Site icon TUNGATARANGA

ವಿದ್ಯಾರ್ಥಿ ವೇತನ ಹೆಚ್ಚಳಕ್ಕಾಗಿ ಕರ್ನಾಟಕ ಗೃಹ ವೈದ್ಯರ ಸಂಘ ಸಿಮ್ಸ್ ಎದುರು ಕರ್ತವ್ಯವನ್ನು ನಿಲ್ಲಿಸಿ ಪ್ರತಿಭಟನೆ

ಶಿವಮೊಗ್ಗ,ಆ.೧೨: ವಿದ್ಯಾರ್ಥಿ ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಕರ್ನಾಟಕ ಗೃಹ ವೈದ್ಯರ ಸಂಘ ಇಂದು ಸಿಮ್ಸ್ ಎದುರು ತಮ್ಮ ಕರ್ತವ್ಯವನ್ನು ನಿಲ್ಲಿಸಿ ಅನಿರ್ಧಿಷ್ಟಾವಧಿ ಪ್ರತಿಭಟನೆ ಕೈಗೊಂಡಿದೆ.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಾಕೇಶ್ ಮಾತನಾಡಿ, ಈಗಾಗಲೇ ಗೃಹ ವೈದ್ಯರಿಗೆ ದೇಶದ ದೆಹಲಿಯಲ್ಲಿ ಒಂದು ಲಕ್ಷ, ರಾಜಸ್ಥಾನದಲ್ಲಿ ೮೫ ಸಾವಿರ, ಗುಜರಾತಿನಲ್ಲಿ ೮೦ ಸಾವಿರ,

ಮಹಾರಾಷ್ಟ್ರದಲ್ಲಿ ೭೫ ಸಾವಿರ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಮತ್ತು ಕೆಲಸದ ಅವಧಿಯು ಕಡಿಮೆ ಇದೆ. ಅಲ್ಲಿ ವಿದ್ಯಾರ್ಥಿ ಶುಲ್ಕವು ಕಮ್ಮಿಯಿದೆ. ಆದರೆ ನಮ್ಮ ಕರ್ನಾಟಕದಲ್ಲಿ ವಿದ್ಯಾರ್ಥಿ ವೇತನ ೪೫,೫೦, ೫೫ ಸಾವಿರ ನೀಡುತ್ತಿದ್ದು, ಒಂದು ಲಕ್ಷ ೩೦ ಸಾವಿರ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆಯಲಾಗುತ್ತಿದೆ ಎಂದರು.


ವಾರಕ್ಕೆ ೯೦ ಗಂಟೆಗಳ ಸೇವೆಯನ್ನು ನಮ್ಮಿಂದ ಪಡೆಯುತ್ತಿದ್ದಾರೆ. ಹಾಸ್ಟೆಲ್ ಮತ್ತು ಇನ್ನಿತರ ಶುಲ್ಕವನ್ನು ಕಡಿತಗೊಳಿಸಿ ಕೇವಲ ೨೦ ಸಾವಿರ ರೂ.ಗಳನ್ನು ನಮಗೆ ನೀಡಲಾಗುತ್ತಿದೆ. ೯೦ ಗಂಟೆ ಕಾಲ ದುಡಿಸಿಕೊಂಡು ಕೇವಲ ೨೦ ಸಾವಿರ ನೀಡುತ್ತಿರುವುದು ಆಕ್ಷಮ್ಯವಾಗಿದೆ. ಈ ಬಗ್ಗೆ ಸಂಬಂಧಪಟ್ಟದ ಎಲ್ಲಾ ಸಚಿವರು ಮತ್ತು ಅಧಿಕಾರಿಗಳು ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಹಲವು ಬಾರಿ ಬೇಡಿಕೆ ಇಟ್ಟಿದ್ದೇವೆ. ಆದರೂ ಪ್ರಯೋಜನವಾಗಿಲ್ಲ ಎಂದರು.


ಬಡ ರೋಗಿಗಳಿಗೆ ಚಿಕಿತ್ಸೆ ನೀಡುವ ನಮಗೆ ಸಿಗಬೇಕಾದ ಗೌರವ ಹಾಗೂ ಸಂಬಂಳದಿಂದ ವಂಚಿತರಾದರೆ ಸಮಾಜವೇ ಸಂಪೂರ್ಣ ಅಸ್ವಸ್ಥ್ಯವಾಗುತ್ತದೆ. ನಾವು ಕೇಳುತ್ತಿರುವ ವಿದ್ಯಾರ್ಥಿ ವೇತನ ಬೇಡಿಕೆಯಲ್ಲಿ ಅದು ಚಿಕಿತ್ಸೆಯ ಅಡಿಪಾಯವಾಗಿರುತ್ತದೆ. ಆದ್ದರಿಂದ ಶಾಂತಿಯುತವಾಗಿ ರಾಜ್ಯಾದಾದ್ಯಂತ ಕರ್ನಾಟಕ ಗೃಹ ವೈದ್ಯರ ಸಂಘ ಬೆಳಿಗ್ಗೆ

೮ರಿಂದ ಸಂಜೆ ೪.೩೦ರವರೆಗೆ ಇಂದಿನಿಂದ ಬೇಡಿಕೆ ಈಡೇರುವವರೆಗೆ ಅನಿರ್ಧಿಷ್ಠಾವಧಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು. ತುರ್ತು ಚಿಕಿತ್ಸೆಗೆ ಸರ್ಕಾರದಿಂದ ನಿಯೋಜಿಸಲ್ಪಟ್ಟ

ಸಿಬ್ಬಂದಿ ವೈದ್ಯರಿರುತ್ತಾರೆ. ಆದರೂ ತುರ್ತು ಸಂದರ್ಭಗಳಲ್ಲಿ ನಾವು ತೊಂದರೆಯಾಗದಂತೆ ಶಾಂತಿಯುತ ಪ್ರತಿಭಟನೆ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ೧೦೦ಕ್ಕೂ ಹೆಚ್ಚು ಗೃಹ ವೈದ್ಯರು ಉಪಸ್ಥಿತರಿದ್ದರು.

Exit mobile version