜಿಮ್ಸ್ ಸೆಂಟರ್ ಗಳು ನಿತ್ಯ ಮುಂಜಾನೆಯಿಂದಲೇ ಬಾಗಿಲು ತೆರೆದು ದೈಹಿಕ ವ್ಯಾಯಾಮಕ್ಕೆ ಅವಕಾಶ ಕಲ್ಪಿಸುತ್ತಿವೆ. ಅಲ್ಲಿ ಜಿಮ್ ತರಬೇತಿ ಪಡೆಯುವ ಪ್ರತಿಯೊಬ್ಬರಿಗೂ ಕಲಿಸಲು ಸೂಕ್ತ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಆದರೆ ಇದರ ನಡುವೆ ಕಾಣದ ಕೈಗಳ ಆಟ, ಹಣದ ಆಟೋಟ ಹೆಚ್ಚು ಕಡೆ ಕಂಡು ಬಂದಿದೆ ಎಂದು ಗಂಭೀರವಾದ ಸಾರ್ವಜನಿಕ ವಲಯದ ಆರೋಪ ಕೇಳಿ ಬಂದಿದೆ.
ಈ ಜಿಮ್ ಸೆಂಟರ್ ಗಳಲ್ಲಿ ನಡೆಸುವ ವ್ಯಾಯಾಮಗಳಲ್ಲಿ ಭಾರವಾದ ವಸ್ತುಗಳನ್ನು ಎತ್ತುವುದು, ದೇಹದ ಎಲ್ಲಾ ಅಂಗಗಳಿಗೆ ಕಸರತ್ತು ನೀಡುವುದು ಹೆಚ್ಚಾಗಿ ಕಂಡುಬರುತ್ತದೆ. ಇಂತಹ ವಿಷಯದಲ್ಲಿ ಕಲಿಯುತ್ತಿರುವವರಿಗೆ ಅದರ ಸೂಕ್ತ ತರಬೇತಿ ನೀಡಬೇಕಾದ ತರಬೇತುದಾರರೇ ಸರಿಯಾದ ತಿಳುವಳಿಕೆ ಹಾಗೂ ಕಲಿಕೆ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಹಲವು ನಿದರ್ಶನಗಳು ಕಂಡುಬರುತ್ತವೆ.
ಇದಕ್ಕೆ ಉದಾಹರಣೆ ಎಂಬಂತೆ ಮೊನ್ನೆ ಶಿವಮೊಗ್ಗ ವಿನೋಬನಗರದ ನೂರಡಿ ರಸ್ತೆಯ ನರೇನಾ ಜಿಮ್ ಸೆಂಟರ್ ನಲ್ಲಿ ಸುಮಾರು ಮಧ್ಯಮ ವಯಸ್ಸಿನ ಮಹಿಳೆ ಒಬ್ಬರು ಕುಸಿದು ಬಿದ್ದಿದ್ದಾರೆ ಅಚರು ಸುಮಾರು 20 ನಿಮಿಷಗಳ ಕಾಲ ಜಿಮ್ ಪ್ರಾಕ್ಟೀಸ್ ನಲ್ಲಿದ್ದು, ನಂತರ ಏಕಾಏಕಿ ತಲೆ ತಿರುಗಿ ಬಿದ್ದಿದ್ದಾರೆ. ಕಾರಣ ಕೇಳಿದರೆ ಅವನಿಗೆ ತರಬೇತಿ ನೀಡುತ್ತಿದ್ದ ತರಬೇತುದಾರರೇ ಸರಿಯಾದ ತಿಳುವಳಿಕೆ ಇಲ್ಲದೆ ಅವರ ವಯಸ್ಸು, ಶಕ್ತಿ ಯೋಚಿಸದೆ ಅನಗತ್ಯವಾದ ತರಬೇತಿ ನೀಡಿದ್ದರು ಎಂಬ ಆರೋಪ ಇದೆ ವಲಯದಲ್ಲಿ ಕೇಳಿ ಬಂದಿದೆ.
