ಸಾಗರ : ತಾಲ್ಲೂಕಿನ ವಿಶ್ವವಿಖ್ಯಾತ ಜೋಗ ಜಲಪಾತ ಅಭಿವೃದ್ದಿ ಆಮೆಗತಿಯಲ್ಲಿ ಸಾಗುತ್ತಿದೆ. ಜೋಗ ಜಲಪಾತ ಸುತ್ತಲೂ ಕಾಂಕ್ರೀಟ್ ಕಾಡು ನಿರ್ಮಾಣಗೊಳ್ಳುತ್ತಿದ್ದು ಕಳೆದ ಮೂರು ವರ್ಷದಿಂದ ಕಾಮಗಾರಿ ಇನ್ನೂ ಮುಗಿದಿಲ್ಲ. ಸದ್ಯ ರಾಜ್ಯ ಹೊರರಾಜ್ಯ, ಹೊರರಾಷ್ಟ್ರಗಳಿಂದ ಬರುವ ಪ್ರವಾಸಿಗರಿಗೆ ಜೋಗದಲ್ಲಿ ಯಾವುದೇ ಮೂಲಭೂತ ಸೌಲಭ್ಯ ಇಲ್ಲ. ಆದರೆ ಜೋಗ ನಿರ್ವಹಣಾ ಪ್ರಾಧಿಕಾರ ಮಾತ್ರ ಪ್ರವಾಸಿಗರು ಮತ್ತು ಪ್ರವಾಸಿ ವಾಹನಗಳಿಗೆ ವಿಧಿಸುತ್ತಿದ್ದ ಶುಲ್ಕವನ್ನು ದುಪ್ಪಟ್ಟಗೊಳಿಸಿ ಪ್ರವಾಸಿಗರ ಕೆಂಗಣ್ಣಿಗೆ ಗುರಿಯಾಗಿದೆ.
ವಿಶ್ವವಿಖ್ಯಾತ ಜೋಗ ಜಲಪಾತ ಮೈತುಂಬಿ ಕೊಳ್ಳುವುದು ಮಳೆಗಾಲದಲ್ಲಿ ಮಾತ್ರ. ವರ್ಷದಲ್ಲಿ ಆರು ತಿಂಗಳು ಕಂಗೊಳಿಸುವ ಜೋಗ ಜಲಪಾತ ನಂತರದ ತಿಂಗಳುಗಳಲ್ಲಿ ಬಿಳಿಹತ್ತಿ ಹಾರಾದಂತೆ ಧುಮುಕುತ್ತದೆ. ಪ್ರವಾಸಿಗರು ಸಹ ಈ ದಿನಗಳಲ್ಲಿ ಜೋಗದತ್ತ ಸುಳಿಯುವುದು ವಿರಳ. ಇದೀಗ ರಾಜ್ಯದ ಯಾವ ಪ್ರವಾಸಿ ತಾಣಗಳಲ್ಲಿ ಇಲ್ಲದ ಪ್ರವೇಶ ಶುಲ್ಕ ಮತ್ತು ವಾಹನ ಶುಲ್ಕ ವಿಧಿಸುವ ಮೂಲಕ ದಾಖಲೆ ನಿರ್ಮಿಸಿದೆ.
ಜೋಗ ಜಲಪಾತವನ್ನು ಸುಮಾರು ೨೫೦ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವ ಕೊನೆ ಸಂದರ್ಭದಲ್ಲಿ ಸುಮಾರು ೧೮೫ ಕೋಟಿ ರೂ. ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ್ದರು.
ಇದೀಗ ಅಭಿವೃದ್ದಿಗೆ ಹಣ ಬಿಡುಗಡೆ ಮಾಡಿದ್ದು ಯಾರು ಎನ್ನುವ ಜಿಜ್ಞಾಸೆ ಇದ್ದು, ಹಾಲಿ ಶಾಸಕರು ಕಾಂಗ್ರೇಸ್ ಸರ್ಕಾರ ಅಭಿವೃದ್ದಿಗೆ ಹಣ ಬಿಡುಗಡೆ ಮಾಡಿದೆ. ಸಂಸದ ಬಿ.ವೈ.ರಾಘವೇಂದ್ರ, ಹಿಂದಿನ ಶಾಸಕ ಹರತಾಳು ಹಾಲಪ್ಪ ಕೊಡುಗೆ ಏನೂ ಇಲ್ಲ ಎಂದು ಪದೇಪದೇ ಹೇಳುತ್ತಿದ್ದಾರೆ.
