Site icon TUNGATARANGA

ಅನುದಾನ ರಹಿತ ಶಾಲಾ ಶಿಕ್ಷಕರನ್ನು  ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪರಿಗಣಿಸಿ ಅನುದಾನ ರಹಿತ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮನವಿ

ಸೆ.೫ ರಂದು ನಡೆಯುವ  ಶಿಕ್ಷಕರ ದಿನಾಚರಣೆ  ಹಿನ್ನೆಲೆಯಲ್ಲಿ ಶಿಕ್ಣಣ ಇಲಾಖೆಯು ಸರ್ಕಾರಿ‌ ಮತ್ತು ಅನುದಾನಿತ ಶಾಲೆಗಳಲ್ಲಿನ‌ ಅರ್ಹ ಶಿಕ್ಷಕರಿಗೆ ನೀಡುವ ‘ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ‘ ಗೆ  ಅನುದಾನ ರಹಿತ ಶಾಲೆಗಳಲ್ಲಿನ ಅತ್ಯುತ್ತಮ ಶಿಕ್ಷಕರನ್ನೂ  ಪರಿಗಣಿಸುವಂತೆ 

ಅನುದಾನ ರಹಿತ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಒತ್ತಾಯಿಸಿದೆ.

         ಈ‌ ಕುರಿತು ಅನುದಾನ ರಹಿತ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರಪ್ಪ ತಿಮ್ಮೇನಹಳ್ಳಿ‌ಅವರು ಪತ್ರಿಕಾ ಹೇಳಿಕೆ ನೀಡಿದ್ದು, ಬರುವ ಸೆ.೦೫:ರ ಶಿಕ್ಷಕರ ದಿನಾಚರಣೆ ಸಂಭ್ರಮ. ಮಕ್ಕಳಿಗೆ ಶಿಕ್ಷಣ ಕಲಿಸಿದ ಶಿಕ್ಷಕರಿಗೆ ಗೌರವ ಸಲ್ಲಿಸುವ ಅಪರೂಪದ ದಿನ. ಈ ದಿನವನ್ನು ಸಂಭ್ರಮದಿಂದ‌ ಆಚರಿಸಲು ಶಿಕ್ಷಣ ಇಲಾಖೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಅಷ್ಟು ಮಾತ್ರವಲ್ಲ ಶಿಕ್ಷಕರ ಸಂಘಟನೆಗಳು ಕೂಡ ಸಿದ್ದತೆ ನಡೆಸಿವೆ. ಈ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರನ್ನು ಗೌರವಿಸುವುದರ ಜತೆಗೆ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಅವರನ್ನು ಅಭಿನಂದಿಸುವ ಸಮಾರಂಭವೂ ಇರುತ್ತದೆ.‌ ಪ್ರತಿ ವರ್ಷವೂ ಇದು ನಡೆದುಕೊಂಡು ಬಂದಿದೆ. ಇಂತಹ ಅಪರೂಪದ ದಿನದಂದು ಅನುದಾನ ರಹಿತ ಶಾಲೆಗಳಲ್ಲೂ ಕೆಲಸ‌ನಿರ್ವಹಿಸುವ ಅತ್ಯುತ್ತಮ ಶಿಕ್ಷಕರನ್ನು ಕೂಡ ಶಿಕ್ಷಣ ಇಲಾಖೆ ಗುರುತಿಸಿ, ಅವರಿಗೂ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸುವಂತೆ ಅವರು ಒತ್ತಾಯಿಸಿದ್ದಾರೆ.

       ಶಿಕ್ಷಕರು ಅಂದರೆ ಬರೀ ಸರ್ಕಾರಿ ಶಾಲೆಗಳಲ್ಲಿ ಅಥವಾ ಅನುದಾನಿತ ಶಾಲೆಗಳಲ್ಲಿ ಕೆಲಸ‌ ಮಾಡುವವರು ಮಾತ್ರವಲ್ಲ, ಅನುದಾನ ರಹಿತ ಶಾಲೆಗಳಲ್ಲೂ ಕಡಿಮೆ ವೇತನಕ್ಕೆ  ಹಲವಾರು ವರ್ಷಗಳಿಂದ ದುಡಿಯುತ್ತಾ ಬಂದವರು ಕೂಡ ಶಿಕ್ಷಕ ರೆ ಹೌದು. ಅವರು ಕೂಡ ಮಕ್ಕಳ‌ ಶಿಕ್ಷಣಕ್ಕಾಗಿ ಶ್ರಮಿಸುತ್ತಾ ಬರುತ್ತಿದ್ದಾರೆ.‌ಹಾಗಾಗಿ ಸರ್ಕಾರವು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಅವರ ಸೇವೆಯನ್ನು‌ಕೂಡ ಪರಿಗಣಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

