Site icon TUNGATARANGA

ಗಣೇಶೋತ್ಸವ, ಈದ್ ಮಿಲಾದ್ :ಆಯುಧಗಳು ಮಟನ್ ಕತ್ತರಿಸಲು ಮಾತ್ರ ಉಪಯೋಗಿಸಬೇಕು ಅದನ್ನು ಬಿಟ್ಟು ರಸ್ತೆ ಮೇಲೆ ಪ್ರದರ್ಶನಕ್ಕೆ ಶುರು ಮಾಡಿದರೇ ಹೆಡೆಮುರಿ ಕಟ್ಟಬೇಕಾಗುತ್ತದೆ :ಡಿವೈಎಸ್ಪಿ ಗೋಪಾಲಕೃಷ್ಣ ಟಿ.ನಾಯಕ್ ಎಚ್ಚರಿಕೆ


ಸಾಗರ(ಶಿವಮೊಗ್ಗ),ಸೆ,೦೨:ಸಾಗರ ತಾಲ್ಲೂಕಿನಲ್ಲಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಆಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುಂಜಾಗರತಾ ಕ್ರಮಕ್ಕೆ ಮುಂದಾಗಿದೆ. ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸುವುದಕ್ಕೆ ಅವಕಾಶವಿದೆ. ಕಾನೂನು ಚೌಕಟ್ಟು ಮೀರಿದರೇ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಎಫ್‌ಐಆರ್ ದಾಖಲಿಸುವುದಾಗಿ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಖಡಕ್ ಎಚ್ಚರಿಕೆ ನೀಡಿದ್ದಾರೆ…


ಅವರು ಇತ್ತೀಚೆಗೆ ಡಿವೈಎಸ್ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಸಾಗರ ತಾಲ್ಲೂಕಿನಾದ್ಯಾಂತ ಹಬ್ಬಗಳು ಶಾಂತಿಯುತವಾಗಿಯೇ ಜರುಗಿದ್ದವು.ಪ್ರಸಕ್ತ ಭಾರಿಯೂ ಯಾವುದೇ ಅವಘಡಗಳಿಗೆ ಅವಕಾಶ ನೀಡದಂತೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದರು.


