‘ನಾನು’ ಎಂಬ ಭ್ರಮೆ ಹೋಗ್ಬೇಕಂದ್ರೆ ನಾಕ್ ಜನರತ್ರ ಸಾಲ ಕೇಳಿ ನೋಡಿ
ನೆಗಿಟೀವ್ ಥಿಂಕಿಂಗ್ -07
ಗಜೇಂದ್ರಸ್ವಾಮಿ ಎಸ್. ಕೆ., ಶಿವಮೊಗ್ಗ
ನಾನು ತುಂಬಾ ಒಳ್ಳೆಯವನು., ನನಗೆ ಬದುಕಿಗೆ ಬೇಕಾದಷ್ಟು ಆದಾಯವಿದೆ. ಕೇಳಿದವರಿಗೆ ಬೇಕಾದಷ್ಟು ಕೊಟ್ಟಿದ್ದೇನೆ. ಬಡ್ಡಿರಹಿತವಾಗಿ ಸಾಲ ಕೊಟ್ಟಿದ್ದೇನೆ. ಒಂದೂ ದಾಖಲೆ ಇಲ್ಲ. ನನಗೆ ಕಷ್ಟ ಅಂದರೆ ಎಲ್ಲರೂ ಮುಕ್ತ ಮನದಿಂದ ಸಹಾಯ ಮಾಡುತ್ತಾರೆ. ಸಾಲದ ರೂಪದಲ್ಲಿ ಖಂಡಿತ ಹಣ ನೀಡುತ್ತಾರೆ. ನಾನು ಖಂಡಿತ ಆ ವಿಷಯದಲ್ಲಿ ಗೆದ್ದೇ ಗೆಲ್ಲುತ್ತೇನೆ. ನನಗೆ ಸಾಲ ಕೊಡುವವರ ಜೊತೆ ನನ್ನಿಂದ ಪಡೆದವರೂ ಸಹ ಕೊಡುತ್ತಾರೆ ಎಂಬ ನನ್ನೊಳಗಿನ ನಾನು ಎಂಬ ಭ್ರಮೆಯನ್ನು ಕಿತ್ತೆಸೆವುದು ಎಲ್ಲರ ಬದುಕಿನಲ್ಲಿ ಕಂಡಿರುವ ಸತ್ಯ.
“ನಮ್ ಜೊತೆಯಲ್ಲಿ ಇರೊರಲ್ಲಿ ಒಳ್ಳೆಯವರು ಯಾರು? ಒಳ್ಳೆಯವರ ತರ ನಟಿಸ್ತಿರೋರಾರು? ಅದನ್ನು ತಿಳಿಕೊಳ್ಳೊದ್ರಲ್ಲಿ ಯಾಮಾರ್ತಿರ್ತಿದ್ದೀವಿ ನಾವು. ಜೋರಾಗಿ ನೇರವಾಗಿ ಬುದ್ದಿ ಹೇಳೋರನ್ನ ನಂಬಬಹುದು ನಾವು., ಆದ್ರೆ ನಗುನಗ್ತಾ ನಮ್ಮನ್ನ ಅಟ್ಟಕ್ಕೇರಿಸಿ ಒಳೊಳಗೆ ಪ್ಲಾನ್ ಮಾಡುತ್ತಿರುತ್ತಾರಲ್ಲ ಅಂತಹವರನ್ನು ಯಾವತ್ತೂ ಕೂಡ ನಂಬಬೇಡಿ. ಅವರು ನಮ್ ಜೊತೆಗಿರ್ತಾರೆ ಅನಿಸ್ತಿರುತ್ರೆ ಯಾವತ್ತೂ, ಆದ್ರೆ ಅವರು ಮಾಡ್ತಿರೋ ಮಸಲತ್ತು, ಪ್ಲಾನ್ ಗಳು ಯಾವಾಗ್ಲೂ ನಮಗೆ ಗೊತ್ತಾಗೊಲ್ಲ” ಎಂಬ ಈ ವಾಕ್ಯ ನಿಜಕ್ಕೂ ಸತ್ಯ. ಹಿರಿಯ ಚಿತ್ನಟ ರಜನೀಕಾಂತ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದ ಭಾಷಣದ ತುಣುಕಿದು. ನಮಗೆ ಅದರ ಅರಿವು ಈಗ ಅತ್ಯಗತ್ಯ.
