ಶಿವಮೊಗ್ಗ: ನಮಗೆ ಗೊತ್ತಿಲ್ಲದಂತೆ ನಾವು ಪ್ರಕೃತಿಗೆ ವಿಷಪ್ರಾಸನ ಮಾಡಿಸುತ್ತಿದ್ದೇವೆ. ಅದರ ಪರಿಣಾಮವನ್ನು ಕೂಡ ನಾವು ಅನುಭವಿಸುತ್ತೇವೆ. ಪರಿಸರ ರಕ್ಷಣೆ ಕೆಲವೊಂದು ಸಂಘ ಸಂಸ್ಥೆಗಳ ಹೊಣೆ ಮಾತ್ರ ಅಲ್ಲ, ನಮ್ಮೆಲ್ಲರ ಹೊಣೆ ಎಂದು ಮಾಜಿ ಸಂಸದ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದ್ದಾರೆ.
ಅವರು ಇಂದು ನಗರದ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಸಾಗರ ಯೂತ್ ಫೋರ್ಸ್ ಅಸೋಸಿಯೇಷನ್(ರಿ) ವತಿಯಿಂದ ಹಮ್ಮಿಕೊಂಡಿದ್ದ ಸಸ್ಯೋದ್ಯಾನ ಕಾರ್ಯಕ್ರಮವನ್ನು ಸಸ್ಯ ಕುಂಡಗಳಿಗೆ ಹರಸಿನ ಕುಂಕುಮ ಹಚ್ಚಿ ಪೂಜೆ ಸಲ್ಲಿಸಿ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಮ್ಮ ಪರಿಸರವನ್ನು ನಾವೇ ರಕ್ಷಿಸಬೇಕು. ಸಮಾಜದಲ್ಲಿ ಹೊಣೆಗಾರಿಕೆ ಪ್ರಜ್ಞೆಯ ಕೊರತೆ ಇದೆ. ಪ್ರಧಾನಿ ಮೋದಿಯ ಸ್ವಚ್ಛ ಭಾರತ್ ಅಥವಾ ಗಾಂಧೀಜಿಯ ಸ್ವಚ್ಛ ಆಂದೋಲನದ ಬಗ್ಗೆ ಜನ ಇನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಬದಲು ಅವರೇ ಬಂದು ಗುಡಿಸಿಕೊಂಡು ಹೋಗಲಿ ಅನ್ನುವ ನಿರ್ಲಕ್ಷ ಭಾವನೆಯಿಂದ ಇದ್ದಾರೆ. ಮುಂದಿನ ಪೀಳಿಗೆಯ ಆರೋಗ್ಯ ಕಾಪಾಡಬೇಕಾದರೆ ಪರಿಸರ ಉಳಿಸುವುದ ಅನಿವಾರ್ಯ ಎಂದರು.
ಅಂಗಡಿ ಮತ್ತು ಮನೆಗಳ ಮುಂದೆ ಸಣ್ಣ ಜಾತಿಯ ಗಿಡ ಮರಗಳನ್ನು ಬೆಳೆಸುವ ಈ ಸಂಸ್ಥೆಯ ವಿನೂತನ ಪ್ರಯೋಗ ಮತ್ತು ಪ್ರಯತ್ನ ಕಿರಿದಾದರೂ ಕೂಡ ಪರಿಣಾಮ ಅಗಾಧವಾಗಿದೆ. ನಿಮ್ಮ ಆಂತರ್ಯದ ಉತ್ಸಾಹ ಬತ್ತದಿರಲಿ. ಸಮಾಜ ನಿಮ್ಮೊಂದಿಗಿದೆ ಎಂದರು.
ಉದ್ಯಮಿ ಜ್ಯೋತಿ ಪ್ರಕಾಶ್ ಮಾತನಾಡಿ, ಶಿವಮೊಗ್ಗದಲ್ಲಿ ಅನೇಕ ಪರಿಸರ ಸಂಘಟನೆಗಳಿವೆ. ಜಿಲ್ಲಾ ವಾಣಿಜ್ಯ ಸಂಘದ ಸದಸ್ಯರು ಒಂದೊಂದು ಪಾಟ್ ಗಳನ್ನು ಕೊಂಡು ತಮ್ಮ ಅಂಗಡಿ ಮುಂಗಟ್ಟುಗಳ ಮುಂದೆ ಇಟ್ಟರೆ ಶಿವಮೊಗ್ಗದ ಇತಿಹಾಸವೇ ಬದಲಾಗುತ್ತದೆ. ಎಲ್ಲರೂ ಸೇರಿ ಕೈಜೋಡಿಸೋಣ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ಮಾತನಾಡಿ, ಅನೇಕರು ಪರಿಸರದ ಬಗ್ಗೆ ಮಾತನಾಡುತ್ತಿರುತ್ತಾರೆ. ಅನುಷ್ಠಾನ ಮಾಡುವವರು ಕಡಿಮೆ. ವಾಣಿಜ್ಯ ಕೈಗಾರಿಕಾ ಸಂಘ ನಿಮ್ಮ ಜೊತೆ ಕೈಜೋಡಿಸುತ್ತದೆ. ನಮ್ಮದೇ ಗಿಡ ನಮ್ಮದೇ ಅಂಗಡಿ ನಮ್ಮದೇ ಪರಿಸರ ಎಂದು ಭಾವಿಸಿ ಸಹಕಾರ ನೀಡುತ್ತೇವೆ ಎಂದರು.
