ಶಿವಮೊಗ್ಗ,ಆ.೩೧: ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವ ಅವೈಜ್ಞಾನಿಕ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಘಟಕದ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆದು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು…
ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯಲು ಸುಮಾರು ೪೦೦ ಕಿ.ಮೀ. ಆಗಲಿದೆ. ಇಷ್ಟು ದೂರ ನೀರು ಒಯ್ಯುವುದು ವೈಜ್ಞಾನಿಕವಲ್ಲ, ಇಂತಹ ಯೋಜನೆಯಿಂದ ಯಾರಿಗೂ ಲಾಭವಿಲ್ಲ, ದಟ್ಟ ಕಾಡಿನ ನಡುವೆ ೩೫೦ ಎಕರೆ ಜಾಗದಲ್ಲಿ ಪಂಪ್‌ಸ್ಟೋರೆಜ್ ಮಾಡಿ ವಿದ್ಯುತ್ ಉತ್ಪಾಧಿಸುವುದು, ನದಿ ನೀರನ್ನು ಕೊಳವೆ ಮೂಲಕ ೪೦೦ ಕಿ.ಮೀ.ಹರಿಸುವಂತಹ ಯೋಜನೆಗಳು ಪ್ರಪಂಚದ ಯಾವುದೇ ಮೂಲೇಯಲ್ಲಿ ಇಲ್ಲ, ಅದರಲ್ಲೂ ಮಲೆನಾಡಿನ ಹಳ್ಳಿಗಳಿಗೆ ಬೇಸಿಗೆಯಲ್ಲಿ ಟ್ಯಾಂಕರ್‌ನಲ್ಲಿ ನೀರು ಕೊಡುವ ಸ್ಥಿತಿ ಇರುವಾಗ ಮತ್ತೇಕೆ ಇಂತಹ ಬೃಹತ್ ಯೋಜನೆ ಎಂದು ಪ್ರತಿಭಟನಕಾರರು ಪ್ರಶ್ನಿಸಿದ್ದಾರೆ.
ಕೇವಲ ೧೩೫ ಕಿ.ಮೀ. ಹರಿಸುವ ಇಷ್ಟು ಚಿಕ್ಕ ನದಿಯ ಮೇಲೆ ಆಗಿರುವ ದೌರ್ಜನ್ಯ ಪ್ರಪಂಚದ ಬೇರೆ ಯಾವುದೇ ನದಿಯ ಮೇಲೂ ಹಾಗಿಲ್ಲ, ಇದು ನದಿ ತೀರವೂ ಅಲ್ಲ, ಶರಾವತಿ ಅಪಹರಣ. ಇದೊಂದು ಹಾಸ್ಯಸ್ಪದ ಯೋಜನೆಯಾಗಿದೆ ಎಂದು ದೂರಿದರು. ಹಿರೇಭಾಸ್ಕರ್ ಅಣೆಕಟ್ಟು ನಿರ್ಮಿಸಿದ್ದರಿಂದ ಹೊನ್ನಾವರದಲ್ಲಿ ನೀರಿನ ಅರಿವು ಕಡಿಮೆಯಾಗಿದೆ. ನದಿ ನೀರು ಸಮುದ್ರ ಸೇರುವುದು ಕಡಿಮೆಯಾದಲ್ಲಿ ೧೫ ಕಿ.ಮೀ. ವರೆಗೆ ಉಪ್ಪು ನೀರು ನುಗ್ಗುತ್ತದೆ. ಅಲ್ಲಿನ ಜೀವವೈವಿಧ್ಯವೇ ಹಾಳಾಗುತ್ತದೆ. ಹಲವು ತಜ್ಞರು ಶರಾವತಿ ನೀರು ತಿರುವು ಅವೈಜ್ಞಾನಿಕ ಎಂದು ಹೇಳಿದ್ದರೂ ಸರ್ಕಾರ ಮತ್ತೆ ಅದೇ ಕಾರ್ಯವನ್ನು ರೂಪಿಸುತ್ತಿದೆ ಎಂದು ಆರೋಪಿಸಿದರು.
೨೫ ಸಾವಿರ ಕೋಟಿ ರೂ. ವೆಚ್ಚಮಾಡಿ ಶರಾವತಿಯಿಂದ ಬೆಂಗಳೂರಿಗೆ ನೀರು ಕೊಂಡ್ಯುಯ್ಯುದು ಏನು ಸಾಧಿಸಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿರುವ ನೀರನ್ನು ಸದ್ಭಳಕೆ ಮಾಡಿಕೊಂಡರೆ ಸಾಕು. ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯ ಅಗತ್ಯವಿದೆ. ಈ ಅವೈಜ್ಞಾನಿಕ ಯೋಜನೆ ಜಾರಿಯಾದರೆ ಜಿಲ್ಲೆಯಾದ್ಯದಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸೋಮನಾಥ್ ಕೆ.ಆರ್., ಮಾಜಿ ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್, ಪ್ರಮುಖರಾದ ಎನ್.ಪರಮೇಶ್ವರಪ್ಪ, ಮಲ್ಲಿಕಾರ್ಜುನ ಕಾನೂರು, ಪುಷ್ಪವತಿ, ಬಳ್ಳಕೆರೆ ಸಂತೋಷ್, ಸ್ವಾಮಿ, ಶಂಕರಪ್ಪ, ಬಸಪ್ಪ, ಸುಕುಮಾರ್, ರಾಜಶೇಖರ, ಸುಧಾ ಸೇರಿದಂತೆ ಹಲವರಿದ್ದರು.