ನಮ್ ಬದುಕಲ್ಲಿ ನಾವು ಮುಖ್ಯವಾಗಿ ಬಿಡಬೇಕಾಗಿರುವುದು ನಮ್ಮೊಳಗೆ ಹೋಗಿರುವ ಭ್ರಮಾಲೋಕವನ್ನು ಎಂದರೆ ತಪ್ಪಾಗಲಿಕ್ಕಿಲ್ಲ. ನಾನು ಒಳ್ಳೆಯವನು ನನ್ನ ಜೊತೆಗೆ ಇರುವವರೆಲ್ಲ ಒಳ್ಳೆಯವರು, ಉದಾರಿಗಳು, ಎಲ್ಲಾ ಪಾಪಚ್ಚಿಗಳು ಎಂದುಕೊಳ್ಳುವ ಭ್ರಮೆಯನ್ನು ನಾವಿಲ್ಲಿ ಕಿತ್ತೆಸೇಬೇಕಾಗಿದೆ. ಅದೇ ರೀತಿ ನಮ್ಮ ನಂಬಿಕೆಯನ್ನು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದಿನ ವಾಸ್ತವವಾಗಿರುವುದು ಕಟು ಸತ್ಯ.
ಸಾಲ ಎಂಬುದು ಶೂಲ ಎನ್ನುವ ಮಾತಿಗೆ ಪೂರಕವಾಗಿ ವರ್ತಿಸುವ ಬಹಳಷ್ಟು ಮನಸುಗಳ ನಡುವೆ ಕೆಲವೇ ಕೆಲವು ವಿಕೃತರು ಏನೇನೋ ಗೊತ್ತಿಲ್ಲದಂತೆ ನಟಿಸುವ ಒಳಗೊಳಗೆ ಭತ್ತಿ ಇಡುವ, ಕಂಡೋರು ಹಾಳಾಗಲೆಂದು ಕನವರಿಸುವ ವಿಚಿತ್ರ ಮನಸುಗಳಿಗೆ ದೂರ ಇಟ್ಟು, ಇಡಿ ಶಾಪ ಹಾಕುವುದರಿಂದ ತಪ್ಪಿಸಿಕೊಳ್ಳುವುದು ಇಂದಿನ ಪರಮದ್ಯೇಯವಾಗಿರುವುದು ದುರಂತವೇ ಹೌದು.
ನಿಯತ್ತಾಗಿದ್ರೆ ನಾಕಾಣೆ ಹುಟ್ಟೋಲ್ಲರೀ:
ನಿಜವಾಗಿಯೂ ನೀವು ನಿಯತ್ತಾಗಿದ್ದರೆ ನಿಮಗೆ ಅಗತ್ಯವಿರುವಾಗ ಎಲ್ಲಿಯೂ ನಾಕಾಣೆ ಹುಟ್ಟುವುದಿಲ್ಲ. ಅದೇ ನೀವು ಯಾಮಾರಿಸುವ ಬುದ್ಧಿ ಕಲಿತುಕೊಳ್ಳಿ. ಎಲ್ಲೆಡೆ ನಿಮಗೆ ನಿರೀಕ್ಷೆ ಮೀರಿ ಎಲ್ಲವೂ ಹುಟ್ಟುತ್ತದೆ. ನಿಮ್ಮಿಂದ ಸಹಾಯ ಪಡೆಯಲು ಅಂಗಲಾಚುವ, ಗೋಳಿಡುವ, ಪ್ರೀತಿ ತೋರುವ ಮನಸುಗಳು ಕೆಲವೆಡೆ ತೀರ ವಿಚಿತ್ರವಾಗಿ ಕಾಣುತ್ತವೆ. ಕಷ್ಟ ಎಂಬುದು ಪಾಪ ಅವರಿಗೆ ಇಲ್ಲ, ಮೊಸಳೆ ಕಣ್ಣೀರು ಇಲ್ಲಿ ನಮಗರ್ಥ ಆಗೊಲ್ಲ. ಆಗುವಷ್ಟರಲ್ಲಿ ಯಾಮಾರಿರುತ್ತೇವೆ.
