Site icon TUNGATARANGA

ಜಿಲ್ಲೆಯ ಡೆಂಗಿಯ ಸಂಪೂರ್ಣ ವಿವರ :ಡೆಂಗಿ ನಿಯಂತ್ರಣ ಕಾರ್ಯ ತೀವ್ರಗೊಳಿಸಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ

ಶಿವಮೊಗ್ಗ, ಆ.03,
   ಜಿಲ್ಲೆಯಲ್ಲಿ ಡೆಂಗಿ ನಿಯಂತ್ರಣ ಕಾರ್ಯಗಳನ್ನು ತೀವ್ರಗೊಳಿಸಿ, ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಆದ್ಯತೆ ಮೇರೆಗೆ ಡೆಂಗಿ ನಿಯಂತ್ರಣ ಚಟುವಟಿಕೆಗಳಲ್ಲಿ ಭಾಗಿಯಾಗಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.


    ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಡೆಂಗಿ ನಿಯಂತ್ರಣ ಟಾಸ್ಕ್ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


 ಪ್ರತಿವಾರ ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ್ ಸಭೆ ನಡೆಸಿ, ಡೆಂಗಿ ನಿಯಂತ್ರಣವನ್ನು ಪರಿಣಾಮಕಾರಿಗೊಳಿಸಲಾಗುವುದು. ಶಿವಮೊಗ್ಗ, ಶಿಕಾರಿಪುರ, ಸಾಗರದಲ್ಲಿ ಹೆಚ್ಚು ಡೆಂಗಿ ಪ್ರಕರಣಗಳು ಕಂಡು ಬರುತ್ತಿದ್ದು ಮುಂಜಾಗೃತಾ ಕ್ರಮವಾಗಿ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸಬೇಕು. ಪ್ರತಿ ಶುಕ್ರವಾರ ನೀರು ಸಂಗ್ರಹಿಸುವ ಪರಿಕರಗಳನ್ನು ಖಾಲಿ ಮಾಡಿ, ಸ್ವಚ್ಚಗೊಳಿಸಿ, ಒಣಗಿಸಿ ಮತ್ತೆ ನೀರು ತುಂಬುವ ಮೂಲಕ ಶುಷ್ಕದಿನ

ಆಚರಿಸಬೇಕು. ಗ್ರಾಮೀಣ ಭಾಗದಲ್ಲಿ ಸ್ಥಳೀಯ ಸಂಸ್ಥೆಯವರು, ಪಿಡಿಓ ಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ನಗರ ಭಾಗದಲ್ಲಿ ಆರೋಗ್ಯ ಕಾರ್ಯಕರ್ತರು, ಪರಿಸರ ಅಭಿಯಂತರರು ಸೇರಿದಂತೆ ಸಾರ್ವಜನಿಕರು ಡೆಂಗಿ ನಿಯಂತ್ರಣ ಕಾರ್ಯಗಳಲ್ಲಿ ಕಡ್ಡಾಯವಾಗಿ ತೊಡಗಿಕೊಳ್ಳಬೇಕು ಎಂದು ಸೂಚನೆ ನೀಡಿದರು.