ಸೋಷಿಯಲ್ ಮೀಡಿಯಾಗಳ ಮೇಲೆ ವಿಶೇಷ ನಿಗಾ…!
ಸಮಾಜದಲ್ಲಿ ಯಾವುದೇ ಹಿಡಿತವಿಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ನಿಯಂತ್ರಣವಿಲ್ಲದೆ ಕಳುಹಿಸುತ್ತಿರುವ ಸಂದೇಶಗಳಿಂದೆ ಹಲವು ಕೆಟ್ಟ ಪರಿಣಾಮಗಳಿಗೆ ನೇರ ಕಾರಣವಾಗುತ್ತಿರುವ ಕುರಿತು ಡಿವೈಎಸ್ಪಿ ಎಚ್ಚರಿಕೆ ನೀಡಿದರು.ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡುವುದು ಹೆಚ್ಚಿದಂತೆ ಅದರ ಮೂಲಕ ಕೋಮು ಸೌಹಾರ್ಧ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳಿಗೆ ಕಾರಣವಾಗುವಂತ ಕೃತ್ಯಗಳು ಹೆಚ್ಚಾಗುತ್ತಿರುವುದು ಪೊಲೀಸ್ ಇಲಾಖೆಯ ನಿದ್ರೆ ಕೆಡಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ವಾಟ್ಸ್ ಆಪ್, ಫೇಸ್ ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಸೋಷಿಯಲ್ ಮೀಡಿಯಾಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಎಲ್ಲವನ್ನು ಚುನಾವಣೆ ಸಮಯದಲ್ಲಿ ನಿಗಾವಹಿಸಿ ಮಾನಿಟರ್ ಮಾಡಿದಂತೆ ಹಬ್ಬಗಳ ಸಂದರ್ಭದಲ್ಲಿಯೂ ನಿಯಂತ್ರಣಕ್ಕಾಗಿ ವಿಶೇಷ ನಿಗಾವಹಿಸಲಾಗುತ್ತಿದೆ ಎಂದರು.
ಸಾಗರ ತಾಲ್ಲೂಕಿನಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ತಂಡ ಕಾರ್ಯನಿರ್ವಹಿಸುತ್ತಿದೆ.ಅವರು ಎಲ್ಲಾ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳನ್ನು ಗ್ರಹಿಸುತ್ತಿರುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಕಾನೂನು ಬಾಹಿರ ಪೋಸ್ಟ್ ಹಾಕಿದ್ರೇ ಅಂತವರ ವಿರುದ್ಧ ಕ್ರಮ ಶತಸಿದ್ಧ ಎಂದು ಎಚ್ಚರಿಸಿದರು.
ಯಾರದೇ ವ್ಯಕ್ತಿಯ ತೋಜೋವಧೆ ಮಾಡುವಂತಹ ಅಥವಾ ಭಯ ಹುಟ್ಟಿಸುವಂತ ಪೋಸ್ಟ್ ಆಗಲಿ, ಅಥವಾ ಮಾರಕಾಸ್ತ್ರಗಳನ್ನು ಹಿಡಿದುಕೊಂಡಿರುವಂತ ಪೋಟೋಗಳನ್ನು ಆಗಲೀ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕುವಂತಿಲ್ಲ. ಅಂತಹ ಭಯಾನಕ ಮಾರಕಾಸ್ತ್ರವನ್ನು ಹಿಡಿದು, ಅದಕ್ಕೊಂದು ಟ್ಯಾಗ್ ಲೈನ್ ಕೊಟ್ಟು ಭಯ ಹುಟ್ಟಿಸುವಂತ ಪೋಸ್ಟ್ ಮಾಡಿದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆತಗೆ ೧೪ ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ ಎಂದರು.
ರೈತರ ಉಪಯೋಗಿಸುವ ಕತ್ತಿ ಕೊಡಲಿ ಮೊದಲಾದ ಆಯುಧಗಳು ಹೊಲದಲ್ಲಿ ಬಳಕೆಗೆ ಸೀಮಿತವಾಗಿದ್ದರೇ ಮಟನ್ ಕತ್ತರಿಸುವ ಮಚ್ಚು ಮಟನ್ ಕತ್ತರಿಸಲು ಮಾತ್ರ ಉಪಯೋಗಿಸಬೇಕು.ಅದನ್ನು ಬಿಟ್ಟು ರಸ್ತೆ ಮೇಲೆ ಪ್ರದರ್ಶನಕ್ಕೆ ಶುರು ಮಾಡಿದರೇ ಇಲಾಖೆ ಪ್ರಕರಣ ದಾಖಲಿಸಿ ಹೆಡೆಮುರಿ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದರು.


ರಾತ್ರಿ ೧೦ ಗಂಟೆಗೆ ಧ್ವನಿ ವರ್ಧಕ ಬಂದ್ ಮಾಡಲು ಸೂಚನೆ
ಸಾರ್ವಜನಿಕ ಗಣೇಶೋತ್ಸವ ಹಬ್ಬದ ಸಂದರ್ಭದಲ್ಲಿ ಆಯೋಜಕರು ಕಾನೂನು ಪಾಲಿಸಬೇಕು.ನ್ಯಾಯಾಲಯದ ಆದೇಶದಂತೆ ರಾತ್ರಿ ೧೦ ಗಂಟೆಗೆ ಧ್ವನಿ ವರ್ಧಕಗಳನ್ನು ಬಂದ್ ಮಾಡಬೇಕು.ರಾತ್ರಿ ೧೦ ಗಂಟೆಯ ನಂತರ ಧ್ವನಿವರ್ದಕ ಬಳಸಿದರೇ ಕಾರ್ಯಕ್ರಮ ಆಯೋಜಕರ ವಿರುದ್ಧ ಎಫ್‌ಐಆರ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದರು.

