Site icon TUNGATARANGA

ಕೇಂದ್ರ ಬಜೆಟ್‌: ರಾಜ್ಯಕ್ಕೆ ಬಹುದೊಡ್ಡ ಅನ್ಯಾಯ ಜಿಲ್ಲಾ ಕಾಂಗ್ರೆಸ್ ಸಮಿತಿ ಜಂಬು ಪ್ರದರ್ಶನ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ

ಶಿವಮೊಗ್ಗ,ಜು.೨೭: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಬಹುದೊಡ್ಡ ಅನ್ಯಾಯ ಎಸಗಲಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಇಂದು ಪ್ರತಿಭಟನ ಮೆರವಣಿಗೆ ನಡೆಸಿ ನಗರದ ಮಹಾವೀರ ವೃತ್ತದಲ್ಲಿ ಖಾಲಿ ಜಂಬು ಪ್ರದರ್ಶನ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 

ಬಜೆಟ್‌ನಲ್ಲಿ ಕರ್ನಾಟಕ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗಿದೆ. ಯಾವುದೇ ನೂತನ ಕೇಂದ್ರಿಯ ಯೋಜನೆಗಳಾಗಲಿ, ನೀರಾವರಿ ಯೋಜನೆಯಾಗಲಿ ಅಥವಾ ಹೊಸ ಅನುದಾನವಾಗಲಿ ರಸ್ತೆಅಭಿವೃದ್ಧಿಯಾಗಲಿ, ಅತಿವೃಷ್ಠಿ, ಅನಾವೃಷ್ಠಿ ಗಳಿಗೆ ಸ್ಪಂದನೆಯಾಗಲಿ ಇಲ್ಲ ಎಂದು ಪ್ರತಿಭಟನಕಾರರು ತಿಳಿಸಿದರು.

ರಾಜ್ಯದಿಂದ ಬಿಜೆಪಿ ಜೆಡಿಎಸ್‌ನ ೧೯ ಸಂಸದರು ಆಯ್ಕೆಯಾಗಿದ್ದಾರೆ. ಅವರು ಯಾರು ರಾಜ್ಯದ ಪರವಾಗಿ ಮಾತನಾಡಲೇ ಇಲ್ಲ. ಬಾಯಿಗೆ ಬೀಗ ಹಾಕಿಕೊಂಡು ಸುಮ್ಮನಿದ್ದಾರೆ. ಇವರ ಜೊತೆಗೆ ೫ ಜನ ಕೇಂದ್ರ ಮಂತ್ರಿಗಳು ಇದ್ದಾರೆ. ಅವರು ಕೂಡ ಏನೂ ಕೆಲಸ ಮಾಡಿಲ್ಲ. ಬಹುದೊಡ್ಡ ಅನ್ಯಾಯ ರಾಜ್ಯಕ್ಕೆ ಆಗಿದೆ ಎಂದು ದೂರಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಕಳೆದ ಬಜೆಟ್‌ನಲ್ಲಿಯೇ ೫೩೦೦ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿತ್ತು. ಆದರೆ, ಈ ಬಾರಿ ಹಣವನ್ನು ಕೊಟ್ಟಿಲ್ಲ ಮತ್ತು ಬಜೆಟ್‌ನಲ್ಲಿಯೂ ಈ ವಿಷಯವನ್ನು ಪ್ರಸ್ತಾಪವನ್ನೇ ಮಾಡಿಲ್ಲ. ಇದು ಈ ಜಿಲ್ಲೆಗೆ ಮಾಡಿದ ಬಹುದೊಡ್ಡ ಅನ್ಯಾಯವಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಅವರು, ಜಿಲ್ಲೆಯ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಬಗೆಹರಿಸಲಿದೆ. ಬಹುದೊಡ್ಡ ಮೊತ್ತವನ್ನು ಕೇಂದ್ರದಿಂದ ಬಜೆಟ್‌ನಲ್ಲಿ ತರುತ್ತೇವೆ ಎಂದು ಹೇಳಿದ್ದರು. ಆದರೆ ಕೇಂದ್ರ ಸರ್ಕಾರ ಕೊಟ್ಟಿರುವುದು ಖಾಲಿ ಚೆಂಬು ಅಷ್ಟೇ ಎಂದು ಪ್ರತಿಭಟನಕಾರರು ತಿಳಿಸಿದರು.

ರಾಜ್ಯದ ಪಾಲಿನ ಜಿಎಸ್‌ಟಿ ಹಣವನ್ನು ಕೂಡ ನೀಡಲಿಲ್ಲ. ಈ ಬಗ್ಗೆ ದೆಹಲಿಯಲ್ಲಿ ರಾಜ್ಯ ಸರ್ಕಾರದ ನಾಯಕರು ಪ್ರತಿಭಟನೆ ಮಾಡಿದರು. ಸುಪ್ರೀಂ ಕೋರ್ಟ್ ಸಹ ಕೇಂದ್ರಕ್ಕೆ ಚಾಟಿ ಬೀಸಿತು. ಇಷ್ಟಾದರೂ ಕೂಡ ರಾಜ್ಯಕ್ಕೆ ಕೇಂದ್ರದಿಂದ ಖಾಲಿ ಚೆಂಬು ಅಷ್ಟೇ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 

ಅನುದಾನ ಹಂಚಿಕೆಯಲ್ಲಿಯೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ.  ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಿಗೆ ಹೆಚ್ಚಿನ ಪಾಲನ್ನು ಹಂಚಿಕೆ ಮಾಡುವ ಕೇಂದ್ರ ಸರ್ಕಾರ ರಾಜ್ಯ ಸರ್ಕರಕ್ಕೆ ಏಕೆ ಈ ಮಲತಾಯಿ ಧೋರಣೆ ತೋರಿಸುತ್ತಿದೆ. ಕೇಂದ್ರದ ಅನ್ಯಾಯ ಸರಿಯಲ್ಲ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಪ್ರಮುಖರಾದ ಆಯನೂರು ಮಂಜುನಾಥ್,ಎನ್.ರಮೇಶ್,ಹೆಚ್.ಎಸ್.ಸುಂದರೇಶ್, ಆರ್.ಎಂ.ಮಂಜುನಾಥಗೌಡ, ಎಸ್.ಕೆ.ಮರಿಯಪ್ಪ, ಹೆಚ್.ಸಿ.ಯೋಗೀಶ್, ಎಸ್.ಪಿ.ಶೇಷಾದ್ರಿ, ರೇಖಾ ರಂಗನಾಥ್, ಶರತ್‌ಮರಿಯಪ್ಪ, ಗಿರೀಶ್, ಜಿ.ಡಿ.ಮಂಜುನಾಥ್, ನೇತ್ರಾವತಿ, ರಮೇಶ್ ಹೆಗಡೆ, ರಂಗನಾಥ್ ಕೆ., ವಿಜಯ್‌ಕುಮಾರ್ ಮುಂತಾದವರು ಇದ್ದರು.

Exit mobile version