ಅಂತೇ ಶಿವಮೊಗ್ಗ ನಗರದ ಹಾದಿ ಬೀದಿಗಳಲ್ಲಿ ಆರಂಭಗೊಂಡಿರುವ ಜಿಮ್ ಸೆಂಟರ್ ಗಳು ಸಾವಿರಾರು ಹಣ ಪಡೆದು ತರಬೇತಿ ನೀಡುತ್ತಿದ್ದು ಇಲ್ಲಿ ಹಣ ಮಾಡುವುದೇ ಮುಖ್ಯ ಕಾಯಕವಲ್ಲ. ಅದಕ್ಕೆ ಸೂಕ್ತವೆಂಬಂತೆ ಸೂಕ್ತ ಹಾಗೂ ಸಮರ್ಪಕವಾದ ತರಬೇತಿ ಪಡೆದ ತರಬೇತುದಾರರನ್ನು ನೇಮಿಸಿಕೊಳ್ಳುವುದು ಕರ್ತವ್ಯವಲ್ಲವೇ? ಬಹಳಷ್ಟು ಜಿಮ್ ಸೆಂಟರ್ ಗಳಲ್ಲಿ ಇಂತಹ ತರಬೇತಿ ಪಡೆದ ಸಮರ್ಪಕವಾದ ತರಬೇತುದಾರರು ಇಲ್ಲ ಎಂಬ ಸಾರ್ವಾನಿಕ ಆರೋಪ ಹಾಗೂ ಜಿಮ್ ಕಲಿಕೆಯ ಯುವಕರು ಮಾಡುತ್ತಿರುವ ಆರೋಪಕ್ಕೆ ಉತ್ತರಿಸಬೇಕಾದವರು ಯಾರು? ಏನಾದರೂ ಹೆಚ್ಚು ಕಡಿಮೆ ಆದರೆ ಕಲಿಯುವರ ನೋವುಗಳಿಗೆ ನಷ್ಟಗಳಿಗೆ ಅಘಾತಗಳಿಗೆ ಕಾರಣರಾರು? ಎಂಬುದು ಸಾರ್ವಜನಿಕ ಪ್ರಶ್ನೆ.
ಅಂತೆಯೇ ಎಲ್ಲಾ ಸೆಂಟರ್ ಗಳು ಸಮರ್ಪಕವಾದ ತರಬೇತಿದಾರರನ್ನು ಹಾಗೂ ಸೂಕ್ತ ಎನಿಸುವಂತಹ ಜಿಮ್ ಉಪಕರಣಗಳನ್ನು ಬಳಸುವ ಅನಿವಾರ್ಯತೆ ಇಂದಿನ ದಿನಮಾನಗಳಲ್ಲಿ ಹೆಚ್ಚಾಗಿದೆ. ಅದಕ್ಕೆ ಅವಕಾಶ ನೀಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಮತ್ತೊಂದು ಸಾರ್ವಜನಿಕ ಮಾತು.
ಸುಮಾರು 15 ರಿಂದ 20 ಸಾವಿರ ರೂಪಾಯಿ ವೇತನ ಪಡೆಯುವ ತರಬೇತುದಾರರು ಸಮರ್ಪಕವಾದ ತರಬೇತುದಾರರಾಗಿರಬೇಕು. ನೆಪ ಮಾತ್ರಕ್ಕೆ ಹಾಗೆ ಹೀಗೆ ಎನ್ನುವ ತರಬೇತಿದಾರರನ್ನು ಹಾಗೂ ಸೂಕ್ತ ದಾಖಲಾತಿ ಇಲ್ಲದವರನ್ನು ನೇಮಿಸಿಕೊಳ್ಳುವುದನ್ನು ಜಿಲ್ಲಾಡಳಿತ ಅದರಲ್ಲೂ ಈ ಬಗ್ಗೆ ಜಿಲ್ಲಾಡಳಿತ ಅದರಲ್ಲೂ ಜಿಲ್ಲಾ ಆರೋಗ್ಯ ಇಲಾಖೆ ಒಮ್ಮೆ ಪರಿಶೀಲಿಸುವುದು ಅತ್ಯಂತ ಅವಶ್ಯಕ.
