Site icon TUNGATARANGA

ವಕ್ಫ್ ಬೋರ್ಡ್ ಕಾನೂನಿನ ತಿದ್ದುಪಡಿಯಿಂದ  ದೇಶದ ಅನೇಕ ಅಲ್ಪಸಂಖ್ಯಾತ ಬಡವರಿಗೆ ನ್ಯಾಯ ಸಿಗಲಿದೆ:ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ: ವಕ್ಫ್ ಬೋರ್ಡ್ ಕಾನೂನಿನ ತಿದ್ದುಪಡಿಯಿಂದ  ದೇಶದ ಅನೇಕ ಅಲ್ಪಸಂಖ್ಯಾತ ಬಡವರಿಗೆ ನ್ಯಾಯ ಸಿಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ನೆಹರು ಕಾಲದಿಂದ ವಕ್ಫ್ ಕಮಿಟಿ ರಚನೆ ಮಾಡಿ ಕಾನೂನಿನ ಚೌಕಟ್ಟಿನಲ್ಲಿ ವಕ್ಫ್ ಬೋರ್ಡ್ ತೀರ್ಮಾನಕ್ಕೆ ಸುಪ್ರೀಂ ಕೋರ್ಟ್‍ಕೂಡ ಪ್ರಶ್ನೆ ಮಾಡುವ ಆಗಿಲ್ಲ ಎಂದು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅವಕಾಶ ಕಲ್ಪಿಸಿಕೊಟ್ಟಿತ್ತು. ಇದರ ಮರುಪರಿಶೀಲನೆಗೆ ಸಂವಿಧಾನ ಬದ್ಧ ತಿದ್ದುಪಡಿಗೆ ಮತ್ತು ವಕ್ಫ್ ಬೋರ್ಡ್ ತೀರ್ಮಾನವನ್ನು ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನೆ ಮಾಡುವ ಅಧಿಕಾರ ಕಲ್ಪಿಸುವ ಸಂವಿಧಾನಬದ್ಧ ಬಿಲ್‍ನ್ನು ಸಂಸತ್‍ನಲ್ಲಿ ಮಂಡಿಸಿದ್ದು, ಇದಕ್ಕೆ ಸಕರಾತ್ಮಕ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಹಮ್ಮಿಕೊಂಡ ಪಾದಯಾತ್ರೆಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ರಾಜ್ಯದ ಸರ್ಕಾರಿ ನೌಕರರು ನಿರ್ಭೀತಿಯಿಂದ ಕೆಲಸ ಮಾಡುವ ಮನಸ್ಥಿತಿಯಲ್ಲಿಲ್ಲ. ಅಧಿಕಾರಿಗಳಾದ ಪರಶುರಾಮ್ ಮತ್ತು ಚಂದ್ರಶೇಖರ್ ಆತ್ಮಹತ್ಯೆ ಇನ್ನೋರ್ವ ಅಧಿಕಾರಿ ಹೈಕೋರ್ಟ್‍ನಲ್ಲಿ ರಕ್ಷಣೆ ಕೋರಿರುವುದು, ಈ ಸರ್ಕಾರದ ಆಡಳಿತವನ್ನು ಬಯಲು ಮಾಡಿದೆ. ಮೂಡದಲ್ಲಿ 4-5 ಸಾವಿರ ಕೋಟಿ ಅವ್ಯವಹಾರ ಆಗಿದೆ ಎಂದು ಖಾಸಗಿ ದೂರು ದಾಖಲಾಗಿದೆ. ನಮಗೆ ಮುಖ್ಯಮಂತ್ರಿಗಳ ಬಗ್ಗೆ ಗೌರವವಿದೆ.

ಅವರ ಮೇಲಿನ ಆರೋಪ ಮುಕ್ತ ಆಗುವವರೆಗೆ ಅವರು ರಾಜೀನಾಮೆ ನೀಡಲಿ, ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ. ವಿಪರ್ಯಾಸವೆಂದರೆ ವಿರೋಧ ಪಕ್ಷದ ಕಾನೂನು ಬದ್ಧ ಹೋರಾಟಕ್ಕೆ ಆಡಳಿತ ಪಕ್ಷದವರು ಬ್ಲಾಕ್‍ಮೇಲ್ ರೀತಿಯಲ್ಲಿ ಸಮಾವೇಶ ಮಾಡುವುದು ದುರಂತದ ಸಂಗತಿ, ಶೀಘ್ರದಲ್ಲೇ ಸಿ.ಎಂ. ರಾಜೀನಾಮೆ ಕೊಡುವ ಅನಿವಾರ್ಯತೆ ಬರುತ್ತದೆ. ಚುನಾವಣೆಯ ಪೂರ್ವದಿಂದಲೂ ಕಾಂಗ್ರೆಸ್ ನಾಯಕರು ಬಿಜೆಪಿಯ ಎಲ್ಲಾ ಹಗರಣಗಳನ್ನು ಬಿಚ್ಚಿಡುತ್ತೇವೆ ಎಂದು ಧಮಕ್ಕಿ ಹಾಕುತ್ತಿದ್ದಾರೆ. ನಾನು ಆದಷ್ಟು ಬೇಗ ಬಿಜೆಪಿಯ ಯಾವುದೇ ಹಗರಣವಿದ್ದರೂ ನೀವು ಬಿಚ್ಚಿಡಿ ಎಂದು ವಿನಂತಿಸುತ್ತೇನೆ ಎಂದರು.

