Site icon TUNGATARANGA

ಸಾಗರ: ನಿರಂತರ ಮಳೆಗೆ ಸೈದೂರು, ಕಾನ್ಲೆಯಲ್ಲಿ ಕೃಷಿ ಜಮೀನು ಜಲಾವೃತ ,ಸಂಸದ ಬಿ.ವೈ. ರಾಘವೇಂದ್ರ ಮಾಜಿ ಸಚಿವ ಕುಮಾರ ಬಂಗಾರಪ್ಪ ಭೇಟಿ ನೀಡಿ ಪರಿಶೀಲನೆ

ಕಳೆದ ಒಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ತಾಲೂಕಿನ ಹೊಳೆಹಳ್ಳಗಳು ತುಂಬಿ ಪ್ರವಾಹ ಸೃಷ್ಟಿಸಿದೆ. ಎಂದಿನಂತೆ ತಾಳಗುಪ್ಪ ಹೋಬಳಿಯ ಸೈದೂರು ಮತ್ತು ಕಾನ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೩ಸಾವಿರ ಎಕರೆಗೂ ಹೆಚ್ಚಿನ ಕೃಷಿ ಜಮೀನು ಜಲಾವೃತಗೊಂಡಿದೆ.


ಸೈದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಹೊಳೆ, ಮಾವಿನಹೊಳೆ ಮತ್ತು ವರದಾನದಿಯ ಪ್ರವಾಹದಿಂದ ಕನ್ನಹೊಳೆ ಸೇತುವೆಯ ಮೇಲೆ ನೀರು ಉಕ್ಕಿ ಹರಿದಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಇಲಾಖೆ ಮುಂಜಾಗೃತ ಕ್ರಮವಾಗಿ ಬ್ಯಾರಿಕೇಡ್ ಹಾಕಿದ್ದಾರೆ.

ಮಳೆ ಹೀಗೆ ಮುಂದುವರೆದರೆ ಬೀಸನಗದ್ದೆ ಗ್ರಾಮ ಜಲಾವೃತವಾಗುವ ಎಲ್ಲಾ ಸಾಧ್ತೆ ಇದೆ. ಈಗಾಗಲೆ ಬಿತ್ತನೆ ಮಾಡಿದ ಭತ್ತ, ಕಬ್ಬು, ಶುಂಠಿ ಬೆಳೆಗಳು ನೀರಿನಲ್ಲಿ ಸಂಪೂರ್ಣ ಮುಳುಗಿದ್ದಲ್ಲದೆ ಕೊಚ್ಚಿ ಹೋಗಿರುವ ಸಾಧ್ಯತೆ ಕೂಡ ಇದೆ.


ಸಂಸದರ ಭೇಟಿ : ಗುರುವಾರ ಸಂಸದ ಬಿ.ವೈ. ರಾಘವೇಂದ್ರ ಜಲಾವೃತಗೊಂಡ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಇಂದು ಬೇರೆಬೇರೆ ಹತ್ತು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ನೆರೆ ಬರುತ್ತದೆ ಎನ್ನುವುದರ ಅರಿವಿಲ್ಲದ ರೈತರು ಭತ್ತವೂ ಸೇರಿದಂತೆ ಕಬ್ಬು, ಶುಂಠಿ, ಅನಾನಸ್, ಜೋಳ ಮತ್ತಿತರ ಬೆಳೆ ಬೆಳೆದಿದ್ದರು. ಆದರೆ ನೆರೆಯಿಂದಾಗಿ ಕೊಳೆತು ಅಪಾರ ನಷ್ಟ ಅನುಭವಿಸಿದ್ದಾರೆ, ಈ ಹಿನ್ನೆಲೆಯಲ್ಲಿ ತಕ್ಷಣ ರಾಜ್ಯ ಸರಕಾರ ಗಮನ ಹರಿಸಬೇಕು. ಸಕಾಲದಲ್ಲಿ ಅಧಿಕಾರಿಗಳನ್ನು ಕಳಿಸಿ ಪ್ರಾಮಾಣಿಕವಾಗಿ ಹಾನಿಯ ವರದಿ ಸಿದ್ದಗೊಳಿಸಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.


ಮಾಜಿ ಸಚಿವ ಕುಮಾರ ಬಂಗಾರಪ್ಪ ಮಾತನಾಡಿ, ಪ್ರತಿವರ್ಷ ಈ ಭಾಗದ ಜನರು ನೆರೆಯಿಂದ ಸಂಕಷ್ಟಕ್ಕೆ ಒಳಗಾಗುತ್ತಿದ್ದು ಅದಕ್ಕೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ಮಾಡಿಸಲಾಗಿತ್ತು ನೀರನ್ನು ದಂಡಾವತಿ ಮತ್ತು ಮಾವಿನಹೊಳೆಗೆ ಪ್ರತ್ಯೇಕಿಸುವ ಯೋಜನೆ ಅನುಷ್ಟಾನಕ್ಕೆ ಬಂದಿದ್ದರೆ ಹೀಗೆ ನೆರೆ ಇರುತ್ತಿರಲಿಲ್ಲ ಹಾಲಿ ರಾಜ್ಯ ಸರಕಾರ ಹಣ ಕೊಡದೆ ಇರುವುದರಿಂದ ಕೇಂದ್ರ ಸರಕಾರಕ್ಕೆ ಸಂಸದರ ಮೂಲಕ ಮನವಿ ಮಾಡಲಾಗುತ್ತಿದೆ ಎಂದರು.


ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ ಹಕ್ರೆ, ದೇವೇಂದ್ರಪ್ಪ ಯಲಕುಂದ್ಲಿ, ಆನಂದ ಜನ್ನೆಹಕ್ಲು, ಪ್ರಕಾಶ್ ತಲಕಾಲಕೊಪ್ಪ, ವೀರುಪಾಕ್ಷಪ್ಪ, ಜೀತೇಂದ್ರ ಮತ್ತು ಗ್ರಾಮಸ್ಥರು ಇದ್ದರು

Exit mobile version