Site icon TUNGATARANGA

ಯುವಪೀಳಿಗೆ ಉದ್ಯೋಗ ಹುಡುಕುವ ಬದಲು ಉದ್ಯೋಗ ನೀಡುವಂತಾಗಲಿ : ಸಂಸದ ಬಿ.ವೈ. ರಾಘವೇಂದ್ರ /ನ. 1 ಕ್ಕೆ ಶಿವಮೊಗ್ಗದಲ್ಲಿ FM ಆರಂಭ

ಶಿವಮೊಗ್ಗ : ಇಂದಿನ ಯುವಪೀಳಿಗೆ ಉದ್ಯೋಗ ಹುಡುಕುತ್ತಾ ಕೂರುವ ಬದಲು ಉದ್ಯೋಗ ನಿರ್ಮಾಣ ಮಾಡಿ ನೂರಾರು ಜನರಿಗೆ ಉದ್ಯೋಗ ನೀಡುವಂತಾಗಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಇಂದು ಶಿವಮೊಗ್ಗದ ತುಳಜಾ ಭವನ್ ನಲ್ಲಿ ಭಾವಸಾರ ಕ್ಷತ್ರಿಯ ಮಹಾಜನ ಸಮಾಜ (ರಿ.) ಹಾಗೂ ಶ್ರೀ ರಾಮಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್‌ ಕೋ-ಆಪರೇಟಿವ್ ಸೊಸೈಟಿ(ರಿ.) ವತಿಯಿಂದ

ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಾಧನೆಗೆ ಹೆಣ್ಣು, ಗಂಡು ವ್ಯತ್ಯಾಸವಿಲ್ಲ. ಈ ನಿಟ್ಟಿನಲ್ಲಿ ಮಹಿಳೆಯರು, ಯುವತಿಯರು, ಎಲ್ಲಾ ಕ್ಷೇತ್ರಗಳ ಮೂಲಕ ದೇಶ ಕಟ್ಟುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಪ್ರಸ್ತುತ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆ. ಪರೀಕ್ಷಾ ಫಲಿತಾಂಶದಲ್ಲಿಯೂ ಕೂಡ ಸ್ಪರ್ಧೆ ಏರ್ಪಟ್ಟಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಕಳೆದ 2022 ರ ಯುಪಿಎಸ್ಸಿ ರ್ಯಾಂಕ್ ನಲ್ಲಿ ಮೊದಲ ಹತ್ತಕ್ಕೆ ಹತ್ತು ರ್ಯಾಂಕ್ ಪಡೆದಿರುವುದು ಕೇವಲ ಯುವತಿಯರು ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದರು. ಇಲ್ಲಿ ಪುರಸ್ಕಾರ ಪಡೆದಂತಹ ವಿದ್ಯಾರ್ಥಿಗಳು ಕೂಡ ಭವಿಷ್ಯದಲ್ಲಿ ಇತರರಿಗೆ ಉದ್ಯೋಗ ನೀಡುವಂತಹ ಯೋಜನೆ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಶಿವಮೊಗ್ಗ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಇವೆ. ಈ ನಿಟ್ಟಿನಲ್ಲಿ ನಗರದ ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಸೇರಿದಂತೆ, ಬರುವಂತಹ‌ 5 ವರ್ಷಗಳಲ್ಲಿ ಮತ್ತಷ್ಟು ಅಭಿವೃದ್ಧಿಯ ವ್ಯತ್ಯಾಸ ತಾವೆಲ್ಲರೂ

ಕಾಣಬಹುದಾಗಿದೆ ಎಂದರು. ಹಿಂದೆಯೂ ಜನರು ತೆರಿಗೆ ಕಟ್ಟುತ್ತಿದ್ದರು. ಈಗಲೂ ಕಟ್ಡುತ್ತಿದ್ದೆವೆ. ಆದರೆ ಈಗಿನ ತೆರಿಗೆ ಅಭಿವೃದ್ಧಿಗೆ ಬಳಸಲಾಗುತ್ತಿರುವುದು ಪಾರದರ್ಶಕವಾಗಿದೆ. ಎಲ್ಲೆಡೆ ಅಭಿವೃದ್ಧಿ ಪರ್ವ ಕಾಣುತ್ತಿದ್ದೆವೆ ಎಂದರು. ಇನ್ನೂ ಮುಂಬರುವ ನ. 1 ಕ್ಕೆ ಶಿವಮೊಗ್ಗದ ದೂರದರ್ಶನ ಟವರ್ ಬಳಸಿಕೊಂಡು ಎಫ್.ಎಂ. ಕೇಂದ್ರ ಸ್ಥಾಪಿಸಲಾಗುತ್ತಿದೆ. ಇದು ಸಂತಸ ಪಡುವ ಸಮಯ ಎಂದರು.

ಈ ಸಂದರ್ಭದಲ್ಲಿ ಶಾಸಕರುಗಳಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ್ ಸರ್ಜಿ, ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಅಧ್ಯಕ್ಷ ಗಜೇಂದ್ರನಾಥ್ ಮಾಳೋದೆ, ಶ್ರೀ ರಾಮಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್‌ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂತೋಷ್ ಸಾಕ್ರೆ, ಯುವಕ ಸಂಘದ ಅಧ್ಯಕ್ಷ ಸಚಿನ್ ಬೇದ್ರೆ, ವಿನಯ್ ತಾಂದ್ಲೆ ಸೇರಿದಂತೆ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು. ನಿರ್ದೇಶಕರಾದ ಗೋ.ವ. ಮೋಹನಕೃಷ್ಣ ವಂದಿಸಿದರು.

Exit mobile version