ಡೆಂಗಿ ಪ್ರಕರಣ ವಿವರ : ಜ.01 ರಿಂದ ಆ.2 ರವರೆಗೆ ವರದಿಯಾದ ಪ್ರಕರಣಗಳಲ್ಲಿ ಭದ್ರಾವತಿ ತಾಲ್ಲೂಕಿನಲ್ಲಿ 476 ರಕ್ತದ ಮಾದರಿ ಪರೀಕ್ಷೆಯಲ್ಲಿ 34 ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಪಾಸಿಟಿವಿಟಿ ರೇಟ್ ಶೇ.7, ಹೊಸನಗರದಲ್ಲಿ 582 ಪರೀಕ್ಷೆಯಲ್ಲಿ 37 ಪಾಸಿಟಿವ್ ಇದ್ದು ಶೇ.6 ಪಾಸಿಟಿವಿಟಿ ದರ, ಸಾಗರದಲ್ಲಿ 568 ಪರೀಕ್ಷೆಯಲ್ಲಿ 48 ಪಾಸಿಟಿವ್ ಬಂದಿದ್ದು ಶೇ.8 ಪಾಸಿಟಿವಿಟಿ, ಶಿಕಾರಿಪುರದಲ್ಲಿ 625 ಪರೀಕ್ಷೆಯಲ್ಲಿ 104 ಪಾಸಿಟಿವ್ ಬಂದಿದ್ದು ಶೇ.16.64, ಶಿವಮೊಗ್ಗದಲ್ಲಿ 708 ಪರೀಕ್ಷೆಯಲ್ಲಿ 153 ಪಾಸಿಟಿವ್ ಪ್ರಕರಣ ಬಂದಿದ್ದು ಶೇ.21.61, ಸೊರಬದಲ್ಲಿ 681 ಪರೀಕ್ಷೆಯಲ್ಲಿ 46 ಪಾಸಿಟಿವ್ ಪ್ರಕರಣ ಬಂದಿದ್ದು ಶೇ.7 ಪಾಸಿಟಿವಿಟಿ ಮತ್ತು ತೀರ್ಥಹಳ್ಳಿಯಲ್ಲಿ 473 ಪರೀಕ್ಷೆಯಲ್ಲಿ 35 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಶೇ.7 ಪಾಸಿಟಿವಿಟಿ ದರ ದಾಖಲಾಗಿರುತ್ತದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 07 ಹಾಗೂ ಒಟ್ಟು ಈವರೆಗೆ 457 ಡೆಂಗಿ ಪ್ರಕರಣ ಪತ್ತೆಯಾಗಿದ್ದು, 02 ಮರಣ ದೃಢಪಟ್ಟಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡುದಪ್ಪ ಮಾಹಿತಿ ನೀಡಿದರು.


 ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಡೆಂಗಿ ಪ್ರಕರಣ ಹೆಚ್ಚು ಇರುವ ಶಿವಮೊಗ್ಗ, ಶಿಕಾರಿಪುರ ಮತ್ತು ಸಾಗರ ತಾಲ್ಲೂಕುಗಳಲ್ಲಿ ತೀವ್ರತರವಾಗಿ ಡೆಂಗಿ ನಿಯಂತ್ರಣ ಕಾರ್ಯವಾಗಬೇಕು. ಮಳೆ ಕಡಿಮೆ ಆಗುತ್ತಿದ್ದಂತೆ ಡೆಂಗಿ ಪ್ರಮಾಣ ಹೆಚ್ಚಾಗುತ್ತದೆ. ಆದ್ದರಿಂದ ಹೆಚ್ಚು ಎಚ್ಚರಿಕೆ ವಹಿಸಬೇಕು. ಡೆಂಗಿ ಪ್ರಕರಣ ಹೆಚ್ಚು ಇರುವೆಡೆ ಮನೆಯೊಳಗೆ ಸಹ ಫಾಗಿಂಗ್‌ಗೆ ವ್ಯವಸ್ಥೆ ಮಾಡಬೇಕು. ಸ್ಥಳೀಯ ಸಂಸ್ಥೆಗಳು ಪ್ರತಿ ಗ್ರಾಮ ಪಂಚಾಯ್ತಿಗೆ ಒಂದು ಫಾಗಿಂಗ್ ಮಷೀನ್ ಸಿದ್ದವಿರಿಸಿಕೊಳ್ಳಬೇಕು. ಪ್ರತಿ ಶುಕ್ರವಾರ ಸೊಳ್ಳೆ ನಿರ್ಮೂಲನೆ ದಿನವನ್ನು ಪರಿಣಾಮಕಾರಿಗೊಳಿಸಬೇಕು. 2 ಕ್ಕಿಂತ ಹೆಚ್ಚು ಡೆಂಗಿ ಪ್ರಕರಣ ಪತ್ತೆಯಾದ ಪ್ರದೇಶವನ್ನು ಡೆಂಗಿ ಹಾಟ್‌ಸ್ಪಾಟ್ ಎಂದು ಗುರುತಿಸಿ ನಾಲ್ಕು ವಾರಗಳ ಕಾಲ ಆ ಪ್ರದೇಶವಸನ್ನು ಫಾಗಿಂಗ್ ಮಾಡಿಸಬೇಕೆಂದು ಸೂಚನೆ ನೀಡಿದರು.