ಅಭಿವೃದ್ದಿ ಆದ ಮೇಲೆ ಪ್ರವೇಶ ಶುಲ್ಕ ಹೆಚ್ಚು ಮಾಡಿದ್ದರೆ ಯಾವುದೇ ವಿರೋಧ ಸ್ಥಳೀಯರು ಮತ್ತು ಪ್ರವಾಸಿಗರಿಂದ ಬರುತ್ತಿರಲಿಲ್ಲ. ಆದರೆ ಅಭಿವೃದ್ದಿಯೆ ಮಾಡದೆ ಜೋಗ ವೀಕ್ಷಣೆ ದರ ದುಪ್ಪಟ್ಟುಗೊಳಿಸಿರುವುದು ಸರಿಯಲ್ಲ ಎನ್ನುವುದು ಜನಾಭಿಪ್ರಾಯವಾಗಿದೆ.
ಜೋಗ ನಿರ್ವಹಣಾ ಪ್ರಾಧಿಕಾರಿ ಹೊಸ ದರ ನಿಗಧಿಪಡಿಸಿ ಫ್ಲೆಕ್ಸ್ ಅಳವಡಿಕೆಗೆ ಎಲ್ಲ ಸಿದ್ದತೆ ನಡೆಸಿದೆ. ಪ್ರವಾಸಿ ಬಸ್‌ಗೆ ರೂ. ೨೦೦ (ಹಳೆ ದರ ರೂ. ೧೫೦), ಮಿನಿ ಬಸ್‌ಗೆ ರೂ. ೧೫೦ (ಹಳೆದರ ರೂ. ೧೦೦), ಕಾರು ಮತ್ತು ಜೀಪ್‌ಗೆ ರೂ. ೮೦ (ಹಳೆದರ ರೂ. ೫೦), ಆಟೋಗೆ ರೂ. ೪೦), (ಹಳೆದರ ರೂ. ೩೦) ದ್ವಿಚಕ್ರ ವಾಹನ ರೂ. ೩೦ (ಹಳೆದರ ರೂ.೨೦), ವಿದೇಶಿ ಪ್ರವಾಸಿಗರಿಗೆ ರೂ. ೧೦೦ (ಹಳೆದರ ರೂ. ೫೦), ಪ್ರವಾಸಿಗರಿಗೆ ರೂ. ೨೦ (ಹಳೆದರ ರೂ. ೧೦), ಕಾಲೇಜು ವಿದ್ಯಾರ್ಥಿಗಳಿಗೆ ರೂ. ೨೦, ಪ್ರೌಢ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರೂ. ೧೦ ನಿಗಧಿಪಡಿಸಿ ಫ್ಲೆಕ್ಸ್ ಅಳವಡಿಕೆಗೆ ಸಿದ್ದತೆ ನಡೆಸಲಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ವಾಹನದಲ್ಲಿ ಕುಳಿತ ಪ್ರವಾಸಿಗರಿಗೂ ಶುಲ್ಕ ನಿಗಧಿಪಡಿಸಲಾಗಿದೆ. ಇತರೆ ಪ್ರವಾಸಿ ತಾಣಗಳಲ್ಲಿ ವಾಹನಗಳಿಗೆ ಶುಲ್ಕ ನಿಗಧಿ ಮಾಡುತ್ತಾರೆಯೆ ವಿನಃ ವಾಹನದೊಳಗಿನ ಪ್ರಯಾಣಿಕರಿಗೆ ಶುಲ್ಕ ತೆಗೆದುಕೊಳ್ಳುವುದಿಲ್ಲ. ಆದರೆ ಜೋಗ ನಿರ್ವಹಣಾ ಪ್ರಾಧಿಕಾರ ಹೊಸ ಸಂಪ್ರದಾಯ ಪ್ರಾರಂಭಿಸಿದೆ. ಒಮ್ಮೆ ಟಿಕೇಟ್ ಪಡೆದು ಒಳಗೆ ಹೋದವರು ಎರಡು ಗಂಟೆ ಮಾತ್ರ ಜೋಗ್ ಫಾಲ್ಸ್‌ನಲ್ಲಿ ಇರಬೇಕು. ನಂತರವೂ ಜಲಪಾತ ವೀಕ್ಷಣೆ ಮಾಡಬೇಕು ಎಂದರೆ ಮತ್ತೆ ಟಿಕೇಟ್ ಪಡೆಯಬೇಕಾ ಎನ್ನುವುದು ಪ್ರವಾಸಿಗರ ಪ್ರಶ್ನೆಯಾಗಿದೆ. ಕೆಲವೊಮ್ಮೆ ಮಂಜು ಮುಸುಕಿದರೆ ಜೋಗ ಜಲಪಾತ ಸಂಜೆವರೆಗೂ ಪ್ರವಾಸಿಗರಿಗೆ ದರ್ಶನ ನೀಡುವುದಿಲ್ಲ.