ಹಸಿರು ಪಟಾಕಿಯನ್ನೇ ಖರೀದಿಸಿ-ಸುಪ್ರೀಂ ಕೋರ್ಟ್ ಆದೇಶ ಪಾಲಿಸಿ
ಸುಪ್ರೀಂ ಕೋರ್ಟ್ ಮಾಲಿನ್ಯ ಹೆಚ್ಚಿಸುವಂತ ಕೆಂಪು ಪಟಾಕಿಗಳನ್ನು ನಿಷೇಧಿಸಿದೆ. ಕೇವಲ ಹಸಿರು ಪಟಾಕಿಯನ್ನು ಮಾತ್ರ ದೇಶದಾದ್ಯಂತ ಬಳಕೆ ಮಾಡಬೇಕು ಎಂದು ಸೂಚಿಸಿದೆ. ಹಸಿರು ಪಟಾಕಿಯ ಮೇಲೆ ಕ್ಯೂ ಆರ್ ಕೋಡ್ ಇರುತ್ತದೆ. ಅದನ್ನು ಸ್ಕ್ಯಾನ್ ಮಾಡಿದ್ರೆ ಅದು ಹಸಿರೋ ಅಥವಾ ಕೆಂಪು ಪಟಾಕಿಯೋ ಅಂತ ತಿಳಿಯಲಿದೆ ಎಂದರು.


ಪಟಾಕಿ ಬಳಸಿ ಏನಾದರೂ ಅನಾಹುತ ಸಂಭವಿಸಿದರೇ ಪಟಾಕಿ ಬಳಕೆದಾರರ ವಿರುದ್ಧ ಐಪಿಸಿ ಸೆಕ್ಷನ್ ೨೮೪ ಅಡಿಯಲ್ಲಿ ದೂರು ದಾಖಲಿಸಲಾಗುತ್ತದೆ. ಪಟಾಕಿಯನ್ನು ಮಾರಾಟ ಮಾಡುವವರು ಕೇವಲ ಹಸಿರು ಪಟಾಕಿಯನ್ನು ಮಾತ್ರವೇ ಮಾರಾಟ ಮಾಡಬೇಕು.ನಿಷೇದಿತ ಕೆಂಪು ಪಟಾಕಿ ಮಾಡುವಂತಿಲ್ಲ ಎಂದು ಸೂಚಿಸಿದರು.

ಡಿಜೆ ಸೌಂಡ್ಸ್ ಬಳಕೆಗೆ ಅವಕಾಶವಿಲ್ಲ
ಗಣೇಶೋತ್ಸವ ಹಾಗೂ ಗಣೇಶನ ಉತ್ಸವಗಳಲ್ಲಿ ವಿಸಜ್ನಾಪೂರ್ವ ಮೆರವಣಿಗೆಯಲ್ಲಿ ಡಿಜೆ ಸೌಂಡ್ಸ್ ಬಳಕೆಗೆ ಅವಕಾಶವಿಲ್ಲ. ಕೇವಲ ಧ್ವನಿ ವರ್ಧಕ ಮಾತ್ರ ಬಳಕೆ ಮಾಡಬೇಕು. ಆದರೇ ಮಾಲೀನ್ಯ ಮಂಡಳಿಯ ನಿಯಮಗಳಿಗೆ ಅನುಸಾರವಾಗಿ ಮಾತ್ರ ಧ್ವನಿವರ್ಧಕ ಬಳಕೆ ಮಾಡಬೇಕು,ಬಾಡಿಗೆಗೆ ನೀಡುವವರು ನಿಯಮ ಮೀರಿದರೇ ಸೌಂಡ್ ಸಿಸ್ಟಂಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಬೇಕಾಗುತ್ತದೆ ಎಂದರು.
ಎಂಬ ಸೂಚನೆ ನೀಡಿದರು.

ಗಾಂಜಾ ವ್ಯಸನ ನಿಯಂತ್ರಣಕ್ಕೆ
ಕಠಿಣ ಕ್ರಮ
ತಾಲ್ಲೂಕಿನಲ್ಲಿ ಗಾಂಜಾ ಪ್ರಕರಣಗಳಿಗೆ ಬ್ರೇಕ್ ಹಾಕುವ ಕೆಲಸ ಮಾಡಲಾಗುತ್ತಿದೆ. ಗಾಂಜಾ ಸೇವನೆಯ ನಂತ್ರ ಮೂರು ದಿನಗಳ ಕಾಲ ಅವರ ದೇಹದಲ್ಲಿ ಗಾಂಜಾ ಅಂಶ ಇರುತ್ತದೆ. ಪರೀಕ್ಷೆಯಲ್ಲಿ ದೃಢಪಟ್ಟರೇ, ಅಂತವರ ವಿರುದ್ಧ ಕೋಕಾ ಕಾಯ್ದೆಯಡಿ ದೂರು ದಾಖಲಿಸಿಕೊಂಡು, ಜೈಲಿಗೆ ಕಳಿಸೋ ಕೆಲಸ ಮಾಡಲಿದ್ದೇವೆ ಎಂಬುದಾಗಿ ಎಚ್ಚರಿಕೆ ಡಿದರು.

