ಶಿವಮೊಗ್ಗ: ಶಾಲಾ ವಿದ್ಯಾರ್ಥಿಗಳಿಗೆ ದೇಶದಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆ ಬಗ್ಗೆ ಜಾಗೃತಿ ಮೂಡಿಸಲು ಶಾಲಾ ಸಂಸತ್ತು ಪ್ರಕ್ರಿಯೆ ಸಹಕಾರಿಯಾಗುತ್ತದೆ ಎಂದು ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯ ಸಿ.ಕೆ.ಶ್ರೀಧರ್ ಹೇಳಿದರು.
ನಗರದ ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ಆಯೋಜಿಸಿದ್ದ ಶಾಲಾ ಸಂಸತ್ತು 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಭವ್ಯ ಭಾರತದ ಸದೃಢ ಪ್ರಜೆಗಳು. ದೇಶದ ಅಭಿವೃದ್ಧಿಯಲ್ಲಿ ಯುವ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ.
ಶಕ್ತಿಯುತ ದೇಶ ಕಟ್ಟಲು ಯುವಜನರು ಕೈಜೋಡಿಸಬೇಕು ಎಂದು ತಿಳಿಸಿದರು.
ಮತದಾನ ಮಾಡಿ ಸಂಭ್ರಮ: ಶಾಲಾ ಸಂಸತ್ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಮತದಾನ ಮಾಡಿ ಸಂಭ್ರಮಿಸಿದರು. ಇವಿಎಂ ಮತಯಂತ್ರದ ಮೂಲಕ ವಿದ್ಯಾರ್ಥಿಗಳಿಗೆ ಚುನಾವಣೆ ನಡೆಸಿದ್ದು ವಿಶೇಷವಾಗಿತ್ತು. 700ಕ್ಕೂ ಅಧಿಕ ವಿದ್ಯಾರ್ಥಿಗಳು ನಾಲ್ಕು ಮತಗಟ್ಟೆಗಳಲ್ಲಿ ಮತದಾನ ಮಾಡಿದರು. ವಿದ್ಯಾರ್ಥಿನಿಯರಿಗೆ ಪಿಂಕ್ ಮತಗಟ್ಟೆ ಮಾಡಲಾಗಿತ್ತು.
ಚುನಾವಣೆ ಅಧಿಸೂಚನೆ, ನಾಮಪತ್ರ ಸಲ್ಲಿಕೆ, ಪರಿಶೀಲನೆ, ಚುನಾವಣಾ ಪ್ರಚಾರ, ವಿದ್ಯಾರ್ಥಿಗಳಿಂದ ಮತದಾನ ಪ್ರಕ್ರಿಯೆ, ಮತ ಎಣಿಕೆ ಸೇರಿದಂತೆ ಚುನಾವಣೆಯಲ್ಲಿ ನಡೆಯುವ ಎಲ್ಲ ಪ್ರಕ್ರಿಯೆ ನಡೆಸಲಾಯಿತು. ಶಾಂತಿಯುತ ಮತದಾನಕ್ಕಾಗಿ ಎನ್‌ಸಿಸಿ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿತ್ತು. ಎ ಪಕ್ಷ ಆಡಳಿತ ಪಕ್ಷವಾಗಿ ಚುನಾಯಿತಗೊಂಡಿತು. ಬಿ ಪಕ್ಷ ವಿರೋಧ ಪಕ್ಷವಾಯಿತು.
ಹಿರಿಯ ಶಿಕ್ಷಕ ಜಿ.ಎಸ್.ವೆಂಕಟೇಶ್, ಶಾಲಾ ಸಂಸತ್ತಿನ ಮುಖ್ಯ ಚುನಾವಣಾ ಆಯುಕ್ತೆ ಎನ್.ಎಸ್.ಜ್ಯೋತಿ, ಎನ್ ಸಿಸಿ ವಿಭಾಗದ ಮುಖ್ಯಸ್ಥರಾಗಿ ವಾಷಿಕ್ ಅಹಮದ್ ಪಾಷಾ, ಮತಗಟ್ಟೆ ಅಧಿಕಾರಿಗಳಾಗಿ ನಾಗರಾಜ್ ನಾಯಕ್, ಆರ್.ಗಾಯತ್ರಿ, ಕೇಶವಪ್ರಸಾದ್, ಪ್ರದೀಪ್, ಪ್ರಶಾಂತ್ ಕಾರ್ಯ ನಿರ್ವಹಿಸಿದರು. ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.