ಕ್ಲಾಸ್ ಒನ್ ಜಿಮ್ ಗಳಲ್ಲಿ ಇಂಜೆಕ್ಷನ್, ಪೌಡರ್ ಡಬ್ಬಾ ಮಾಫಿಯಾ?, ಓನರ್, ಟ್ರೈನರ್ ಜುಗಲ್ಬಂಧಿ!
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಿಮ್ ಸೆಂಟರ್ ತೆರೆದು ಆ ಹಣವನ್ನು ಆದಷ್ಟು ಬೇಗನೆ ಬಾಚಬೇಕೆಂಬ ಹೆಬ್ಬಯಕೆ ಹೊಂದಿರುವ ಮಾಲೀಕರ ಜೊತೆಗೆ ಕೈಜೋಡಿಸಿರುವ ಸರಿಯಾದ ತರಬೇತಿ ಇಲ್ಲದ ತರಬೇತುದಾರರು ಜಿಮ್ ತರಬೇತಿಗೆ ಬರುವ ಯುವಕರ ಮನವನ್ನು ದುರ್ಬಳಕೆ ಮಾಡಿಕೊಂಡು ಇಂಜಕ್ಷನ್ ಹಾಗೂ ಪ್ರೊಟೀನ್ ಪೌಡರ್ ನೆಪದಲ್ಲಿ ಸಾಕಷ್ಟು ದೋಚುತ್ತಿರುವ ಹಾಗೂ ಜಿಮ್ ತರಬೇತಿ ಪಡೆಯುವವರ ಆರೋಗ್ಯವನ್ನು ಶಾಶ್ವತವಾಗಿ ಅಳಿಸಿ ಹಾಕುವ ವ್ಯವಸ್ಥಿತ ಜಾಲತಾಣ ನಿರಂತರವಾಗಿ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಬಹುತೇಕ ಜಿಮ್ ಸೆಂಟರ್ ಗಳಲ್ಲಿ ಓಡುವ ಕುದುರೆಗೆ ನೀಡುವ ಇಂಜೆಕ್ಷನ್ ಗಳನ್ನು ತೆಗೆದುಕೊಳ್ಳಲು ತರಬೇತುದಾರರು ಜಿಮ್ ಕಲಿಕೆಗೆ ಬರುವ ಯುವಕರ ಮನದಲ್ಲಿ ತುಂಬಿ, ನಿಮ್ಮ ದೇಹ ಹೊರನೋಟದಲ್ಲಿ ಸೂಪರ್ ಆಗುತ್ತದೆ ಇದನ್ನು ತೆಗೆದುಕೊಳ್ಳಿ ಎಂದು ಪ್ರಚೋದಿಸುವ ಮೂಲಕ ಬಂದ ಲಾಭದಲ್ಲಿ ಮಾಲೀಕ ಹಾಗೂ ತರಬೇತಿದಾರ ತಲಾ 50ರಷ್ಟು ವ್ಯವಹಾರ ಮಾಡುತ್ತಿದ್ದಾನೆ ಎಂಬ ಗಂಭೀರವಾದ ಆರೋಪವನ್ನು ಜಿಮ್ ತರಬೇತಿ ಪಡೆಯುತ್ತಿರುವ ಸಾಕಷ್ಟು ಜನ ಆರೋಪಿಸಿದ್ದಾರೆ.
ಈ ಇಂಜೆಕ್ಷನ್ ಹಾಗೂ ಪೌಡರ್ ಅನ್ನು ಯಾವತ್ತೂ ಬಳಸದೆ ಇದೇ ತರಬೇತಿದಾರ ತಾನು ಮಾತ್ರ ರಾಗಿ ಅಂಬಲಿ ಹಾಗೂ ತರಕಾರಿ ತಿನ್ನುತ್ತಾನೆ. ತರಬೇತಿ ಪಡೆಯುವ ಯುವಕರಿಗೆ ಈ ಈ ಬಗ್ಗೆ ಹೊಸ ರಾಗ ತೆಗೆದು ಇವುಗಳನ್ನು ಮಾರಾಟ ಮಾಡುತ್ತಾನೆ.