ಬಿಜೆಪಿ ಜೆಡಿಎಸ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಒಂದೇ ಕುಟುಂಬದೊಳಗೆ ಅನೇಕ ಬಾರಿ ಸಣ್ಣಪುಟ್ಟ ವ್ಯತ್ಯಾಸಗಳು ಇರುತ್ತವೆ. ಅದನ್ನು ಕೂತು ಬಗೆಹರಿಸಿಕೊಳ್ಳುತ್ತೇವೆ ಎಂದರು. ವಿಮಾನ ನಿಲ್ದಾಣ ತರಾತುರಿಯಲ್ಲಿ ಉದ್ಘಾಟನೆಯಾಗಿಲ್ಲ. ಶೇ.99ರಷ್ಟು ಕೆಲಸ ಮುಗಿದಿದೆ. ವಿಮಾನಗಳು ಯಶಸ್ವಿಯಾಗಿ ಹಾರಾಟ ಮಾಡುತ್ತಿವೆ. ಏನಾದರೂ ಶಿವಮೊಗ್ಗದಲ್ಲಿ ವಿಮಾನ ಹಾರಾಟ ನಿಂತರೆ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣವಾಗುತ್ತದೆ. ಸರ್ಕಾರ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದೇ ವಿಳಂಬವಾಗುತ್ತಿದೆ. ಬಿ.ಎಫ್.ಆರ್.ನಿಂದ ಐಎಫ್‍ಆರ್‍ಗೆ ಅನುಮತಿಗೆ ಪತ್ರ ಬರೆದಿದ್ದು, ಸಣ್ಣಪುಟ್ಟ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕಿದೆ ಎಂದರು.

ವಿಮಾನಯಾನ ಸಚಿವರನ್ನು ಬೈಂದೂರು ಶಾಸಕರೊಂದಿಗೆ ಭೇಟಿ ಮಾಡಿ, ಕೊಲ್ಲೂರು ಮೂಕಾಂಭಿಕ ವಿಮಾನ ನಿಲ್ದಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿ 500 ಹೆಕರೆ ರೆವಿನ್ಯೂ ಫಾರೆಸ್ಟ್ ಭೂಮಿ ಕೂಡ ಇದ್ದು, ಸಚಿವ ಎಂ.ಬಿ.ಪಾಟೀಲ್ ಅವರ ಗಮನಕ್ಕೆ ತರಲಾಗಿದೆ. ರಾಜ್ಯ ಸರ್ಕಾರ ಭೂಮಿ ನೀಡಿದರೆ, ಕೇಂದ್ರ ಮಂತ್ರಿಗಳು ಒಂದು ವರ್ಷದೊಳಗೆ ವಿಮಾನ ನಿಲ್ದಾಣಕ್ಕೆ ಮಂಜೂರಾತಿ ನೀಡಲಾಗುವುದು ಎಂದು ತಿಳಿಸಿದರು.

ಕೊಲ್ಲೂರು ಮೂಕಾಂಭಿಕಾ ಕಾರಿಡಾರ್‍ಗೆ ವಿತ್ತ ಸಚಿವರನ್ನು ಭೇಟಿ ಮಾಡಲಾಗಿದೆ. ಇಎಸ್‍ಐ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಲು ಶೋಭಾ ಕರಂದ್ಲಾಜೆ ಅವರಿಗೆ ಭೇಟಿ ಮಾಡಿ ವಿನಂತಿಸಿದ್ದೇನೆ. ಆರೋಗ್ಯ ಸಚಿವರು ಮತ್ತು ಗಡ್ಕರಿ ಅವರನ್ನು ಭೇಟಿ ಮಾಡಿ ವಿವಿಧ ಕಾಮಗಾರಿಗಳ ಬಗ್ಗೆ ಚರ್ಚಿಸಿದ್ದೇನೆ. ಒಂದೇ ಭಾರತ್ ರೈಲು ಸಂಚಾರ ಒಂದು ವಾರದೊಳಗೆ ಆರಂಭವಾಗುವ ಶುಭ ಸೂಚನೆ ದೊರೆತಿದೆ. ಪ್ರವಾಸಿಗರ ಹಿತದೃಷ್ಠಿಯಿಂದ ಜೋಗದ ಬಳಿ ಸುಸಜ್ಜಿತ ಹೋಟೆಲ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಡಾ.ಧನಂಜಯಸರ್ಜಿ,ಮಾಜಿ ಶಾಸಕ ಅಶೋಕ್ ನಾಯ್ಕ್, ಪ್ರಮುಖರಾದ ಮಾಲತೇಶ್, ದಿವಾಕರ್ ಶೆಟ್ಟಿ, ರಾಜೇಶ್ ಕಾಮತ್ ಮತ್ತಿತರರು ಇದ್ದರು.

Exit mobile version