 ಸುಬ್ಬಯ್ಯ ಮತ್ತು ಸಿಮ್ಸ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಕೆಲವು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಡೆಂಗಿ ನಿಯಂತ್ರಣ ಅರಿವು ಕಾರ್ಯ ಕೈಗೊಂಡಿದ್ದಾರೆ. ಅದೇ ರೀತಿಯಲ್ಲಿ ನಗರದಲ್ಲಿನ ಡೆಂಗಿ ಹೆಚ್ಚಿರುವ ಪ್ರದೇಶಗಳನ್ನೂ ದತ್ತು ಪಡೆದು ನಿಯಂತ್ರಣ ಚಟುವಟಿಕೆಯಲ್ಲಿ ಭಾಗಯಾಗಬೇಕೆಂದರು. ಇನ್ನೆರಡು ತಿಂಗಳು ತೀವ್ರತರವಾಗಿ ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕೆಲಸ ಮಾಡಬೇಕು ಎಂದರು.
 ಶಾಲೆಗಳ ಸುತ್ತಮುತ್ತ ಸಹ ಲಾರ್ವಾ ಉತ್ಪತ್ತಿ ತಾಣ ನಾಶಪಡಿಸುವ ಕೆಲಸವಾಗಬೇಕು. ಶಾಲೆಗಳ ಒಳಗೆ ಸಹ ಫಾಗಿಂಗ್ ಆಗಬೇಕು. ಆರೋಗ್ಯ ಇಲಾಖೆಯಿಂದ ಸಮೀಕ್ಷೆ ನಡೆಸಿ 5 ಸಾವಿರ ಸೊಳ್ಳೆ ನಿವಾರಕ ಡೆಪಾ ಆಯಿಲ್ ನೀಡಲಾಗಿದ್ದು, ಪ್ರತಿ ಶಾಲೆಯಲ್ಲಿ ಓರ್ವ ಶಿಕ್ಷಡೆಂಗಿ ನಿರ್ವಹಣೆ ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು. ಅವರು ವಿದ್ಯಾರ್ಥಿಗಳಿಗೆ ಡೆಂಗಿ ಕುರಿತು ಅರಿವು ಮತ್ತು ಸೊಳ್ಳೆ ನಿವಾರಕಗಳನ್ನು ಹಚ್ಚಿಕೊಳ್ಳುವ ಬಗೆಯನ್ನು ತಿಳಿಸಿಕೊಡಬೇಕು ಎಂದರು.


 ಜಿಲ್ಲಾ ಪಂಚಾಯತ್ ಸಿಇಓ ಎನ್.ಹೇಮಂತ್ ಮಾತನಾಡಿ, ಡೆಂಗಿ ನಿಯಂತ್ರಣ ಕಾರ್ಯದಲ್ಲಿ ಎಲ್ಲ ಸ್ಥಳೀಯ ಸಂಸ್ಥೆಯ ನೌಕರರು, ಆರೋಗ್ಯ ಕಾರ್ಯಕರ್ತರು ಭಾಗಿಯಾಗಬೇಕು. ಆರೋಗ್ಯ ಇಲಾಖೆಯವರು ಪ್ರತಿ ದಿನ ಸಂಜೆ ನನಗೆ ಡೆಂಗಿ ಕುರಿತಾದ ದೈನಿಂದಿನ ವರದಿಯನ್ನು ನೀಡಬೇಕೆಂದು ಸೂಚಿಸಿದರು.
ವೈದ್ಯ ವಿದ್ಯಾರ್ಥಿಗಳಿಗೆ ಡೆಂಗ್ಯು : ಸಿಮ್ಸ್ ಮೆಡಿಕಲ್ ಕಾಲೇಜಿನ 04 ವಿದ್ಯಾರ್ಥಿಗಳು ಡೆಂಗಿ ಪಾಸಿಟಿವ್ ಇದ್ದು, ಕಾಲೇಜು ಮತ್ತು ಹಾಸ್ಟೆಲ್‌ಗಳಲ್ಲಿ ಲಾರ್ವಾ ಉತ್ಪತ್ತಿ ತಾಣ ನಾಶ ಮತ್ತು ಫಾಗಿಂಗ್ ಮಾಡಿಸಬೇಕೆಂದು ಸಿಮ್ಸ್ ಕಾಲೇಜು ಮುಖ್ಯಸ್ಥರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್, ಡಿಹೆಚ್‌ಓ ಡಾ.ನಟರಾಜ್, ವಿವಿಧ ಕಾರ್ಯಕ್ರಮಾಧಿಕಾರಿಗಳು, ಟಿಹೆಚ್‌ಓ ಡಾ.ಚಂದ್ರಶೇಖರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Exit mobile version