ಒಂದು ಮಾಹಿತಿ ಪ್ರಕಾರ ಇವುಗಳು ಹೊರಭಾಗದ ದೇಹದಲ್ಲಿ ಹೊಸ ವರ್ತುಲವನ್ನು ತೋರಿಸಿದರೂ ಸಹ ದೇಹದ ಒಳ ಅಂಗಾಂಗಗಳು ತನ್ನ ಬೆಳವಣಿಗೆಯಲ್ಲಿ ಹಾಗೂ ಅದರ ಚಟುವಟಿಕೆಗಳಲ್ಲಿ ನಿಧಾನವಾಗಿ ಕುಂಠಿತವಾಗುತ್ತಾ ಬರುತ್ತವೆ ಎನ್ನಲಾಗಿದೆ.
ಪ್ರಾಣಿಗಳಿಗೆ ಕೊಡುವ ಇಂಜೆಕ್ಷನ್ ಬಳಕೆ ಅತ್ಯಂತ ಅಪಾಯಕಾರಿಯಾಗಿದ್ದು, ಇದು ನಿಷೇಧಿತವಾಗಿದ್ದರೂ ಸಹ ಗುಪ್ತ ಮಾರ್ಗದಿಂದ ಇಂತಹ ಔಷಧಿಗಳನ್ನು ತರಿಸಿಕೊಂಡು ಮಾರಾಟ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಒಮ್ಮೆ ಎಲ್ಲೆಡೆ ಪರೀಕ್ಷೆ ನೋಡುವ ಅಗತ್ಯವಿದೆ ಎನ್ನಲಾಗಿದೆ.
ಬಹುತೇಕ ಜಿಮ್ ಗಳಲ್ಲಿರುವ ಕಿಟ್ಗಳಲ್ಲಿ ಇಂತಹ ಪೌಡರ್ ಹಾಗೂ ಇಂಜೆಕ್ಷನ್ ಟ್ಯೂಬ್ ಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ. ರೈಡ್ ಎಂಬ ಹೆಸರು ಹೇಳಿದ ಕ್ಷಣ ನಾಲ್ಕು ದಿನ ಬಚ್ಚಿಡುವ ಕಾಯಕ ಮಾಡುತ್ತಾರೆ ಎಂದು ಇದೇ ತರಬೇತಿ ಪಡೆಯುವ ಯುವಕರು ಹೇಳುತ್ತಿದ್ದರೆ, ಇದು ದೇಹದ ಅಂಗಗಳಿಗೆ ಮಾತ್ರವಲ್ಲದೆ ಕಿಡ್ನಿ ಹಾಗೂ ಹೃದಯ ಸಂಬಂಧಿ ತೊಂದರೆಗಳಿಗೆ ಕಾರಣವೆನ್ನಲಾಗುತ್ತಿದೆ. ಹಾಗಾಗಿ ಜಿಮ್ ತರಬೇತಿ ಪಡೆಯುವ ಯುವಕರು ಇದರತ್ತ ಸೂಕ್ಷ್ಮವಾಗಿ ಎಚ್ಚರ ವಹಿಸಬೇಕು. ರಾಗಿ ಅಂಬಲಿ ಹಾಗೂ ತರಕಾರಿ ಜೊತೆ ಅವರು ಹೇಳಿದಂತೆ ಕೇವಲ ಚಪಾತಿಗೆ ಸೀಮಿತವಾಗದೆ ನಿಯಮಿತವಾಗಿ ಅನ್ನ ಸೇವನೆ ಮಾಡಲೇಬೇಕು ಎಂಬುದು ಸಾಕಷ್ಟು ಜನರ ಅಭಿಪ್ರಾಯ.
ಆರೋಗ್ಯ ಇಲಾಖೆಯವರೇ, ಶಿವಮೊಗ್ಗ ಜಿಲ್ಲಾಧಿಕಾರಿಗಳೇ ಒಮ್ಮೆ ಇತ್ತ ಗಮನಿಸಿ ಸದ್ದು ಮಾಡದೆ ಒಮ್ಮೆ ಎಲ್ಲಾ ಜಿಮ್ ಗಳನ್ನು ಏಕಕಾಲದಲ್ಲಿ ಪರಿಶೀಲಿಸಿ ನೋಡಿ.