ದೊಡ್ಡಪೇಟೆ ಠಾಣಾಣ ಇನ್ ಸ್ಪೆಕ್ಟರ್ ರವಿ ಪಾಟೀಲ್ ಮಾತನಾಡಿ, ಸಸ್ಯೋದ್ಯಾನ ಅಭಿಯಾನದ ತುಂಬಾ ಅವಶ್ಯಕತೆ ಇದೆ, ಮಲೆನಾಡು ಈಗ ತಂಪಾಗಿಲ್ಲ 42 ಡಿಗ್ರಿಯತ್ತ ಉಷ್ಣಾಂಶ ದಾಖಲಾಗಿದೆ. ಪರಿಸರ ನಾಶದಿಂದ ಉಷ್ಣತೆ ಜಾಸ್ತಿಯಾಗಿದೆ. ಒಂದು ಊಟಕ್ಕೆ ಹೊರಗೆ ಹೋಗದವರು ಜೊಮೇಟೊದಲ್ಲಿ ಧರಿಸಿಕೊಳ್ಳುವವರು ಮರ ಗಿಡ ಬೆಳೆಸಲು ಪರಿಸರ ಉಳಿಸಲು ಹೋಗುತ್ತಾರೆಯೆ? ಜನರು ಸೋಮಾರಿಗಳಾಗಿದ್ದಾರೆ. ಕನಿಷ್ಠ ಮನೆಲ್ಲಾದರೂ ಗಿಡಮರಗಳನ್ನು ನೆಟ್ಟು ಬೆಳೆಸಲಿ. ಆ ಮೂಲಕ ಪರಿಸರ ಕಾಪಾಡಲಿ ಎಂದರು.
ವಿನುತಾ ಅವರು ಮಾತನಾಡಿ, ನಾವು ಸಣ್ಣವರಿದ್ದಾಗ ಹಣ್ಣುಗಳನ್ನು ಕಿತ್ತು ತಿನ್ನುವ ಸಂಭ್ರಮ ಈಗ ಅಂಗಡಿಯಿಂದ ಖರೀದಿ ಮಾಡಿ ತಂದು ತಿನ್ನುವ ಹಣ್ಣುಗಳಲ್ಲಿ ಇಲ್ಲ. ರುಚಿಯೂ ಇಲ್ಲ. ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ನೀರು, ಗೊಬ್ಬರ ಹಾಕಿ ಗಿಡಗಳನ್ನು ಪ್ರೀತಿಯಿಂದ ಸಾಕಬೇಕು. ಸಣ್ಣ ಸಣ್ಣ ಕುಂಡಗಳಲ್ಲಿ ಟೊಮೇಟೊ ಮೆಣಸಿನ ಕಾಯಿ ಮುಂತಾದ ತರಕಾರಿಗಳನ್ನು ಕೂಡ ಬೆಳೆಸುವುದರಿಂದ ನಾವು ಬೆಳೆಸಿದ ತರಕಾರಿಗಳನ್ನು ತಿನ್ನುವುದು ಖುಷಿ ಕೊಡುತ್ತದೆ ಎಂದರು.
ಪರಿಸರ ಕಾಪಾಡದಿದ್ದರೆ ನಮ್ಮ ಮಕ್ಕಳು ಮೊಮ್ಮಕ್ಕಳು ಆಕ್ಸಿಜನ್ ಬ್ಯಾಗನ್ನು ಸ್ಕೂಲ್ ಬ್ಯಾಗ್ ಜೊತೆಗೆ ಕೊಂಡೊಯ್ಯುವ ಪರಿಸ್ಥಿತಿ ಬರುತ್ತದೆ. ಜನರ ಸಹಕಾರ ಬೇಕು ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಹೆಚ್.ಎಸ್. ಪುಷ್ಪಲತಾ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವಕರು, ಯುವತಿಯರು ಒಟ್ಟಾಗಿ ಪರಿಸರ ಉಳಿಸಲು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಅನೇಕ ಪ್ರಯೋಗಗಳನ್ನು ಮಾಡುತ್ತ ಬಂದಿದ್ದೇವೆ. ಸಾಗರದ ಸಂಸ್ಥೆ ಸಾಗರದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದೆ. ಈಗ ಶಿವಮೊಗ್ಗಕ್ಕೆ ಬಂದಿದ್ದು, ನಿಮ್ಮ ಬಾಗಿಲಿಗೆ ಬಂದು ಈ ಕಸಿ ಮಾಡಿದ ಗಿಡಗಳ ಕುಂಡಗಳನ್ನು ಮಾರಾಟ ಮಾಡುತ್ತೇವೆ. ಗಿಡಗಳನ್ನು ಕೊಂಡು ಸಹಕರಿಸಿ ಈ ಮೂಲಕ ಮಲೆನಾಡಿನ ಹೆಸರು ಉಳಿಸೋಣ ಪ್ರಕೃತಿಯನ್ನು ಕಾಪಾಡೋಣ ಎಂದರು.
ಕಾರ್ಯಕ್ರಮದಲ್ಲಿ ನೆಹರು ರಸ್ತೆಯ ವರ್ತಕರ ಸಂಘದ ಅಧ್ಯಕ್ಷ ಧನಲಕ್ಷ್ಮಿ ಗಿರೀಶ್. ನೆಹರು ಯುವ ಕೇಂದ್ರದ ಅಧಿಕಾರಿ ಉಲ್ಲಾಸ್. ವಸಂತ್ ಹೋಬಳಿದಾರ್ ಮತ್ತಿತರರು ಇದ್ದರು.