ಸದ್ಯ ಜೋಗ ಜಲಪಾತದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಭಾನುವಾರ ಮತ್ತು ರಜೆ ದಿನಗಳಲ್ಲಿ ಪ್ರವಾಸಿಗರು ಕಿಲೋಮೀಟರ್‌ಗಟ್ಟಲೆ ದೂರ ವಾಹನ ನಿಲ್ಲಿಸಿ ಪಾದಾಚಾರಿಗಳಾಗಿ ಫಾಲ್ಸ್‌ಗೆ ಬರಬೇಕು. ಹೀಗೆ ಬರುವ ಪ್ರವಾಸಿಗರಿಗೆ ವಾಹನಕ್ಕೂ ಟ್ಯಾಕ್ಸ್, ತಲೆಗೂ ಟ್ಯಾಕ್ಸ್ ಬೀಳುತ್ತಿದೆ. ಒಂದರ್ಥದಲ್ಲಿ ಅವೈಜ್ಞಾನಿಕ ಶುಲ್ಕ ವಸೂಲಿ ಕ್ರಮ ಜೋಗ ಜಲಪಾತದಲ್ಲಿ ನಡೆಯುತ್ತಿದ್ದು, ಜೋಗ ನಿರ್ವಹಣಾ ಪ್ರಾಧಿಕಾರ ಮಾಡುತ್ತಿರುವ ಹಗಲುದರೋಡೆ ಎಂದೆ ಹೇಳಲಾಗುತ್ತಿದೆ.
ಫಾಲ್ಸ್ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಕೆಸರುಗದ್ದೆಯಾಗಿದೆ. ಇರುವ ಒಂದು ಶೌಚಾಲಯ ಗಬ್ಬು ನಾರುತ್ತಿರುತ್ತದೆ. ಕುಡಿಯುವ ನೀರು ಸಹ ಇಲ್ಲ. ಪ್ರವಾಸಿಗರಿಗೆ ಯಾವ ಸೌಲಭ್ಯವೂ ಕೊಡದೆ ಶುಲ್ಕ ಮಾತ್ರ ದುಬಾರಿ ವಸೂಲಿ ಯಾಕೆ ಎನ್ನುವುದಕ್ಕೆ ಪ್ರಾಧಿಕಾರದ ಅಧಿಕಾರಿಗಳೇ ಉತ್ತರ ಕೊಡಬೇಕು. ಅಭಿವೃದ್ದಿಗೆ ಅನುದಾನ ತಂದಿರುವ ಶಾಸಕರು ದುಪ್ಪಟ್ಟು ಶುಲ್ಕ ವಿಧಿಸಿರುವುದನ್ನು ಕಡಿಮೆಗೊಳಿಸಿ ಜೋಗ ಜಲಪಾತವನ್ನು ಜನಸ್ನೇಹಿ ಪ್ರವಾಸಿ ತಾಣವಾಗಿಸುವತ್ತ ಗಮನ ಹರಿಸಬೇಕು ಎಂದು ಪ್ರವಾಸಿಗರು ಒತ್ತಾಯಿಸಿದ್ದಾರೆ.
ವರದಿ : ಜಿ. ನಾಗೇಶ್ ಸಾಗರ