Site icon TUNGATARANGA

ಅತಿವೃಷ್ಟಿಯಿಂದ ಶೇ. 60 ಕ್ಕಿಂತ ಹೆಚ್ಚು ಅಡಿಕೆ ಬೆಳೆ ನಷ್ಟ ಆ. 29 : ಕೊಳೆ ಹಾನಿ ಪರಿಹಾರಕ್ಕೆ ಹಕ್ಕೊತ್ತಾಯದ ಬೃಹತ್ ಪ್ರತಿಭಟನೆ – ವ.ಶಂ.ರಾಮಚಂದ್ರ ಭಟ್

ಸಾಗರ, ಆ.೨೬- ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಅತಿವೃಷ್ಟಿಯಿಂದ ಅಡಿಕೆ ಬೆಳೆ ಶೇ. ೬೦ ಕ್ಕಿಂತಲೂ ಹೆಚ್ಚು ಬೆಳೆ ನಷ್ಟ ಉಂಟಾಗಿದ್ದು, ಬೆಳೆಗಾರಿಗೆ ಸರ್ಕಾರ ಪರಿಹಾರ ನೀಡಬೇಕು ಹಾಗೂ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಹಕ್ಕೊತ್ತಾಯ ಮಾಡಲು ಎ.ಸಿ.ಕಚೇರಿ ಎದುರು ಆಗಸ್ಟ್ ೨೯ ರಂದು ಬೆಳಿಗ್ಗೆ ೧೦-೩೦ ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ ತಿಳಿಸಿದರು.


ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಸಾಗರ, ಸೊರಬ, ಹೊಸನಗರ ತಾಲ್ಲೂಕಿನ ಎಲ್ಲ ಅಡಿಕೆ ಬೆಳೆಗಾರರು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿದರು.
ಅಡಿಕೆ ಬೆಳೆಗಾರರ ಅನೇಕ ರೀತಿಯಲ್ಲಿ ಸಂಕಷ್ಟದಲ್ಲಿದ್ದಾರೆ. ಅತಿವೃಷ್ಟಿಯಿಂದ ಶೇ. ೬೦ ಕ್ಕಿಂತಲೂ ಹೆಚ್ಚು ಅಡಿಕೆ ಉದುರಿಹೋಗಿದೆ. ಮರ ಉಳಿಸಿಕೊಳ್ಳುವುದೂ ಕಷ್ಟವಾಗಿದೆ. ಶಾಸಕರು ಕೆಲವು ಪ್ರದೇಶಗಳಿಗೆ ತೆರಳಿ ಪರಿಸ್ಥಿತಿಯನ್ನು ಮನಗಂಡಿದ್ದಾರೆ. ಇದಕ್ಕೆ ಪೂರಕವಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತೋಟಗಾರಿಕೆ ಸಚಿವರನ್ನು ಕಂಡು ಮನವಿ ಸಲ್ಲಿಸಿದ್ದಾರೆ.

ಇದರ ಜೊತೆಗೆ ಮಂಗ, ಹಂದಿ, ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು, ಬೆಳೆ ಹಾನಿಯಾಗಿದೆ. ಅಡಿಕೆ ಬೆಳೆಗಾರರು ಆತಂಕಗೊಂಡಿದ್ದು, ಸರ್ಕಾರ ಬೆಳೆ ನಷ್ಟಕ್ಕೆ ಪರಿಹಾರ ಕೊಡಬೇಕು ಎಂದರು.
ಅಡಿಕೆಗೆ ಬೆಳೆಗಾರರು ಬಣ್ಣ ಹಾಕುತ್ತಾರೆ ಎಂದು ಆರೋಪಿಸಲಾಗುತ್ತಿದೆ. ಸಾಂಪ್ರದಾಯಿಕ ಬೆಳೆಗಾರರು ಯಾರೂ ಈ ಕೆಲಸ ಮಾಡುತ್ತಿಲ್ಲ. ಬೆಳೆಗಾರರು ಅಡಿಕೆ ಬೇಯಿಸಿ ಕೆಂಪಡಿಕೆ ಮಾಡುತ್ತಾರೆ. ಇದು ಉತ್ತಮ ಗುಣಮಟ್ಟದಲ್ಲಿರುತ್ತದೆ. ಬೆಳೆಗಾರರ ಮೇಲೆ ಸುಮ್ಮನೇ ಗೂಬೆ ಕೂರಿಸಲಾಗುತ್ತಿದೆ. ಮಧ್ಯವರ್ತಿಯೊಬ್ಬರು ಮಾಡಿರುವ ಈ ಕೃತ್ಯವನ್ನು ಬೆಳೆಗಾರರ ಸಂಘ ಖಂಡಿಸುತ್ತದೆ. ಬಣ್ಣ ಹಾಕುವವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.


