ಪ್ರಪಂಚದ ಪ್ರತಿಯೊಬ್ಬರಿಗೂ ಮದರ್ ತೆರೇಸಾರಾ ಜೀವನವೇ ಒಂದು ಸಂದೇಶ, ಸ್ಪೂರ್ತಿಯ ಸೆಲೆ, ಪ್ರೀತಿ, ಕರುಣೆಯೇ ಇವರ ಬದುಕು, ತ್ಯಾಗ ಸೇವೆಯೇ ಇವರ ಉಸಿರು, ಕಲ್ಕತ್ತಾದ ಕೊಳಗೇರಿ ದೀನರನ್ನೋಳಗೊಂಡು ಜಗತ್ತಿನ ಲಕ್ಷಾಂತರ ಅನಾಥರ ಅಸಹಾಯಕರ ಬದುಕಿಗೆ ಆತ್ಮ ವಿಶ್ವಾಸ ಸ್ಮರಿಸಿ, ಅನ್ನ, ಬಟ್ಟೆ, ಆರೋಗ್ಯ ನೀಡಿದ ಮಹಾಮಾತೆ.
ಮಾನವ ಸೇವೆಯೇ ಮಾಧವ ಸೇವೆಯೆಂದು ಅಚಲವಾಗಿ ನಂಬಿದ ತೆರೇಸಾರಿಗೆ ‘ಇತರರ ಕಣ್ಣೀರು ನೀನು ಒರೆಸು, ದೇವರು ನಿನ್ನ ಕಣ್ಣೀರು ಒರೆಸುತ್ತಾನೆ’ ಎಂಬ ಮಾತಿನಲ್ಲಿ ವಿಶೇಷ ನಂಬಿಕೆ.
ಕುಬ್ಬ ಶರೀರ, ನಿರಿಗೆ ಮಾಡಿದ ಮುಖ , ವಯೋಮಾನಕ್ಕನು ಗುಣವಾಗಿ ಮಡಚಿಕೊಂಡ ಚರ್ಮ, ಆದರೆ ಅಂತರಾಳದಲ್ಲಿ ಅಸಾಧಾರಣ ಸತ್ವ ಅದಮ್ಯ, ಚೈತನ್ಯ, ಕಿಂಚಿತ್ತೂ ಕಲೆಯಿಲ್ಲದ ಶುಭ್ರ ಶ್ವೇತ ಸೀರೆ, ಅದಕ್ಕೆ ನೀಲಿ ಅಂಚು, ತುಂಬು ತಲೆಗೆ ಕವಚದಂತೆ ಧರಿಸಿದ ಆ ಸೀರೆಯಲ್ಲಿ ಅವರನ್ನು ನೋಡುವುದೇ ಒಂದು ಅಮೋಘ, ಅದ್ಬುತ.
ಮದರ್ ತೆರೇಸಾ ಅವರು ಸಾಧಕ ತಪಸ್ವಿ, ಶಾಂತಮಾತೆ, ವಿಶ್ವಪ್ರೇಮ, ಜಾತಿ, ಮತ, ದೇಶಖಂಡಗಳ ಬಂಧನಕ್ಕೆ ಸಿಲುಕದೇ ವಿಶ್ವವ್ಯಾಪಿ ಸೇವೆ ಶಾಂತಿಗಾಗಿ ಜೀವನವನ್ನೇ ಮುಡುಪಾಗಿಟ್ಟ ವಿಶ್ವಮಾತೆ.
ಯುಗೋಸ್ಲೋವಿಯಾದ ಸ್ಕೂಪೆಜ್ ಗ್ರಾಮದಲ್ಲಿ 1910 ಅಗಸ್ಟ್ 27 ರಂದು ಮದರ್ ತೆರೇಸಾರ ಜನನ, ತಂದೆ ನಿಕೋಲಸ್ ಭೋಜಕ್ಷ ತಾಯಿ ಡ್ರನ್ ಫ್ರೆಲ್ ಬೆರ್ನೆಲ್, ಮೂವರು ಮಕ್ಕಳಲ್ಲಿ ಕಿರಿಯ ಸುಪುತ್ರಿಯೇ ಮದರ್ ತೆರೇಸ. ತೆರೇಸಾರ ಮೂಲ ಹೆಸರು ಅಗ್ನೆಸ್ ಗೊಂಜಾ ಭೋಜಕ್ಷ. ಅಲ್ಜೇನಿಯಾ ಭಾಷೆಯಲ್ಲಿ ಹೂ-ಮೊಗ್ಗು ಎಂದು ಅರ್ಥ. ಅದರಂತೆ ತೆರೇಸಾ ಹೂವಾಗಿ ಅರಳಿ ಎಲ್ಲರ ಬದುಕಿನಲ್ಲಿ ಸುವಾಸನೆಯ ಹರಡಿ ನಿಷ್ಕಳಂಕ ಸೇವೆಗೆ ಸಂಕೇತವಾದಳು.