ಗಾಂಜಾ ಕೇಸ್ ನಿಯಂತ್ರಣ
ಸಾಗರ ತಾಲ್ಲೂಕಿನಲ್ಲಿ ಗಾಂಜಾ ಪ್ರಕರಣಗಳಿಗೆ ಕಡಿವಾಣ ಹಾಕಲಾಗುತ್ತಿದೆ. ೨೦೨೩ರಲ್ಲಿ ೧೪ ಕೇಸ್ ದಾಖಲಾಗಿದ್ದರೇ, ೨೦೨೪ರಲ್ಲಿ ೧೧ ಪ್ರಕರಣ ದಾಖಲಾಗಿದ್ದಾವೆ. ಸಾಗರ ಹೊರ ವಲಯಗಳಲ್ಲಿ ಅಪರಾಧ ಚಟುವಟಿಕೆಗಳ ಯಂತ್ರಣಕ್ಕೆ ಕ್ರಮವಹಿಸಲಾಗುತ್ತಿದೆ ಎಂದರು.
ಅಪರಾಧ ಹಿನ್ನಲೆಯುಳ್ಳವರ (ರೌಡಿಶೀಟರ್‌ಗಳ) ಪರೇಡ್
ಗಣೇಶೋತ್ಸವ, ಈದ್ ಮಿಲಾದ್ ಹಬ್ಬಗಳ ಮುಂಜಾಗ್ರತಾ ಕ್ರಮವಾಗಿ ಅಪರಾಧ ಚಟುವಟಿಕೆಗಳ ಹಿನೆಲೆಯನ್ನು ಹೊಂದಿರುವವರನ್ನು (ರೌಡಿಶೀಟರ್‌ಗಳನ್ನು)ಪರೇಡ್ ನಡೆಸಿ, ಎಚ್ಚರಿಕೆ ನೀಡಲಾಗಿದೆ. ರೌಡಿ ಪೆರೇಡ್‌ನಲ್ಲಿ ಖಡಕ್ ಎಚ್ಚರಿಕೆ ನೀಡಿ ಯಾವುದೇ ಅಹಿತಕರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೂ ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳು ವುದಾಗಿ ವಾರ್ನಿಂಗ್ ಮಾಡಲಾಗಿದೆ ಎಂದು ಹೇಳಿದರು.