ನಿಯತ್ತಿನ, ಮಾನ ಮರ್ವಾದೆ ಇರುವ ಮನಗಳೇ, ಎಷ್ಟೋ ಸಾರಿ ಮೋಸ ಹೋದರೋ, ನಯ ವಂಚಕರ ಮಾತಿಗೆ ಮರಳಾಗಿ ಕಳೆದುಕೊಂಡು ಮತ್ತೆ ಅದೇ ವಂಚನೆಗೆ ತುತ್ತಾಗುವ ಅದೆಷ್ಟೋ ಸಂದರ್ಭದಲ್ಲಿ ಎದುರಿಸುತ್ತಿದ್ದೀರಿ.
ನಿರಂತರವಾಗಿ ಅದೇ ನೋವಿನಲ್ಲಿ ಮತ್ತೆ ಮತ್ತೆ ಅಂತಹದೇ ಕಿತ್ತೋದ ಆಟಗಳಲ್ಲಿ ನಮ್ಮನ್ನ ಕಳೆದುಕೊಂಡಿರುತ್ತೇವೆ. ಹಾಗಾಗಿ ನಿಮ್ಮ ಭ್ರಮಾ ಬದುಕನ್ನು ಒಟ್ಟಟ್ಟಿಗಿಟ್ಟು ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸುವುದನ್ನು ಕಲಿಯಿರಿ. ನಿತ್ಯ ಎಲ್ಲಿ ಯಾರ ತಲೆ ಹೊಡೆಯಲಿ. ಯಾರ ತಲೆಯ ಮೇಲೆ ನಾನು ಬುಗರಿ. ಆಡಿಸಲಿ ಯಾರಿಂದ ಎಷ್ಟು ಕಿತ್ತುಕೊಳ್ಳಬಹುದು ಎಂದು ಯೋಚಿಸುವ ಕೆಲವೇ ಕೆಲವು ನಮ್ಮ ನಡುವಿನ ನಮ್ಮೊಳಗಿನ ವಿಚಿತ್ರ ವ್ಯಕ್ತಿಗಳಿಗೆ ದೂರ ಇಡುವುದು ಒಳ್ಳೆಯದಲ್ಲಬೇ?
ಗೆಳೆಯನೊಬ್ಬ ಬರೋಬ್ಬರಿ ಆದಾಯದಲ್ಲಿದ್ದಾನೆ. ಅವನು ಆದಾಯದ ಈ ಮಟ್ಟಕ್ಕೆ ಬರಲು ಸಾಕಷ್ಟು ಜನರ ಸಹಾಯ ಪಡೆದಿದ್ದಾನೆ. ಅದೇ ಸಹಾಯ ಪಡೆದ ವ್ಯಕ್ತಿ ಈತನಿಗೆ ನಾಕಾಣೆ ಸಾಲ ಕೇಳಿದರೆ ಅಯ್ಯೋ ನನ್ನ ಪರಿಸ್ಥಿತಿ ಚೆನ್ನಾಗಿಲ್ಲ. ನನ್ನತ್ರ ಒಂದು ಪೈಸೆ ಇಲ್ಲ ಎನ್ನುತ್ತಾನೆ. ಭಗವಂತ ಮೇಲಿನಿಂದ ಅಸ್ತು ಅನ್ನುವುದನ್ನು ಅವನು ಮರೆತಿರುವಂತಿದೆ. ಇಂತಹ ಸಂದರ್ಭದಲ್ಲಿ ಯಾರೇ ಆಗಲಿ ಒಂದಿಷ್ಟು ವ್ಯಕ್ತಿತ್ವವನ್ನು ಹಿಡಿದುಕೊಂಡು ನೆರವಿನ ಹಸ್ತ ನೀಡುವುದು ಒಳ್ಳೆಯದು.