ಮದರ್ ತೆರೇಸಾರಾ ತಾಯಿ ಎಲ್ಲರಂತೆ ತಮ್ಮ ಮಗಳಿಗೆ ಸರಿಯಾದ ವರ ನೋಡಿ ಮದುವೆ ಮಾಡಬೇಕೆಂದು ಬಯಸಿದರು. ಆದರೆ ತೆರೇಸಾರ ನನ್ ಎಂದರೆ ಸಂನ್ಯಾಸಿ ಆಗಲು ದೃಢ ನಿರ್ಧಾರ ತೆಗೆದುಕೊಂಡು ತನ್ನ ತಾಯಿಯ ಮನಸ್ಸನ್ನು ಬದಲಾಯಿಸಿದರು.
ಜನಸೇವೆಗೆ ಅರ್ಪಣೆ : 18 ನೇ ವಯಸ್ಸಿನಲ್ಲಿ ಐರ್ಲೆಂಡ್ ದೇಶದ ಡಬ್ಲಿನ್‌ನಲ್ಲಿದ್ದ ಲೊರೆಟೋ ಅಬೀ ಸೇವಾ ಕೇಂದ್ರ ಸೇರಿದಳು. ನಂತರ ಅವರು ಕಲ್ಕತ್ತಾಕ್ಕೆ ಬಂದರು. ಇದು ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಕೊಳಗೇರಿಗಳನ್ನು ತನ್ನ ಒಡಲಲ್ಲಿಟ್ಟುಕೊಂಡ ನರಕ ಸದೃಶ್ಯನಗರ, ರಸ್ತೆಯ ಇಕ್ಕೆಲಗಳಲ್ಲಿ ಅಂಗವಿಕಲರು, ಕುಷ್ಟರೋಗಿಗಳು, ದಿಕ್ಕಿಲ್ಲದ ನಗ್ನ ಮಕ್ಕಳು ಹಿಡಿ ಅನ್ನಕ್ಕಾಗಿ ಗೋಗರೆಯುವುದು ಸರ್ವೆ ಸಾಮಾನ್ಯ ಈ ಹೃದಯ ವಿದ್ರಾವಕ ದೃಶ್ಯವನ್ನು ಪ್ರತ್ಯಕ್ಷವಾಗಿ ನೋಡಿದ ತೆರೇಸಾರ ಮನ ಕಲುಕಿತು. ಆ ಕ್ಷಣವೇ ತೀರ್ಮಾನಿಸಿದರು. ಈ ನಿರ್ಭಾಗ್ಯರ ಸೇವೆಯೇ ತನ್ನ ಜೀವನದ ಪರಮಾಧಿಯೆಂದು ಆಗಲೇ ಅವರು ಕಲ್ಕತ್ತಾದ ಲೊರೆಟ್ ಸಂಸ್ಥೆ ಸೇರಿದರು. ಇದೇ ಸಮಯದಲ್ಲಿ ಲೊರೆಟ್ ಸಂಸ್ಥೆಯ ಫ್ರೆಂಚ್ ‘ನನ್’ ತೆರೇಸಾಮಾರ್ಟಿನ್‌ರು ಕ್ಷಯರೋಗದಿಂದ ಮರಣಹೊಂದಿದರು. ಮುಂದೆ ಅವರನ್ನು ಆದರ್ಶವಾಗಿ ಸ್ವೀಕರಿಸಿ ‘ತೆರೇಸಾ’ ಎಂದು ತನ್ನ ಹೆಸರು ಬದಲಾಯಿಸಿಕೊಂಡರು. ಫ್ರೆಂಚ್ ‘ನನ್’ ರಿಂದ ಹೊಂದಿದ ಪ್ರೇರಣೆ ಇವರ ಸಾಮಾಜಿಕ ಸೇವೆಗೆ ದಾರಿದೀಪವಾಯಿತು.
1950 ರಲ್ಲಿ ಮಿಷನ್‌ರೀಸ್ ಆಫ್ ಚಾರಿಟಿ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅಕ್ಷರ ಜ್ಞಾನವಿಲ್ಲದ ಅಸಂಖ್ಯ ಮಕ್ಕಳಿಗೆ ಓದು ಬರಹ ಕಲಿಸಿದರು. ಅನಾಥ ಮಕ್ಕಳಿಗಾಗಿ ‘ಶಿಶು ಭವನ’ ಸಂಸ್ಥೆಯಿಂದ ಅವರ ಬಾಳಿಗೆ ಬೆಳಕಾದರು.