೨೦೧೩ ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ, ಕಾಗೋಡು ತಿಮ್ಮಪ್ಪನವರು ಸಭಾಧ್ಯಕ್ಷರಾಗಿದ್ದಾಗ ಬೆಳೆಗಾರರಿಗೆ ಕೊಳೆರೋಗದಿಂದ ಬೆಳೆ ನಷ್ಟವಾಗಿತ್ತು. ಆಗ ಕಾಗೋಡು ತಿಮ್ಮಪ್ಪನವರು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಬೆಳೆನಷ್ಟ ಪರಿಹಾರ ಕೊಡಿಸಿದ್ದರು. ಅಲ್ಲದೇ ಬೆಳೆ ಕುಸಿದಿದ್ದಾಗ ಬೆಂಬಲ ಬೆಲೆ ಕೊಡಿಸಿದ್ದರು. ಈಗ ಬೆಳೆಗಾರರಿಗೆ ಅದೇ ಪರಿಸ್ಥಿತಿ ಎದುರಾಗಿದೆ. ಶಾಸಕ ಬೇಳೂರು ನೇತೃತ್ವದಲ್ಲಿ ನಿಯೋಗ ಹೋಗಿ ಮುಖ್ಯಮಂತ್ರಿಗಳನ್ನು ಕಂಡು ಪರಿಹಾರಕ್ಕೆ ಒತ್ತಾಯಿಸಬೇಕು ಎಂದರು.


ಕಳೆದ ಕೆಲವು ತಿಂಗಳ ಹಿಂದೆ ಸಾಗರ ಹಾಗೂ ಪಕ್ಕದ ತಾಲ್ಲೂಕಿನಲ್ಲಿ ಅಡಿಕೆ ಕಳ್ಳತನ ನಡೆದಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಸುಮಾರು ೪ ಲಕ್ಷ ೮೦ ಸಾವಿರ ರೂ. ಮೌಲ್ಯದ ೯೫ ಚೀಲ ಅಡಿಕೆಯನ್ನು ಹಿಡಿದುಕೊಟ್ಟಿದ್ದರು. ನಂತರ ಬೇದೂರು, ಹಂಸಗಾರಿನಲ್ಲಿ ಅಡಿಕೆ ಕಳವಾಗಿದೆ. ಇದು ಸಿಸಿಟಿವಿಯಲ್ಲಿ ಗೋಚರವಾಗಿದೆ. ಆದರೆ ಈ ಬಗ್ಗೆ ಪೊಲೀಸರು ಈವರೆಗೂ ಸರಿಯಾದ ಕ್ರಮ ಕೈಗೊಂಡಿಲ್ಲ. ಅಡಿಕೆಯ ಜತೆ ಬೆಳ್ಳಿ, ಬಂಗಾರ ಕಳ್ಳತನವಾಗಿದೆ. ಒಂದು ವಾರದಲ್ಲಿ ಪೊಲೀಸರು ಈ ಪ್ರಕರಣವನ್ನು ಭೇದಿಸದಿದ್ದರೆ ಬೆಳೆಗಾರರ ಸಂಘದ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.


ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿ, ಬೆಳೆನಷ್ಟ ಪರಿಹಾರ ಪಡೆದುಕೊಳ್ಳುವ ಪ್ರತಿಭಟನೆಗೆ ಬೆಳೆಗಾರರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಬೇಕು. ೨೦೧೩ ರಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದಿತ್ತು. ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಿತ್ತು. ಕಾಗೋಡು ತಿಮ್ಮಪ್ಪನವರು ನೀಡಿದ ಬೆಳೆನಷ್ಟ ವರದಿ ಆಧರಿಸಿ ಮುಖ್ಯಮಂತ್ರಿಗಳು ಪರಿಹಾರ ನೀಡಿದ್ದರು. ಈಗಾಗಲೇ ಶಾಸಕರು ತೋಟಗಾರಿಕೆ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ನಾವು ಪ್ರತಿಭಟನೆ ನಡೆಸಿ ನಮ್ಮ ಹಕ್ಕೊತ್ತಾಯವನ್ನು ಮಂಡಿಸಬೇಕು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಖಂಡಿಕ, ಪ್ರಮುಖರಾದ ವೆಂಕಟಗಿರಿ ಕುಗ್ವೆ, ಅವಿನಾಶ ಪುರಪ್ಪೆಮನೆ, ನಾಗಾನಂದ ಹಾಜರಿದ್ದರು.

Exit mobile version