Site icon TUNGATARANGA

ಕಸಾಪದಿಂದ ಪ್ರೌಢಶಾಲಾ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ.ಯುವ ಮನಸ್ಸುಗಳ ಕ್ರಿಯಾಶೀಲತೆಗೆ ರಸಪ್ರಶ್ನೆ ಸ್ಪೂರ್ತಿ:ASP ಅನಿಲ್ ಕುಮಾರ್ ಭೂಮರೆಡ್ಡಿ

ಶಿವಮೊಗ್ಗ : ಯುವ ಮನಸ್ಸುಗಳ ಕ್ರಿಯಾಶೀಲತೆಗೆ ಸ್ವಾತಂತ್ರ್ಯ ಹೋರಾಟದ ರಸಪ್ರಶ್ನೆ ಸ್ಪೂರ್ತಿ ಎಂದು ಹೆಚ್ಚುವರಿ ಜಿಲ್ಲಾ ಪೋಲಿಸ್ ರಕ್ಷಣಾಧಿಕಾರಿ ಅನಿಲ್ ಕುಮಾರ್ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಶಾಲಾ ಸಾಕ್ಷರತೆ ಶಿಕ್ಷಣ ಇಲಾಖೆಯ ವತಿಯಿಂದ ಸೋಮವಾರ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕದ ಕೊಡುಗೆ ವಿಚಾರವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಚರಕದಲಿ ನೂಲು ತೆಗೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಸಮುದಾಯಕ್ಕೆ  ಜ್ಞಾನವನ್ನು ಪಸರಿಸುವ ಕೆಲಸ ನಮ್ಮ ಜಿಲ್ಲೆಯಲ್ಲಿ ಕಸಾಪ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟಕ್ಕೆ ನಮ್ಮ ನಾಡಿನ ಕೊಡುಗೆ ತ್ಯಾಗ, ಬಲಿದಾನವನ್ನು ಅರಿಯುವ ಸಲುವಾಗಿ ರಸಪ್ರಶ್ನೆ ಕಾರ್ಯಕ್ರಮ ಅರ್ಥಪೂರ್ಣ.

ಚರಕ ನಮ್ಮನ್ನು ದಾಸ್ಯದಿಂದ ವಿಮುಕ್ತಿಗೊಳಿಸಿದರ ಸಂಕೇತ. ದೇಶೀಯ ಆಲೋಚನೆಗೆ ಸ್ಪೂರ್ತಿ ನೀಡುವ ಸಾಧನ. ಇಂತಹ ಕ್ರಿಯಾಶೀಲ ಆಲೋಚನೆ ಮಕ್ಕಳಲ್ಲಿ ಹೊಸತನ್ನು ಯೋಚಿಸುವಂತೆ ಮಾಡಬಹುದು ಎಂದರು.

ಮುಖ್ಯ ಅತಿಥಿಗಾಳಾಗಿದ್ದ ಡಿ.ವಿ.ಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಕೊಳಲೆ ರುದ್ರಪ್ಪಗೌಡರು ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅದರಿಂದ ಜ್ಞಾನ ಹೆಚ್ಚುತ್ತೆ. ಪುಸ್ತಕ ಕೊಂಡು ಓದುವುದನ್ನು ರೂಢಿಮಾಡಿಕೊಳ್ಳಿ ಎಂದರು.

ಡಿಡಿಪಿಐ ಸಿ. ಆರ್. ಪರಮೇಶ್ವರಪ್ಪ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಿಸಬೇಕು. ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಅಸ್ತಿತ್ವವನ್ನು ಬೆಳಸಿಕೊಳ್ಳಬೇಕು. ನಮ್ಮ ವಿದ್ಯಾರ್ಹತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ತೆಗೆದು ಕೊಳ್ಳುವುದರ ಜೊತೆಗೆ ತೇರ್ಗಡೆ ಆಗಲು ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುವಂತೆ ಕರೆನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಆಯ್ದ ಇಪ್ಪತ್ಮೂರು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಉಪನ್ಯಾಸಕರು, ರಂಗಕರ್ಮಿ ಡಾ. ಜಿ. ಆರ್. ಲವ ಸ್ಪರ್ಧೆಯನ್ನು ನಡೆಸಿಕೊಟ್ಟರು.

ವೇದಿಕೆಯಲ್ಲಿ ಕಸಾಪ ಶಿವಮೊಗ್ಗ ತಾಲ್ಲೂಕು ಅಧ್ಯಕ್ಷರಾದ ಮಹಾದೇವಿ, ಜಿಲ್ಲಾ ಕೋಶಾಧ್ಯಕ್ಷರಾದ ಎಂ. ನವೀನ್ ಕುಮಾರ್, ಭದ್ರಾವತಿಯ ಕೋಡ್ಲು ಯಜ್ಞಯ್ಯ, ಹೊಸನಗರದ ತ.ಮ. ನರಸಿಂಹ, ಶಿಕಾರಿಪುರದ ಎಚ್.ಎಸ್. ರಘು ಉಪಸ್ಥಿತರಿದ್ದರು.

ಎಚ್. ಎಸ್. ಮಂಜಪ್ಪ, ಎಚ್. ತಿಮ್ಮಪ್ಪ, ಸೋಮಿನಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಗಾಯಕಿ ನಳಿನಾಕ್ಷಿ ಪ್ರಾರ್ಥನೆ ಹಾಡಿದರು. ಧರ್ಮೋಜಿರಾವ್ ಸ್ವಾಗತಿಸಿದರು. ಮಹಾದೇವಿ ನಿರೂಪಿಸಿದರು. ಭೈರಾಪುರ ಶಿವಪ್ಪ ಮೇಸ್ಟ್ರು ವಂದಿಸಿದರು.

Exit mobile version