ಕಲ್ಕತ್ತಾದಲ್ಲಿ ಆರಂಭವಾದ ತೆರೇಸಾರ ಸೇವೆ ಜಗತ್ತಿನಾದ್ಯಂತ ಪಸರಿಸಿತು. ಇವರು ರೋಮ್ ಕೊಳಗೇರಿ ಪ್ರದೇಶ, ಬಾಂಗ್ಲಾ, ಫಿಲಿಫೈನ್ಸ್, ಆಂಧ್ರಪ್ರದೇಶದ ಭೀಕರ ಚಂಡಮಾರುತ ಹೀಗೆ ಎಲ್ಲಾ ಕಡೆ ಸೇವೆ ಸಲ್ಲಿಸಿದರು. ‘ಪ್ರಪಂಚವೇ ನನ್ನ ಮನೆ ಮಾನವ ಕುಲವೇ ನನ್ನ ಕುಟುಂಬ’ ಎಂಬ ಪ್ರತಿಪಾದನೆಗೆ ಬದ್ದರಾಗಿ ನಡೆದರು. ಮಾಡಿ ತೊರಿಸಿದರು ದೀನಬಂಧು ಮದರ್ ತೆರೇಸಾ.
ವಿದ್ಯಾರ್ಜನೆಗಾಗಿ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿದ ಮದರ್ ತೆರೇಸಾ ಪಡೆದ ಪ್ರಶಸ್ತಿ, ಹೊಂದಿದ ಡಾಕ್ಟರೇಟ್‌ಗಳೂ ಹಲವಾರು, ಜಗತ್ತಿನ ಅತೀ ಶ್ರೇಷ್ಠ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಪದ್ಮಶ್ರೀ ಪ್ರಶಸ್ತಿ, ಭಾರತರತ್ನ ಪ್ರಶಸ್ತಿ, ಮ್ಯಾಗ್ಸೇಸೆ ಪ್ರಶಸ್ತಿ, ಟೆಂಪುಲಟನ್ ಪ್ರಶಸ್ತಿ, ನೆಹರೂ ಪ್ರಶಸ್ತಿ, ಆರ್ಡರ್ ಆಫ್ ಮೆರಿಟ್ ಪ್ರಶಸ್ತಿ, ನೊಬೆಲ್ ಪ್ರಶಸ್ತಿ, ಹೀಗೆ ತಾನು ಪಡೆದ ಗೌರವ, ಪ್ರಶಸ್ತಿಗಳೆಲ್ಲವೂ ಪ್ರಜೆಗಳಿಗೆ ಸಲ್ಲುತ್ತದೆ ಎಂದು ಹೇಳುವ ಅವರ ನಿಸ್ವಾರ್ಥ, ನಿರಾಡಂಬರತೆಗೆ ನಿದರ್ಶನ.
ಅವರ ಜೀವನವೇ ಒಂದು ತೆರೆದ ಪುಸ್ತಕ : ಇನಿಸಿದಂದಿನಿಂದ ಹಿಡಿದು ಶಾಶ್ವತ ಶಯನಕ್ಕೆ ತೆರೆಳುವವರೆಗೂ ಅವರ ಬಾಲ ಪುಟದಲ್ಲಿನ ಪ್ರತಿ ಪುಟವು ಸೇವಾ ಪಠನವೇ, ಪ್ರಪಂಚದ ಅದರಲ್ಲೂ ಭಾರತ ದೇಶದ ಸ್ಪೃತಿಪಟಲದಲ್ಲಿ ಶಾಶ್ವತವಾಗಿರುತ್ತಾರೆ. ಜಾತಿ, ಮತ, ವರ್ಣ, ಅಸೂಯೆಯಿಂದ ಕುದಿಯುತ್ತಿರುವ ಪ್ರಶಸ್ತಿ ಪ್ರಪಂಚವನ್ನು ಒಂದು ಗೂಡಿಸುವುದೇ ಪ್ರೇಮ ಕರುಣೆ, ನಾವು ನಿಮಗಾಗಿ ಜೀವಿಸುವುದಕ್ಕಿಂತ ಪರರಿಗಾಗಿ ಜೀವಿಸುವುದರಲ್ಲಿಯೇ ಆನಂದವಿದೆಯೆಂಬ ಸತ್ವವನ್ನು ಸಾಧಿಸಿ ತೋರಿಸಿದ ಮಹಾಮಾತೆ ಮದರ್ ತೆರೇಸಾ ಐಹಿಕ ಸುಖಗಳೆಲ್ಲವನ್ನು ಬದಿಗಿರಿಸಿ ಮನುಕುಲದ ಸೇವೆಗಾಗಿ ತನ್ನ ಬದುಕನ್ನೇ ಮುಡುಪಾಗಿಟ್ಟಿದ್ದರು. ಸೂರ್ಯ ಅಸ್ತಂಗತನಾಗುತ್ತಾನೆ. ಮತ್ತೆ, ಮತ್ತೆ ಉದಯಿಸುತ್ತಾನೆ. ಆದರೆ, ಈ ವಿಶ್ವಮಾತೆ ಮಾನವತಾ ಮೂರ್ತಿ ಮದರ್ ತೆರೇಸಾ ಮರಳಿ ಬರುವುದಿಲ್ಲ. ಅವರ ಸಾಮಾಜಿಕ ಕಳಕಳಿ, ಅವರ ಆದರ್ಶಗಳು ಇಂದಿಗೂ ಅವಿಸ್ಮರಣೀಯ.
-ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.