Site icon TUNGATARANGA

ಸಾಗರ:ವಿಪರೀತ ಗಾಳಿ ಮಳೆಗೆ 49 ಮನೆಗಳು ಕುಸಿತ, ಅಗತ್ಯ ನೆರವು ಕಲ್ಪಿಸುವ ಭರವಸೆ ನೀಡಿದ ಪೌರಾಯುಕ್ತ ಎಚ್.ಕೆ.ನಾಗಪ್ಪ

ಸಾಗರ : ವಿಪರೀತ ಗಾಳಿ ಮಳೆಗೆ ನಗರವ್ಯಾಪ್ತಿಯಲ್ಲಿ ೪೯ ಮನೆಗಳು ಕುಸಿದಿದ್ದು, ನಗರಸಭೆಯಿಂದ ಅಗತ್ಯ ನೆರವು ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪೌರಾಯುಕ್ತ ಎಚ್.ಕೆ.ನಾಗಪ್ಪ ತಿಳಿಸಿದರು.


ಇಲ್ಲಿನ ಬಸವನಹೊಳೆ ಡ್ಯಾಂಗೆ ಶುಕ್ರವಾರ ಭೇಟಿ ನೀಡಿ ಡ್ಯಾಂ ವಸ್ತುಸ್ಥಿತಿ ಪರಿಶೀಲನೆ ನಡೆಸಿ ನೌಕರರ ಜೊತೆ ಚರ್ಚೆ ನಡೆಸಿ ಮಾತನಾಡಿದ ಅವರು, ಜು. ೬ರಿಂದ ಈತನಕ ಅತಿಹೆಚ್ಚು ಮಳೆ ಪ್ರಮಾಣ ದಾಖಲಾಗಿದೆ. ಮಳೆಗೆ ನಗರಸಭೆ ಮತ್ತು ಪಿಡಬ್ಲ್ಯೂಡಿ ರಸ್ತೆ ಹಾಳಾಗಿದೆ ಎಂದರು.
ನಗರಸಭೆಯಿಂದ ಮನೆ ಹಾನಿಗೊಳಗಾದವರಿಗೆ ಪರಿಹಾರ ನೀಡಲು ಅಗತ್ಯಕ್ರಮ ಕೈಗೊಳ್ಳಲಾಗುತ್ತಿದೆ. ಶಾಸಕರು ಮತ್ತು ಉಪವಿಭಾಗಾಧಿಕಾರಿಗಳ ಸೂಚನೆಯಂತೆ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಾಗುತ್ತಿದೆ

. ಶಾಸಕರು ವಿದೇಶದಲ್ಲಿದ್ದರೂ ಪ್ರತಿದಿನ ಎರಡು ಮೂರು ಬಾರಿ ವಿಡಿಯೋ ಕಾಲ್ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ ವಸ್ತುಸ್ಥಿತಿ ಅರಿತು ಸೂಕ್ತ ಸಲಹೆ ನೀಡುತ್ತಿದ್ದಾರೆ. ಒಟ್ಟಾರೆ ಸಾಗರ ನಗರವ್ಯಾಪ್ತಿಯಲ್ಲಿ ಹೆಚ್ಚಿನ ಅನಾಹುತವಾಗದಂತೆ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.


ನಗರವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿದ್ದ ೨೧ ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿತ್ತು. ಪ್ರತಿವರ್ಷ ಈ ಪ್ರದೇಶಗಳಲ್ಲಿ ನೀರು ಉಕ್ಕಿ ಮನೆಗಳಿಗೆ ನುಗ್ಗಿ ಸಮಸ್ಯೆಯಾಗುತಿತ್ತು. ಈ ವರ್ಷ ಮುಂಜಾಗೃತೆ ವಹಿಸಿದ್ದರಿಂದ ಅತಿಯಾದ ಮಳೆ ಬಂದರೂ ಮನೆಗಳಿಗೆ ನೀರು ನುಗ್ಗಿಲ್ಲ. ವಿನೋಬಾ ನಗರದ ಬಶೀರ್ ಲೇಔಟ್, ಆರ್.ಎಂ.ಸಿ. ಸಮೀಪದ ಬಂಗಾರಪ್ಪ ಸರ್ಕಲ್ ಇನ್ನಿತರೆ ಕಡೆಗಳಲ್ಲಿ ಮಳೆ ನೀರಿನಿಂದ

ಜಲಾವೃತ್ತವಾಗಿ ಅನಾಹುತ ಆಗದಂತೆ ನೋಡಿಕೊಳ್ಳಲಾಗಿದೆ. ಬಸವನಹೊಳೆ ಡ್ಯಾಂ ಭರ್ತಿಯಾಗಿ ಗೇಟ್ ತೆರೆದಾಗ ದೊಡ್ಡಮಟ್ಟದ ಅನಾಹುತವಾಗುತಿತ್ತು. ಈ ವರ್ಷ ಬೇಸಿಗೆಯಲ್ಲಿ ಡ್ಯಾಂ ಹೂಳು ತೆಗೆದು ನೀರು ಸರಾಗವಾಗಿ ಹರಿದು ಹೋಗಲು ಅವಕಾಶ ಕಲ್ಪಿಸಿದ್ದರಿಂದ ನೆರೆಹಾನಿ ಸಂಭವಿಸಿಲ್ಲ ಎಂದು ಹೇಳಿದರು.


ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ದೊಡ್ಡಮಟ್ಟದ ಯಾವುದೇ ಅನಾಹುತವಾಗಿಲ್ಲ. ಗುರುವಾರ ರಾಘವೇಂದ್ರ ಸ್ವಾಮಿ ಮಠದ ಹತ್ತಿರ ಬೃಹತ್ ಮರ ಬಿದ್ದಿದೆ. ಯಾರಿಗೂ ಸಣ್ಣ ತೊಂದರೆಯಾಗಿಲ್ಲ. ಕರೆಂಟ್ ಹೋಗಿರುವ ಸಂದರ್ಭದಲ್ಲಿ ಟ್ರಾನ್ಸ್‌ಫಾiರ್ ಮೇಲೆ ಮರ ಬಿದ್ದಿದೆ. ವಿದ್ಯುತ್ ಇದ್ದಿದ್ದರೆ ದೊಡ್ಡ ಮಟ್ಟದ ಅನಾಹುತವಾಗುವ ಸಾಧ್ಯತೆ ಇತ್ತು. ನಗರವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ ೩೦ ನೌಕರರನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳಲಾಗಿದೆ. ಮಳೆಹಾನಿಯಾದರೆ ತಕ್ಷಣ ಸ್ಪಂದಿಸಲು ೧೦ಜನ ನೌಕರರ ಜೊತೆ ಜೆಸಿಬಿ, ಟ್ಯಾಕ್ಟರ್ ಇನ್ನಿತರೆ ಸಿದ್ದಪಡಿಸಿ ಇರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ನೀರು ಸರಬರಾಜು ವಿಭಾಗದ ಸಲಾರ್ ಖಾನ್ ಇನ್ನಿತರರು ಹಾಜರಿದ್ದರು

Exit mobile version