Site icon TUNGATARANGA

ಗರಿಗೆದರಿದ ಶಿಮುಲ್ ಚುನಾವಣೆ: ಆರ್‌ಎಂಎಂ, ಎಸ್. ಕುಮಾರ್, ಕೆ.ಎಲ್. ಜಗದೀಶ್‌ರಿಂದ ನಾಮಪತ್ರ ಸಲ್ಲಿಕೆ

ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ(ಶಿಮುಲ್) ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನದ ಚುನಾವಣೆಗೆ ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ (ಎಂಎಡಿಬಿ) ಹಾಗೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥ ಗೌಡ, ಜಿಪಂ ಮಾಜಿ ಸದಸ್ಯ ಕೆಂಚನಹಳ್ಳಿ ಕುಮಾರ್ ಮತ್ತು ಕುಂಚೇನಹಳ್ಳಿ ಕೆ.ಎಲ್. ಜಗದೀಶ್ ಅವರು ಜುಲೈ ೩೧ರ ಇಂದು ಬುಧವಾರ ಬೆಳಿಗ್ಗೆ ನಾಮಪತ್ರ ಸಲ್ಲಿಸಿದರು.

ಶಿವಮೊಗ್ಗ, ಸಾಗರ, ದಾವಣಗೆರೆ ಮತ್ತು ಚಿತ್ರದುರ್ಗ ಸೇರಿದಂತೆ ಒಟ್ಟು ೪ ವಿಭಾಗಗಳ ೧೪ ನಿರ್ದೇಶಕ ಸ್ಥಾನಕ್ಕೆ ಆಗಸ್ಟ್ ೧೪ರಂದು ಚುನಾವಣೆ ನಡೆಯಲಿದ್ದು, ಅಂದು ಸಂಜೆ ಮತ ಎಣಿಕೆ ನಡೆಸಿ ಫಲಿತಾಂಶ ಘೋಷಿಸಲಾಗುತ್ತದೆ.

ಒಕ್ಕೂಟದ ೧೪೦೬ ಸಂಘಗಳಲ್ಲಿ ೧೧೭೧ ಸಂಘಗಳು ಮತದಾನದ ಹಕ್ಕು ಪಡೆದಿವೆ. ವಿವಿಧ ಕಾರಣಗಳಿಂದಾಗಿ ೨೩೫ ಸಂಘಗಳಿಗೆ ಮತದಾನದ ಹಕ್ಕು ಲಭಿಸಿಲ್ಲ. ಸಂಘಗಳ ಸಂಖ್ಯೆಗೆ ಅನುಗುಣವಾಗಿ ಒಕ್ಕೂಟವನ್ನು ೪ ವಿಭಾಗಗಳಾಗಿ ವಿಂಗಡಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ವಿಭಾಗಕ್ಕೆ ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ ತಾಲೂಕು ಸೇರಿವೆ. ಸಾಗರ ವಿಭಾಗಕ್ಕೆ ಸಾಗರ, ಸೊರಬ, ಶಿಕಾರಿಪುರ, ಹೊಸನಗರ ತಾಲೂಕು ಸೇರ್ಪಡೆಗೊಂಡಿವೆ.

ದಾವಣಗೆರೆ ವಿಭಾಗಕ್ಕೆ ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಜಗಳೂರು ತಾಲೂಕುಗಳು ಮತ್ತು ಚಿತ್ರದುರ್ಗ ವಿಭಾಗಕ್ಕೆ ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ತಾಲೂಕುಗಳು ಸೇರ್ಪಡೆಗೊಂಡಿವೆ.

ನಾಮಪತ್ರ ಸಲ್ಲಿಕೆ ಜುಲೈ ೩೦ರಿಂದ ಪ್ರಾರಂಭವಾಗಿದ್ದು, ಆಗಸ್ಟ್ ೬ ನಾಮಪತ್ರ ಸಲ್ಲಿಕೆಗೆ ಕಡೆಯ ದಿನ. ಆ.೭ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ವಾಪಸ್ ಪಡೆಯಲು ಆ.೮ ಕಡೆಯ ದಿನ.

ಇಂದು ಬುಧವಾರ ಡಾ.ಆರ್.ಎಂ.ಎಂ., ಕೆಂಚನಹಳ್ಳಿ ಕುಮಾರ್ ಮತ್ತು ಕುಂಚೇನಹಳ್ಳಿ ಕೆ.ಎಲ್. ಜಗದೀಶ್ ನಾಮಪತ್ರ ಸಲ್ಲಿಕೆಯ ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಕೆ. ಪಿ. ದುಗ್ಗಪ್ಪ ಗೌಡ, ಮಹಾಲಿಂಗಯ್ಯ ಶಾಸ್ತ್ರಿ, ಮಾಜಿ ಉಪಾಧ್ಯಕ್ಷ ಹೆಚ್.ಎಲ್. ಷಡಾಕ್ಷರಿ, ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ, ಕೆಪಿಸಿಸಿ ಸಂಯೋಜಕ ಆರ್. ಮೋಹನ್, ಕುರುವಳ್ಳಿ ನಾಗರಾಜ್, ಹೊನ್ನವಿಲೆ ಶಶಿಕುಮಾರ್, ಕಾಟಿಕೆರೆ ನೀಲವತಮ್ಮ, ಮಾಳೂರು ಪೂರ್ಣೇಶ್ ಗೌಡ, ಸಾಲೂರು ರಾಜು, ಲೋಕೇಶ್ ಕರಕುಚ್ಚಿ, ಆರ್.ಸಿ. ನಾಯ್ಕ ಮತ್ತಿತರರು ಉಪಸ್ಥಿತರಿದ್ದರು

Exit mobile version