ಈ ಜಗತ್ತಿನ ಅತ್ಯಂತ ವಿಶೇಷಗಳಲ್ಲಿ ಮಾಮೂಲಿ ಎನ್ನಬಹುದಲ್ಲದ ಒಂದು ವಿಷಯವನ್ನು ನಿಮಗೆ ತಿಳಿಸುವುದು ಅತ್ಯಗತ್ಯ. ನಿಮಗಿದು ಗೊತ್ತಿರಲಿಕ್ಕೆ ಬೇಕು. ಏಕೆಂದರೆ ನೀವು ಯಾಮಾರಿದ, ಮೋಸ ಹೋದ ಇಂತಹ ಅದೆಷ್ಟೋ ಘಟನೆಗಳನ್ನ ಕಣ್ಣಾರೆ ಕಂಡಿದ್ದೀರಿ ಅನುಭವಿಸಿದ್ದೀರಿ.
ಒಳ್ಳೆಯವರ ಕಾಲ ಅಲ್ಲ ಎನ್ನುವ ಮಾತನ್ನು ಹೇಳುವಾಗ ನೀವು ಕಳೆದುಕೊಂಡ ನಂಬಿಕೆ, ವಿಶ್ವಾಸ, ಹಣ ಎಲ್ಲರೂ ಸಹ ನಿಮ್ಮ ನಡುವಿನ ನಂಬಿಕೆ ವಿಶ್ವಾಸವನ್ನು ಸೃಷ್ಟಿಸಿಕೊಂಡು ಮಾಯ ಮಾಡುವ ಮೋಸದ ದಂಧೆ ಎಂದರೆ ತಪ್ಪಾಗಲಿಕ್ಕಿಲ್ಲ. ಯಾವತ್ತೂ ಕಳ್ಳರಿಗೆ ಜಾಸ್ತಿ ಅದೃಷ್ಟ ಒಲಿಯುತ್ತದೆ.
ಎಲ್ಲಿಯವರೆಗೆ ನಾವು ಬಕ್ರಾಗಳಾಗಿರುತ್ತೇವೋ ಅಲ್ಲಿಯವರೆಗೆ ನಮ್ಮನ್ನು ಬಕ್ರಗಳನ್ನಾಗಿ ಮಾಡುವ ಕೆಲವೇ ಕೆಲವು ಖದೀಮ ಮನಸುಗಳು ನಮ್ಮ ನಡುವೆ ಇರುತ್ತದೆ ಎಂಬುದನ್ನು ಗಮನಿಸಿ.
ಒಂದಂತೂ ಸತ್ಯ ಮೋಸ ಹೋಗುವವನ ಮನಸ್ಸು ಮೋಸ ಮಾಡುವವನ ತಿಳುವಳಿಕೆಗೆ ಅದೆಷ್ಟು ಸುಲಭಕ್ಕೆ ಸಿಗುತ್ತದೆ ಅಲ್ಲವೇ? ಏಕೆಂದರೆ ನಿತ್ಯ ನಮ್ಮ ನಡುವೆ ಇಂತಹ ವಂಚಕ ಜಾಲ, ಸದಾ ಮಂಗ ಮಾಡಿ ಎತ್ತುವ ಕಾಯಕ ನಡೆಯುವುದನ್ನು ನಾವಿಲ್ಲಿ ಕಣ್ಣಾರೆ ಕಂಡಿದ್ದೇವೆ ಕಾಣುತ್ತಿದ್ದೇವೆ ಅಲ್ಲವೇ? @