Site icon TUNGATARANGA

ಒಂದು ಕೋಟಿ ಮನೆಗಳಿಗೆ ಯೋಜನೆ: ಕೆನರಾ ಬ್ಯಾಂಕಿನ ಶಾಖೆಗಳಲ್ಲಿ ಪ್ರಧಾನ ಮಂತ್ರಿ ಸೂರ್ಯಘರ್ ಸೋಲಾರ್ ಸಬ್ಸಿಡಿ: ಎನ್.ವಿ. ಪದ್ಮಜಾ


ಶಿವಮೊಗ್ಗ: ಕೇಂದ್ರ ಸರ್ಕಾರವು ದೇಶದಲ್ಲಿ ಪ್ರಧಾನ ಮಂತ್ರಿ ಸೂರ್ಯಘರ್ ಸೋಲಾರ್ ರೂಫ್ ಟಾಪ್ ಸಬ್ಸಿಡಿ ಯೋಜನೆ ಅಡಿ ಒಂದು ಕೋಟಿ ಮನೆಗಳಿಗೆ ಸೋಲಾರ್ ರೂಫ್ ಟಾಪ್ ಅಳವಡಿಸುವ ಗುರಿ ಹೊಂದಿದ್ದು, ಗ್ರಾಹಕರಿಗೆ ಸಬ್ಸಿಡಿ ಸಹ ದೊರೆಯಲಿದೆ. ಗ್ರಾಹಕರು ತಮ್ಮ ಸಮೀಪದ ಕೆನರಾ ಬ್ಯಾಂಕಿನ ಶಾಖೆಯ ಮೂಲಕ ಈ ಯೋಜನೆಯ ಪ್ರಯೋಜನ ಪಡೆಯಬಹುದೆಂದು ಕೆನರಾ ಬ್ಯಾಂಕಿನ ವಿಭಾಗೀಯ ಪ್ರಬಂಧಕರಾದ ಎನ್.ವಿ. ಪದ್ಮಜಾ ಅವರು ತಿಳಿಸಿದರು.

ಕೆನರಾ ಬ್ಯಾಂಕ್ ಹಾಗೂ ಟಾಟಾ ಪವರ್ ಸೋಲಾರ್‌ನ ಎಸ್.ಎಸ್. ಏಜೆನ್ಸಿಯ ಸಂಯುಕ್ತಾಶ್ರಯದಲ್ಲಿ ೦೮-೦೮-೨೦೨೪ರ ಗುರುವಾರ ಸಂಜೆ ಏಜೆನ್ಸಿಯ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಸೋಲಾರ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸೂರ್ಯಘರ್ ಸೋಲಾರ್ ರೂಫ್ ಟಾಪ್ ಯೋಜನೆಯಿಂದ ಜಾಗತಿಕ ತಾಪಮಾನ ಕಡಿಮೆ ಮಾಡಬಹುದು. ಅಲ್ಲದೆ ಪ್ರತಿ ಮನೆಗೆ ಅಗತ್ಯ ಇರುವ ವಿದ್ಯುತ್ತನ್ನು ತಾವೇ ಉತ್ಪಾದಿಸಿಕೊಳ್ಳುವ ಮೂಲಕ ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬಿಗಳಾಗಬಹುದು ಎಂದರಲ್ಲದೆ ವಿವಿಧ ಶಾಖಾ ಪ್ರಬಂಧಕರಿಗೆ ಈ ಯೋಜನೆಯ ಪ್ರಯೋಜನ ಹಾಗೂ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಗ್ರಾಹಕರಿಗೆ ಸೂರ್ಯಘರ್ ಸೋಲಾರ್ ರೂಫ್ ಟಾಪ್ ಯೋಜನೆ ಅನುಕೂಲಕರವಾಗಿದೆ. ಈ ಯೋಜನೆ ಅಡಿ ಇನ್ನೂ ಹೆಚ್ಚಿನ ಗ್ರಾಹಕರಿಗೆ ಸೌಲಭ್ಯ ಕಲ್ಪಿಸಲು ಕೆನರಾ ಬ್ಯಾಂಕ ಸಿದ್ಧವಿದೆ ಎಂದರು.

ಮಲೆನಾಡಿನಲ್ಲಿ ೨೧ ವರ್ಷಗಳಿಂದ ಟಾಟಾ ಪವರ್ ಸೋಲಾರ್‌ನ ಮಾರಾಟ ಹಾಗೂ ಸೇವಾಕೇಂದ್ರ ಹೊಂದಿರುವ ಎಸ್‌ಎಸ್ ಏಜೆನ್ಸಿಯು ಪ್ರಧಾನಮಂತ್ರಿ ಸೂರ್ಯಘರ್ ಸೋಲಾರ ಸಬ್ಸಿಡಿ ಯೋಜನೆ ಅಡಿ ಸೋಲಾರ್ ಘಟಕಗಳನ್ನು ಗ್ರಾಹಕರಿಗೆ ತ್ವರಿತ ಗತಿಯಲ್ಲಿ ಅಳವಡಿಸಿ ಸಬ್ಸಿಡಿ ಮೊತ್ತ ೭೮ ಸಾವಿರ ರೂ. ತಲುಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಂಸ್ಥೆಯನ್ನು ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ನಗರದಲ್ಲಿ ೮ ವರ್ಷಗಳ ಹಿಂದೆ ಕೆನರಾ ಬ್ಯಾಂಕಿನ ಹಣಕಾಸು ವ್ಯವಸ್ಥೆ ಅಡಿ ೩೬೦ ಕಿಲೋವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕ ಅಳವಡಿಸಿಕೊಂಡಿದ್ದ ಸುಮುಖ ಫಾರ್ಮ್‌ನ ಪ್ರೀತಂ ಕುಮಾರ್ ಅವರನ್ನು ಸನ್ಮಾನಿಸಲಾಯಿತು ಹಾಗೂ ಸೋಲಾರ್ ಅಳವಡಿಸಿ ಮಾದರಿಯಾದವರನ್ನು ಅಭಿನಂದಿಸಲಾಯಿತು.

ಈ ಸಮಾರಂಭವನ್ನು ವ್ಯವಸ್ಥಿತವಾಗಿ ನಿಯೋಜಿಸಿದ ಕೆನರಾ ಬ್ಯಾಂಕ್‌ನ ವಿಭಾಗೀಯ ಕಛೇರಿಯ ಪ್ರಬಂಧಕರಾದ ರಕ್ಷಿತ್ ಪಿ., ರಾಘವೇಂದ್ರ ಮತ್ತು ವಿವಿಧ ಶಾಖೆಗಳ ಪ್ರಬಂಧಕರು, ಅಧಿಕಾರಿಗಳು ಹಾಗೂ ಎಸ್‌ಎಸ್ ಏಜೆನ್ಸಿಯ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

Exit mobile version