ಸಾಗರ ನಗರದಾಧ್ಯಂತ ಸಿಸಿಟಿವಿ ಕಣ್ಗಾವಲು
ಸಾಗರ ನಗರದಲ್ಲಿ ಗಣೇಶೋತ್ಸವ ಮೆರವಣಿಗೆ ಮತ್ತು ಈದ್‌ಮಿಲಾದ್ ಪ್ರಯುಕ್ತ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮದ ಮೊದಲ ಪ್ರಯತ್ನ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ. ಇಲಾಖೆಯ ವತಿಯಿಂದ ಹಲವೆಡೆ ಸಿಸಿಟಿವಿ ಹಾಕಲಾಗಿದೆ. ಇದಲ್ಲದೇ ಸಾರ್ವಜನಿಕ ವಲಯದ ಸಿಸಿಟಿವಿಗಳನ್ನು ಸುವ್ಯವಸ್ಥಿತ ರೀತಿಯಲ್ಲಿ ಇಡುವಂತೆ ಸೂಚಿಸಲಾಗಿದೆ. ನಾವು ಕಚೇರಿಯಲ್ಲಿಯೇ ಎಲ್ಲಾ ಸಿಸಿ ಟಿವಿ ದೃಶ್ಯಾವಳಿಯನ್ನು ವೀಕ್ಷಿಸ ಬಹುದು. ಅದಕ್ಕಾಗಿ ನಮ್ಮಲ್ಲಿ ಮೊಬೈಲ್ ಆಪ್ ಕೂಡ ಇದೆ ಎಂದರು.
ನಗರದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ. ಎಲ್ಲೆಡೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದರೂ ತಕ್ಷಣವೇ ಪೊಲೀಸರು ಸ್ಥಳಕ್ಕೆ ದಾವಿಸಿ ಸೂಕ್ತ ಮುಂಜಾಗೃತಾ ಕ್ರಮವಹಿಸುತ್ತಾರೆ ಎಂದು ತಿಳಿಸಿದರು.
ಸಂಚಾರಿ ನಿಯಮಗಳ ಪಾಲನೆ-ಅಪಘಾತಗಳ ವಾಹನ ತಪಾಸಣೆ ಅಭಿಯಾನ
ಭಾರತದಲ್ಲಿ ಶೇ.೧ರಷ್ಟು ವಾಹನಗಳಿದ್ದರೇ, ಅಪಘಾತಗಳ ಸಂಖ್ಯೆ ಮಾತ್ರ ಶೇ.೧೦ರಷ್ಟು ಎನ್ನುವುದು ವಿಷಾದದ ಸಂಗತಿಯಾಗಿದೆ. ಅಪಘಾತ ಆಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಬೈಕ್‌ಗಳ ತಪಾಸಣೆ ನಡೆಸುವಂತ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಹೀಗಾಗಿ ಅಪಘಾತಗಳನ್ನು ತಡೆಯುವ ಹಿನ್ನಲೆಯಲ್ಲಿ ವಾಹನಗಳ ತಪಾಸಣೆಯನ್ನು ಸಾಗರ ತಾಲ್ಲೂಕಿ ನಾಧ್ಯಂತ ತೀವ್ರಗೊಳಿಸಲಾಗಿದೆ ಎಂಬುದಾಗಿ ತಿಳಿಸಿದರು.
೨೦೨೩ರಲ್ಲಿ ಸಾಗರ ತಾಲ್ಲೂಕಿನಲ್ಲಿ ೪೪ ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದರೇ, ೨೦೨೪ರ ಇಲ್ಲಿಯವರೆಗೆ ೩೩ ಮಂದಿ ಸಾವನ್ನಪ್ಪಿದ್ದಾರೆ. ೨೦೨೩ರಲ್ಲಿ ೧೪೩ ಅಪಘಾತಗಳ ಕೇಸ್ ದಾಖಲಾಗಿದ್ದರೇ, ೨೦೨೪ರಲ್ಲಿ ೧೦೭ ದಾಖಲಾಗಿದ್ದಾವೆ. ಶೇ.೯೦ರಷ್ಟು ಸಾವುಗಳು ಬೈಕ್ ಅಪಘಾತದಿಂದಲೇ ಸಂಭವಿಸಿದ್ದಾವೆ ಎಂದು ಅಂಕಿ-ಅಂಶಗಳ ಸಹಿತ ವಿವರಿಸಿದರು. ಬೈಕ್ ಸವಾರರು ಹೆಲ್ಮೆಟ್ ಧರಿಸದ ಕಾರಣ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬುದಾಗಿ ಮಾಹಿತಿ ನೀಡಿದರು.
ಕುಡಿದು ಚಾಲನೆ (ಡ್ರಕ್ಸ್ & ಡ್ರೈವ್)ಮಾಡಿದ್ರೇ ಪ್ರಕರಣ ದಾಖಲಿಸಿ ದಂಡ ವಸೂಲಿ
