Site icon TUNGATARANGA

ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಠವಾಗುತ್ತಿದೆ, ಬೆಂಗಳೂರಿನಲ್ಲಿ ಕೆಪಿಸಿಸಿ ಪರಿಶಿಷ್ಟ ವಿಭಾಗದ ರಾಜ್ಯ ಕಚೇರಿ ಉದ್ಘಾಟನೆಯಲ್ಲಿ:ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ

– ಇದಕ್ಕೆ ವಿಧಾನಸಭೆಲೋಕಸಭೆ ಚುನಾವಣೆ ಫಲಿತಾಂಶಗಳೇ ಸಾಕ್ಷಿ

– 

ಬೆಂಗಳೂರುಜುಲೈ 16, 2024: ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಠವಾಗುತ್ತಿದೆ ಎಂಬುದಕ್ಕೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಫಲಿತಾಂಶಗಳೇ ಸಾಕ್ಷಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕೇಂದ್ರ ಕಚೇರಿ ಆವರಣದಲ್ಲಿ ಮಂಗಳವಾರ ಕೆಪಿಸಿಸಿ ಪರಿಶಿಷ್ಟ ವಿಭಾಗ ರಾಜ್ಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಜ್ಯದಲ್ಲಿ ಉತ್ತಮ ಸಂಘಟನೆ ಮಾಡಿದ್ದಾರೆ. ಇದರ ಪ್ರತಿಫಲವಾಗಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿಕ್ಕೆ ಬಂದಿದ್ದಲ್ಲದೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸುವಂತಾಯಿತು. ಅದರಲ್ಲೂ ಪರಿಶಿಷ್ಟ ವಿಭಾಗದ ಮತದಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯುವಲ್ಲಿ ಕೆಪಿಸಿಸಿ ಪರಿಶಿಷ್ಟ ವಿಭಾಗ ಯಶಸ್ವಿಯಾಗಿದೆ ಎಂದರು.

ಇತ್ತೀಚೆಗೆ ಬೀಳುತ್ತಿರುವ ಭಾರೀ ಮಳೆಯಿಂದ ರಾಜ್ಯಾದ್ಯಂತ ರಸ್ತೆ, ಸೇತುವೆಗಳು ಹಾನಿಗೊಳಗಾಗಿವೆ. ಎಷ್ಟು ಹಾನಿಯಾಗಿದೆ ಎಂಬ ಬಗ್ಗೆ ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾನಿಗೊಳಗಾಗಿರುವ ರಸ್ತೆ ಮತ್ತು ಸೇತುವೆಗಳನ್ನು ಆದ್ಯತೆ ಮೇಲೆ ಶೀಘ್ರವೇ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಹಾರಾಷ್ಟ್ರದ ಮಾಜಿ ಸಚಿವರು ಹಾಗೂ ಅಖಿಲ ಭಾರತ ಪರಿಶಿಷ್ಟ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾದ ಶಿವಾಜಿ ರಾವ್ ಮೋಗೆ ಅವರು ಮಾತನಾಡಿ, ದೇಶದಲ್ಲಿ ಪರಿಶಿಷ್ಟ ಸಮುದಾಯದ 6 ಕೋಟಿ ಜನಸಂಖ್ಯೆ ಇದೆ. ವಿಧಾನಸಭೆ, ಲೋಕಸಭೆ ಮಾತ್ರವಲ್ಲದೆ, ನಗರ ಮತ್ತು ಪಂಚಾಯತ್ ರಾಜ್ ಸ್ಥಳೀಯ ಸಂಸ್ಥೆಗಳಲ್ಲೂ ಈ ಸಮುದಾಯಕ್ಕೆ ಅತಿ ಹೆಚ್ಚು ಪ್ರಾತಿನಿಧ್ಯ ನೀಡಿದ ಪಕ್ಷ ಎಂದರೆ ಅದು ಕಾಂಗ್ರೆಸ್ ಮಾತ್ರ. ಹೀಗಾಗಿಯೇ ಈ ಸಮುದಾಯದ ಜನ ನಮ್ಮೊಂದಿಗಿದ್ದಾರೆ ಎಂದರು.

ಸಂವಿಧಾನ ಬದ್ದವಾಗಿ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್, ಸಂವಿಧಾನ ರಕ್ಷಣೆಗೆ ಪ್ರಥಮ ಆದ್ಯತೆ ನೀಡುತ್ತಿದೆ. ಇತ್ತೀಚೆಗೆ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಸಂಸದರು ಸಂವಿಧಾನದ ಪುಸ್ತಕವನ್ನು ಕೈಯ್ಯಲ್ಲಿ ಹಿಡಿದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಂವಿಧಾನದ ಮೇಲಿನ ಕಾಂಗ್ರೆಸ್ ನ ಬದ್ಧತೆಯನ್ನು ಮತ್ತೊಮ್ಮೆ ಎತ್ತಿಹಿಡಿದಿದ್ದಾರೆ ಎಂದು ತಿಳಿಸಿದರು.

ಪರಿಶಿಷ್ಟ ವಿಭಾಗ ರಾಜ್ಯಾಧ್ಯಕ್ಷರಾದ ಎಂ.ವಿಜಯನಾಯಕ್ ಮಾತನಾಡಿ, ಸಮಾಜದ ಎಲ್ಲಾ ವರ್ಗ, ಧರ್ಮದವರಿಗೆ ಸರಿಸಮಾನ ಅವಕಾಶ ಕೊಟ್ಟು ಜಾತ್ಯತೀತ ರಾಷ್ಟ್ರ ನಿರ್ಮಾಣದಲ್ಲಿ ಕಾಂಗ್ರೆಸ್ ಮಹತ್ವದ ಕೊಡುಗೆ ನೀಡಿದೆ ಎಂದರಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಪರಿಶಿಷ್ಟ ಪಂಗಡದ ಸಮುದಾಯ ಶ್ರೇಯೋಭಿವೃದ್ದಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ಮುಂಬರುವ ಬಿಬಿಎಂಪಿ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ಹಾಗೂ ನಿಗಮ, ಮಂಡಳಿ ನೇಮಕಾತಿಯಲ್ಲಿ ಪರಿಶಿಷ್ಟ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಕೃಷ್ಣಮೂರ್ತಿ,ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ಧರ್ಮಸೇನ, ಐಎನ್ ಬಿಸಿಡಬ್ಲ್ಯುಎಫ್ ಅಧ್ಯಕ್ಷರಾದ ಜಿ.ಆರ್.ದಿನೇಶ್, ಇಂಟಕ್ ಅಧ್ಯಕ್ಷರಾದ ಲಕ್ಷ್ಮಿವೆಂಕಟೇಶ್, ಸೇವಾದಳ ಅಧ್ಯಕ್ಷರಾದ ರಾಮಚಂದ್ರ, ಶೌಕತ್ ಅಲಿ ಸೇರಿದಂತೆ ಪರಿಶಿಷ್ಟ ಪಂಗಡ ವಿಭಾಗದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Exit mobile version