 ಸರ್ಕಾರಿ  ವ್ಯವಸ್ಥೆ ಅನುದಾನ‌ರಹಿತ ಶಿಕ್ಷಕರನ್ನು ಮೊದಲಿನಿಂದಲೂ ಕಡೆಗಣಿಸುತ್ತಾ ಬಂದಿದೆ.ಫಲಿತಾಂಶದ ವಿಚಾರದಲ್ಲಿ ಲೆಕ್ಕ ಹಾಕಿದರೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗಿಂತ ಉತ್ತಮ ಫಲಿತಾಂಶವು ಅನುದಾನ ರಹಿತ ಶಾಲೆಗಳಲ್ಲೂ ಬರುತ್ತಿದೆ. ಪಠ್ಯಚಟುವಟಿಕೆಗಳ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ಸಕ್ರಿಯವಾಗಿ ತೊಡಗಿಸಿಕೊಳ್ಳುವಲ್ಲಿ ಅನುದಾನ ರಹಿತ ಶಾಲೆಗಳಲ್ಲಿನ ಶಿಕ್ಷಕ ರು ಕೂಡ ತಮ್ಮದೇ ಕೊಡುಗೆ ನೀಡಿದ್ದಾರೆ.ಕ್ರೀಡೆಗಳ ವಿಚಾರದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟುಗಳು ಇಲ್ಲಿಂದಲೂ ಹೋಗಿದ್ದಾರೆ.ಇಂತಹ ಶಿಕ್ಷಕರ ಶ್ರಮವನ್ನು ಸರ್ಕಾರ ಗುರುತಿಸದಿರುವುದು ನಿಜಕ್ಕೂ ಅನ್ಯಾಯವೇ ಹೌದು. ಹಾಗಾಗಿ ಈ ಅನ್ಯಾಯ ಅಥವಾ ತಾರಾತಮ್ಯ ಈ ವರ್ಷವಾದರೂ ಸರಿಯಾಗಬೇಕು ಎಂದು ಆಗ್ರಹಿಸಿದ್ದಾರೆ.

         ಜಿಲ್ಲೆಯ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘವು ಈ ಬಗ್ಗೆ ಸಾಕಷ್ಟು ಬಾರಿ  ಶಿಕ್ಷಣ ಇಲಾಖೆಗೆ ಮನವಿ ಮಾಡಿದೆ. ಅಧಿಕಾರಿಗಳನ್ನು ಭೇಟಿ ಮಾಡಿ, ಈ‌ ಅನ್ಯಾಯ ಸರಿಪಡಿಸುವಂತೆಯೂ ಕೇಳಿಕೊಂಡಿದೆ.‌ಆದರೂ ಯಾವುದೇ   ಪ್ರಯೋಜವವಾಗಿಲ್ಲ. ಈಗ ಜಿಲ್ಲೆಯವರೇ ಮಧು ಎಸ್.‌ಬಂಗಾರಪ್ಪನವರು ಶಿಕ್ಷಣ ಸಚಿವರಾಗಿರುವುದು ನಮ್ಮ ಸೌಭಾಗ್ಯವೇ ಆಗಿದೆ. ಅವರು ಈ‌ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಿ, ಅನುದಾನ ರಹಿತ ಶಾಲೆಗಳ ಶಿಕ್ಷಕರ ಸಂಘದ ಬೇಡಿಕೆಯನ್ನು ಆದ್ಯತೆ ಮೇರೆಗೆ ಪರಿಗಣಿಸಿ, ಸರಿಪಡಿಸಬೇಕು.‌ ಶಿಕ್ಷಕರನ್ನು ಗೌರವಿಸುವ ವಿಚಾರದಲ್ಲೂ ಯಾವುದೇ ತಾರತಮ್ಯ ಮಾಡದೆ, ಈ ಅನ್ಯಾಯವನ್ನು ಸರಿಪಡಿಸುವ ಮೂಲಕ‌ ರಾಜ್ಯಕ್ಕೆ ಮಾದರಿಯಾಗುವಂತೆ ಅನುದಾನ ರಹಿತ ಶಾಲೆಗಳ ಶಿಕ್ಷಕರನ್ನು ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಪರಿಗಣಿಸುವ ಪರಿಪಾಠವನ್ನು ಜಿಲ್ಲೆಯಿಂದಲೇ‌ ಆರಂಭಿಸಬೇಕೆಂದು ರಾಮಚಂದ್ರ ಪ್ಪ ತಿಮ್ಮೇನಹಳ್ಳಿ ಮನವಿ‌ಮಾಡಿದ್ದಾರೆ.

Exit mobile version