ರಂಗಾಯಣ ಶಿಲ್ಪಕಲಾ ಶಿಬಿರಕ್ಕೆ ಚಾಲನೆ ನೀಡಿದ ಹಿರಿಯ ಶಿಲ್ಪಕಲಾವಿದ ಕೆ.ಜ್ಞಾನೇಶ್ವರ್
ಶಿವಮೊಗ್ಗ: ಶಿಲ್ಪಕಲಾವಿದರಿಗೆ ಸ್ಥಳೀಯವಾಗಿ ಹೆಚ್ಚಿನ ಅವಕಾಶ ದೊರೆಯುವಂತೆ ಮಾಡಿ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ ಎಂದು ಹಿರಿಯ ಶಿಲ್ಪಕಲಾವಿದ ಕೆ.ಜ್ಞಾನೇಶ್ವರ್ ಅವರು ಹೇಳಿದರು.
ಶಿವಮೊಗ್ಗ ರಂಗಾಯಣದಲ್ಲಿ ಮುಂದಿನ 15ದಿನಗಳ ಕಾಲ ನಡೆಯಲಿರುವ ಸಿಮೆಂಟ್ ಶಿಲ್ಪಕಲಾ ಶಿಬಿರಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ನಾಡಿನ ಕಲಾ ಪರಂಪರೆಯನ್ನು ಉಳಿಸುವಲ್ಲಿ ಶಿಲ್ಪಕಲಾವಿದರ ಪಾತ್ರ ಬಹಳ ಮುಖ್ಯವಾದುದು. ಇಂತಹ ಕಲೆಯನ್ನು ಪ್ರೋತ್ಸಾಹಿಸಿ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದೂ ಆಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣಾ ಅರ್ಕಸಾಲಿ ಅವರು ಮಾತನಾಡಿ, ಅಕಾಡಮಿ ವತಿಯಿಂದ ನಾಡಿನ ವಿವಿಧ ಭಾಗಗಳಲ್ಲಿ ಶಿಬಿರಗಳನ್ನು ಆಯೋಜಿಸುವ ಮೂಲಕ ಕಲಾವಿದರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಕಲಾವಿದರು ಶಿಬಿರ ಎಂದು ಅಸಡ್ಡೆ ತೋರದೆ ತಮ್ಮ ಕೈಚಳಕದ ಮೂಲಕ ಕಲಾಕೃತಿಗಳಿಗೆ ಜೀವ ತುಂಬಬೇಕು ಎಂದು ಹೇಳಿದರು.
ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಿವಮೊಗ್ಗ ರಂಗಾಯಣದಲ್ಲಿ ಆವರಣದಲ್ಲಿ ವಿವಿಧ ಚಟುವಟಿಕೆಗಳನ್ನು ಕೈಗೊಳ್ಲಲು ಯೋಜನೆ ರೂಪಿಸಲಾಗಿದೆ. ಬಯಲು ರಂಗಮಂದಿರ, ಉದ್ಯಾನವನ, ಶಿಲ್ಪಕಲಾಕೃತಿಗಳು ಸೇರಿದಂತೆ ಆವರಣವನ್ನು ಪರಿಪೂರ್ಣವಾಗಿ ಬಳಕೆ ಮಾಡಲು ಮಾಸ್ಟರ್ ಪ್ಲಾನ್ ರೂಪಿಸಲಾಗುತ್ತಿದೆ. ಇದರ ಭಾಗವಾಗಿ ಶಿಲ್ಪಕಲಾ ಅಕಾಡಮಿ ಸಹಯೋಗದಲ್ಲಿ ಸಿಮೆಂಟ್ ಕಲಾ ಶಿಬಿರ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ರಂಗಾಯಣ ವತಿಯಿಂದ ಆಯೋಜಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಸಿಮೆಂಟ್ ಶಿಲ್ಪಕಲಾ ಶಿಬಿರದಲ್ಲಿ 15ಮಂದಿ ಹಿರಿಯ ಶಿಲ್ಪಿಗಳು ಮತ್ತು 15ಮಂದಿ ಸಹಾಯಕ ಶಿಲ್ಪಿಗಳು ಭಾಗವಹಿಸುತ್ತಿದ್ದಾರೆ. ಕನ್ನಡ ರಂಗಭೂಮಿಯ ಹೆಸರಾಂತ ನಾಟಕಗಳ ದೃಶ್ಯಗಳು, ಜಾನಪದ ಸೊಗಡು ಪ್ರತಿಬಿಂಬಿಸುವ ಕಲಾಕೃತಿಗಳು, ಭೂತದ ಕೋಲ, ಯಕ್ಷಗಾನದ ಕಲಾಕೃತಿಗಳು, ಭರತನಾಟ್ಯ, ಕೂಚುಪುಡಿಯಂತಹ ನೃತ್ಯ ಪ್ರಕಾರಗಳ 20ಕ್ಕೂ ಅಧಿಕ ಸಿಮೆಂಟ್ ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದೆ.
ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ವಂದಿಸಿದರು. ಶಿಬಿರದ ನಿರ್ದೇಶಕ ಕೆ.ನಾರಾಯಣ ರಾವ್, ಅಕಾಡೆಮಿಯ ಸದಸ್ಯ ಸಂಚಾಲಕ ವಿಪಿನ್ ಭದೌರಿಯಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಉಪಸ್ಥಿತರಿದ್ದರು.