Site icon TUNGATARANGA

ಭಾರತೀಯ ಜನತಾಪಕ್ಷದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಹಿಂದುತ್ವವೇ ಇಲ್ಲದಂತ್ತಾಗಿದೆ:ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅಸಮಾಧಾನ

ಶಿವಮೊಗ್ಗ,ಆ.೧೨: ಭಾರತೀಯ ಜನತಾಪಕ್ಷದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಹಿಂದುತ್ವವೇ ಇಲ್ಲದಂತ್ತಾಗಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ಅಸಮಾಧಾನಿತ ೧೨ ಹಿರಿಯ ಮುಖಂಡರು ನೆನ್ನೆ ಸಭೆ ನಡೆಸಿ ಪಾದಯಾತ್ರೆಗೆ ನಿರ್ಧರಿಸಿದ್ದಾರೆ. ಸಭೆಯಲ್ಲಿ ಚರ್ಚಿಸಿರುವ ಬಗ್ಗೆ ಬಹಿರಂಗವಾಗಿ ಹೇಳುತ್ತಿಲ್ಲ. ಅನುಭವಿಗಳು, ಪಕ್ಷ ಕಟ್ಟಿದವರು, ನೋವು ಅನುಭವಿಸುತ್ತಿರುವವರು ಈ ಸಭೆ ನಡೆಸಿದ್ದಾರೆ ಎಂದರು.


ಬಿಜೆಪಿ ರಾಜ್ಯಾಧ್ಯಕ್ಷರನ್ನು ಬಿಟ್ಟು ಈ ರೀತಿ ಸಭೆಗಳು ನಡೆಯುತ್ತಿವೆ. ಹೀಗೆ ಸಭೆಗಳು ನಡೆಸುತ್ತ ಹೋದರೆ ಬಿಜೆಪಿ ಇಬ್ಬಾಗವಾಗುವ ಸಾಧ್ಯತೆ ಇದೆ. ತಾಲ್ಲೂಕು ಮಟ್ಟದಲ್ಲಿಯೂ ಕೂಡ ೨ ಗುಂಪುಗಳಾಗುತ್ತವೆ. ಇವತ್ತು ೧೨ಜನರಿರಬಹುದು.

ಹಾಗಂತ ಪಕ್ಷದ ವರಿಷ್ಟರು ನಿರ್ಲಕ್ಷ ಮಾಡಿದರೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಕುಂಠಿತವಾಗುತ್ತ ಹೋಗುತ್ತದೆ. ಕೂಡಲೇ ಕೇಂದ್ರದ ನಾಯಕರು ಈ ಬಗ್ಗೆ ಗಮನಹರಿಸಿ ಕೂಡಲ ಸಂಗಮದಿಂದ ಬಳ್ಳಾರಿಯ ತನಕ ಪಾದಯಾತ್ರೆಗೆ ಹೊರಟಿರುವ ಬಿಜೆಪಿ ನಾಯಕರನ್ನು ಕರೆದು ಚರ್ಚಿಸಿ ಅವರ ನೋವುಗಳನ್ನು ಆಲಿಸಿ ಅಗತ್ಯ ಮುನ್ಸೂಚನೆ ನೀಡಬೇಕು ಎಂದರು.


ಈ ಎಲ್ಲಾ ಅಸಮಾಧಾನಗಳಿಗೆ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬವೇ ಪ್ರಮುಖ ಕಾರಣ ಎಂದು ನೋವಿನಿಂದ ಇರುವ ನಾಯಕರು ಮತ್ತು ಕಾರ್ಯಕರ್ತರು ಹೇಳುತ್ತಿದ್ದಾರೆ. ಯತ್ನಾಳ್, ಅರವಿಂದ ಲಿಂಬಾವಳಿ, ರಮೇಶ್ ಜಾರಿಕಿ ಹೊಳಿ, ಸಿದ್ದೇಶ್, ಶಶಿಕಲಾಜೊಲ್ಲೆ, ಕುಮಾರಬಂಗಾರಪ್ಪ ಸೇರಿದಂತೆ ಸುಮಾರು ೧೨ಕ್ಕೂ ಹೆಚ್ಚು ಬಿಜೆಪಿ ನಾಯಕರು ಈ ನಿರ್ಧಾರ ತಾಳಿದ್ದಾರೆ ಎಂದರು.


ಕೇಂದ್ರ ನಾಯಕರಿಗೆ ಬಿ.ಎಸ್.ಯಡಿಯೂರಪ್ಪ ಕುಟುಂಬದ ಮೇಲೆ ಯಾಕಿಷ್ಟು ಮೋಹ ಎಂದೇ ಅರ್ಥವಾಗುತ್ತಿಲ್ಲ. ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ ಈ ಎಲ್ಲಾ ಅಶಾಂತಿಗೆ ಕಾರಣವಾಗಿದೆ. ಬಿ.ವೈ.ವಿಜಯೇಂದ್ರ ಅವರದು ಏಕಪಕ್ಷೀಯ ನಿರ್ಧಾರವಾಗಿದೆ. ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ. ಸಾಮೂಹಿಕ ನಾಯಕತ್ವ ಇತ್ತು. ಆದರೆ ಈಗ ಅದು ಇಲ್ಲ. ಸ್ವಜನ ಪಕ್ಷಪಾತವೇ ಮುಖ್ಯವಾಗುತ್ತಿದೆ. ಹೊಂದಾಣಿಕೆ ರಾಜಕಾರಣ ಎದ್ದುಕಾಣುತ್ತಿದೆ. ಇದು ಇಲ್ಲಿಗೆ ಮುಗಿಯಬೇಕು, ಇದರಿಂದ ನನ್ನಂತಹ ಹಲವು ಬಿಜೆಪಿಯನ್ನು ಕಟ್ಟಿಬೆಳೆಸಿದ ನಾಯಕರಿಗೆ ನೋವಾಗುತ್ತದೆ ಎಂದರು.


ಪ್ರತಿಭಟನೆ : ಎಲ್ಲಾ ಬಡವರಿಗೂ ಸೂರು ನೀಡಬೇಕು, ಗೋವಿದಪುರ ಆಶ್ರಯ ಬಡಾವಣೆಯ ಮನೆಗಳನ್ನು ಪೂರ್ಣಗೊಳಿಸಿ ತಕ್ಷಣವೇ ಹಂಚಬೇಕು. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ತಕ್ಷಣ ಮರುಪಡೆದು ಅನುದಾನಗಳಿಗೆ ಉಪಯೋಗಿಸಬೇಕು, ಪಾಲಿಕೆಗೆ ಶೀಘ್ರವೇ ಚುನಾವಣೆ ನಡೆಯಬೇಕು ಎಂಬುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಆ.೧೩ರಂದು ಬೆಳಿಗ್ಗೆ ೧೧ಕ್ಕೆ ದೈವಜ್ಞ ಕಲ್ಯಾಣ ಮಂದಿರದ ಆವರಣದಿಂದ ಮಹಾನಗರ ಪಾಲಿಕೆ ಆವರಣದವರೆಗೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಂಕರ್‌ಗನ್ನಿ, ಚನ್ನಬಸಪ್ಪ, ಬಾಲು, ಶ್ರೀಕಾಂತ್, ಮಹಾಲಿಂಗಶಾಸ್ತ್ರಿ, ಚಿದಾನಂದಮೂರ್ತಿ, ಕುಬೇಂದ್ರಪ್ಪ, ಜಾಧವ್, ಶಾಂತರಾಜು ಮುಂತಾದವರು ಇದ್ದರು.

Exit mobile version