Site icon TUNGATARANGA

ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಆಶಾದಾಯಕವಾಗಿದೆ:ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ. ಕೆ.ಎ.ವಿಷ್ಣುಮೂರ್ತಿ

ಶಿವಮೊಗ್ಗ: ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಆಶಾದಾಯಕವಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ. ಕೆ.ಎ.ವಿಷ್ಣುಮೂರ್ತಿ ಹೇಳಿದರು.


ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಕುವೆಂಪು ವಿಶ್ವವಿದ್ಯಾಲಯ ಅರ್ಥಶಾಸ್ತ್ರ ಅಧ್ಯಾಪಕರ ಸಂಘ, ಕುವೆಂಪು ವಿಶ್ವವಿದ್ಯಾಲಯ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಅಧ್ಯಾಪಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕೇಂದ್ರ ಬಜೆಟ್ 2024-25 ಒಂದು ವಿಶ್ಲೇಷಣೆ ಕುರಿತು ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರವು ಉದ್ಯೋಗ ಸೃಷ್ಟಿಗೆ ಪೂರಕವಾಗಿ ಅಂಶಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿದೆ ಎಂದು ತಿಳಿಸಿದರು.


ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಕೇಂದ್ರ ಬಜೆಟ್‌ನ ಆರ್ಥಿಕ ವಹಿವಾಟಿನಲ್ಲಿ ಸಾಲ ಪ್ರಮಾಣವನ್ನು ತಗ್ಗಿಸುವಲ್ಲಿ ಹೆಚ್ಚಿನ ಒತ್ತು ನೀಡಬೇಕಿತ್ತು. ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯ ವೃದ್ಧಿಗೆ ಆರ್ಥಿಕ ಬಜೆಟ್‌ನಲ್ಲಿ ಉಲ್ಲೇಖಿಸಿರುವುದು ಉತ್ತಮ ಎಂದು ಅನಿಸಿಕೆ ವ್ಯಕ್ತಪಡಿಸಿದರು.


ವಿಶ್ರಾಂತ ಪ್ರಾಚಾರ್ಯ ಪ್ರೊ. ಬಿ.ಎಂ.ಕುಮಾರಸ್ವಾಮಿ ಕೇಂದ್ರ ಬಜೆಟ್ 2024 ಕುರಿತು ಮಾತನಾಡಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವರ್ಷದ ಬಜೆಟ್ ಮಂಡಿಸಿದ್ದು,  ಒಟ್ಟು 48 ಲಕ್ಷ ಕೋಟಿ ರೂ. ಖರ್ಚು ಇದ್ದು, 32ಲಕ್ಷ ಕೋಟಿ ರೂ. ಆದಾಯ ಇದೆ. ಬಜೆಟ್ 73 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಿರುವುದನ್ನು ಗಮನಿಸಬಹುದು. 10 ವರ್ಷಗಳಲ್ಲಿ ಆದಾಯ ಹಾಗೂ ವೆಚ್ಚಗಳ ವ್ಯತ್ಯಾಸ

ಕಡಿಮೆಗೊಳಿಸುವಲ್ಲಿ ಗಣನಿಯ ಬದಲಾವಣೆಗೆ ಪ್ರಯತ್ನಿಸಲಾಗಿದೆ. ವ್ಯತ್ಯಾಸ ಕಡಿಮೆ ಆಗುತ್ತಿರುವುದರಿಂದ ದೇಶದ ಆರ್ಥಿಕ ವಹಿವಾಟು ಸರಿಯಾದ ದಾರಿಯಲ್ಲಿದೆ ಎಂದು ಅಭಿಪ್ರಾಯಪಟ್ಟರು.


ಕೇಂದ್ರ ಸರ್ಕಾರ ವಿಶೇಷವಾಗಿ ಎಲ್ಲ ಕ್ಷೇತ್ರಗಳಿಗೂ ಪ್ರಾಮುಖ್ಯತೆ ನೀಡುತ್ತಿದ್ದು, ಉದ್ಯೋಗ ಮತ್ತು ಕೌಶಲ್ಯಕ್ಕಾಗಿ ಮಹತ್ವ ನೀಡಿದೆ. ಉದ್ಯೋಗದ ಅವಕಾಶಗಳಿದ್ದರೂ ಕೌಶಲ್ಯಗಳಿಲ್ಲದ ಕಾರಣ ಅನೇಕ ಸಮಸ್ಯೆಗಳು ಕಾಣುತ್ತಿದ್ದೇವೆ. ಕೇಂದ್ರ ಸರ್ಕಾರ ದೇಶದ ಯುವಜನತೆಗೆ ಉದ್ಯೋಗ ಕೌಶಲ ನೀಡಲು ವಿಶೇಷ ಯೋಜನೆಗಳನ್ನು ರೂಪಿಸಿದ್ದು, ಕೈಗಾರಿಕಾ ಕ್ಷೇತ್ರಕ್ಕೆ ಅವಶ್ಯವಿರುವ ರೀತಿ ತರಬೇತಿ ನೀಡಿ ಉದ್ಯೋಗಕ್ಕೆ ತಯಾರು ಮಾಡಲು ಮುಂದಾಗುತ್ತಿದೆ ಎಂದು ತಿಳಿಸಿದರು.


ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ, ಕುವೆಂಪು ವಿಶ್ವವಿದ್ಯಾಲಯ ಅರ್ಥಶಾಸ್ತ್ರ  ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಎ.ಟಿ.ಪದ್ಮೇಗೌಡ, ಕುವೆಂಪು ವಿಶ್ವವಿದ್ಯಾಲಯ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ  ಅಧ್ಯಾಪಕರ ಸಂಘದ ಡಾ. ಎಸ್.ಎಚ್.ಪ್ರಸನ್ನ, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Exit mobile version