ಸಾಗರ ತಾಲ್ಲೂಕಿನ (ಡ್ರಿಂಕ್ಸ್ ಅಂಡ್ ಡ್ರೈವ್)ಕುಡಿದು ವಾಹನ ಚಲಾಯಿಸುವವರ ತಪಾಸಣೆ ಹೆಚ್ಚು ಮಾಡಲಾಗುತ್ತಿದೆ. ಕುಡಿದು ವಾಹನ ಚಾಲನೆ ವೇಳೆ ಸಿಕ್ಕಿಬಿದ್ದರೇ ದುಬಾರಿ ದಂಡವನ್ನು ತೆರಬೇಕಾಗುತ್ತದೆ. ಎರಡನೇ ಬಾರಿಗೆ ಪುನರಾ ವರ್ತನೆಯಾದರೆ (ಡಿಎಲ್)ಚಾಲನಾ ಪರವಾನಿಗೆ ರದ್ದು ಸೇರಿದಂತೆ ಮತ್ತಷ್ಟು ಕಾನೂನಿನ ಕ್ರಮವಹಿಸಲಾಗುವುದು ಎಂದರು. ಯಾವುದೇ ವಾಹನ ಸವಾರರು ಕುಡಿದು ವಾಹನ ಚಾಲನೆ ಮಾಡದಂತೆ ಮನವಿ ಮಾಡಿದರು.
ಸಾಗರ ತಾಲ್ಲೂಕಿನಲ್ಲಿ ೨೦೨೩ರಲ್ಲಿ ಸಂಚಾರ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಕಾರಣಗಳಿಂದ ವಾಹನ ಸವಾ ರರ ವಿರುದ್ಧ ೬೯೯೦ ಪ್ರಕರಣ ದಾಖಲು ಮಾಡಲಾಗಿದೆ. ೨೦೨೪ರಲ್ಲಿ ೨೫೦೦ ಪ್ರಕರಣ ದಾಖಲು ಮಾಡಲಾಗಿದೆ. ಇವುಗ ಳಲ್ಲಿ ೨೦೨೩ರಲ್ಲಿ ಕುಡಿದು ವಾಹನ ಚಾಲನೆ ಮಾಡಿದ್ದಕ್ಕೆ ೩೮ ಪ್ರಕರಣ ಹಾಗೂ ೨೦೨೪ರಲ್ಲಿ ೧೯ ಪ್ರಕರಣ ದಾಖಲಿಸಲಾಗಿದೆ ಎಂದರು.
ಗಣೇಶೋತ್ಸವಕ್ಕೆ ಅನುಮತಿಗಾಗಿ ಏಕಗವಾಕ್ಷಿ ಕೌಂಟರ್
ನಗರದ ವಿವಿಧ ಭಾಗಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸಂಬಂಧ ಆಯೋಜಕರು ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ತಹಶೀಲ್ದಾರ್ ಕಚೇರಿ, ನಗರ ಸಭೆಯಲ್ಲಿ ಗಣೇಶೋತ್ಸವಕ್ಕೆ ಅನುಮತಿಗಾಗಿ ಏಕಗವಾಕ್ಷಿ ಕೌಂಟರ್ ತೆರೆಯಲಾಗುತ್ತಿದೆ. ಈಗಾಗಲೇ ೧೨ ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳಲ್ಲಿ ವಿವಿಧ ಕಾರಣಗಳಿಂದ ೫ ಅರ್ಜಿಗಳನ್ನು ರಿಜೆಕ್ಟ್ ಮಾಡಲಾಗಿದೆ ಎಂದರು.
ಬೆಂಕಿ, ವಿದ್ಯುತ್ ಅವಘಢ ಸಂಭವಿಸಿದರೇ ಆಯೋಜಕರೇ ಹೊಣೆ
ಗಣೇಶ ಮೂರ್ತಿಯನ್ನು ಕೂರಿಸುವ ವೇಳೆಯಲ್ಲಿ ಹಾಕಲಾಗುವ ಪೆಂಡಾಲ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗದಂತೆ ವ್ಯವಸ್ಥೆ ಮಾಡಬೇಕು. ಪೆಂಡಾಲ್ ಗೆ ಬಳಕೆ ಮಾಡುವಂತ ಕಬ್ಬಿಣದ ಕಂಬಳಿಗೆ ವಿದ್ಯುತ್ ಪ್ರವಹಿಸದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ವಿದ್ಯುತ್, ಬೆಂಕಿ ಅವಘಡ ಗಳು ಸಂಭವಿಸಿದರೇ ಆಯೋಜಕರು, ಪೆಂಡಾಲ್ ಹಾಕಿದ ಶಾಮಿಯಾನದವರನ್ನು ಸೇರಿಸಿ ಇಬ್ಬರ ವಿರುದ್ಧವೂ ಎಫ್‌ಐಆರ್ ದಾಖಲಿಸುವುದಾಗಿ ಎಚ್ಚರಿಸಿದರು.

Exit mobile version