Site icon TUNGATARANGA

ಭಾರೀ ಮಳೆಯಿಂದಾಗಿ ಶಿವಮೊಗ್ಗದಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಾ ನದಿ

ಶಿವಮೊಗ್ಗ,ಜು೧೬: ಶಿವಮೊಗ್ಗ ನಗರದಲ್ಲಿ ನೆನ್ನೆ ರಾತ್ರಿಯಿಡಿ ಭಾರೀ ಮಳೆಯಾಗಿದ್ದು, ಇಂದು ಬೆಳಿಗ್ಗೆನಿಂದ ಮಳೆಯ ಅಬ್ಬರ ಕಡಿಮೆಯಾಗಿದೆ. ಮತ್ತೊಂದೆಡೆ, ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು ಮೈದುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ಆಗುಂಬೆ, ತೀರ್ಥಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ೨ದಿನಗಳಿಂದ ಭಾರೀ ಮಳೆಯಾಗುತ್ತಿದೆ.

ಇದರಿಂದ ತುಂಗಾ ಡ್ಯಾಂಗೆ  ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ನಿರಂತರವಾಗಿ ಏರಿಕೆ ಕಂಡುಬರುತ್ತಿದೆ. ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ವರ್ಷಧಾರೆ ರಮಣೀಯತೆಯನ್ನು ಪಡೆದುಕೊಂಡಿದ್ದು, ಮಳೆಯ ರಭಸಕ್ಕೆ ತುಂಗಾ ನದಿಯ ಉಪನದಿಗಳೆಲ್ಲಾ ಉಕ್ಕೇರಿವೆ. ಜೊತೆಯಲ್ಲಿ ತುಂಗೆಯು ಸಹ ಕಳೆಗಟ್ಟಿದೆ. ತುಂಗಾನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು,  ಪುರಾಣ ಪ್ರಸಿದ್ಧ ರಾಮೇಶ್ವರ ದೇವಸ್ಥಾನದ ಸಮೀಪ ಇರುವ ರಾಮಕೊಂಡ ಬಹುತೇಕ ಮುಳುಗಿದೆ.  


ಇತ್ತ ಗಾಜನೂರು ಜಲಾಶಯದ ಎಲ್ಲಾ ಕ್ರಸ್ಟ್ ಗೇಟ್‌ಗಳನ್ನು ಓಪನ್ ಮಾಡಲಾಗಿದ್ದು ಪ್ರಸ್ತುತ ಮಾಹಿತಿ ಪ್ರಕಾರ, ೪೧ ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಹರಿಯುತ್ತಿದೆ. ಪರಿಣಾಮ ಶಿವಮೊಗ್ಗದಲ್ಲಿ ಹರಿಯುವ ತುಂಗಾ ನದಿಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದೆ. ಅಲ್ಲದೆ ಶಿವಮೊಗ್ಗದಲ್ಲಿ ಹೊಳೆ ತುಂಬಿತು ಎಂದು ಆನಾದಿ ಕಾಲದಿಂದಲೂ ಲೆಕ್ಕ ಹೇಳುವ ಕೊರ್ಪಳ್ಳಯ್ಯನ ಛತ್ರದ ಬಳಿ ಇರುವ ಮಂಟಪ ಇವತ್ತು ಮುಳುಗಡೆಯಾಗಿದೆ.
ವಿಶೇಷವಾಗಿ ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಮಂಟಪ ಮುಳುಗಿದೆ. ಇನ್ನೂ ಮಳೆಯು

ಹೆಚ್ಚಾಗಿ ಹರಿಯುವ ನೀರಿನ ಕ್ಯೂಸೆಕ್ಸ್ ಪ್ರಮಾಣ ಹೆಚ್ಚಾದರೆ ವಿದ್ಯಾನಗರದ ಭಾಗದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಲಿದೆ. ಏಕೆಂದರೆ ತುಂಗಾ ನದಿಯ ಈ ಭಾಗದಲ್ಲಿ ಬೃಹತ್ ತಡೆಗೋಡೆ ನಿರ್ಮಿಸಲಾಗಿದೆ. ಹೀಗಾಗಿ ಹರಿಯುವ ನೀರು ಇನ್ನೊಂದು ಭಾಗಕ್ಕೆ ಒತ್ತುವುದರಿಂದ ಆ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಇನ್ನೂ ಇತ್ತಾ ಬೀಬಿ ಸ್ಟ್ರೀಟ್ ಸೀಗೇಹಟ್ಟಿ ಭಾಗದಲ್ಲಿ ರಾಜಕಾಲುವೆ ಇರುವ ಸುತ್ತಮುತ್ತ ನದಿ ನೀರು ಉಕ್ಕುವ ಸಾಧ್ಯತೆ ಇದೆ.


ಇದೆಲ್ಲದರ ನಡುವೆ ಜನರು ತುಂಬಿದ ತುಂಗೆಯ ಶೃಂಗಾರವನ್ನು ನೋಡಲು ನದಿಕಡೆಗೆ ತೆರಳುತ್ತಿದ್ದಾರೆ. ತಮ್ಮ ಮೊಬೈಲ್‌ಗಳಲ್ಲಿ ತುಂಗೆಯ ಸೌಂದರ್ಯವನ್ನು ಸೆರೆಹಿಡಿದು ನಮ್ಮೂರ ತಾಯಿ ಮೈದುಂಬಿ ಹರಿಯುತ್ತಿದ್ದಾಳೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಹಾಕಿಕೊಳ್ಳುತ್ತಿದ್ದಾರೆ.

 
ಮತ್ತೊಂದೆಡೆ, ತುಂಗೆಯ ಹರಿವು ಹೆಚ್ಚಾಗಿರುವುದರಿಂದ ನದಿಯಂಚಿನ ತಗ್ಗು ಪ್ರದೇಶಗಳಲ್ಲಿ ಜಲಾವೃತದ ಭೀತಿ ಎದುರಾಗಿದೆ. ಈಗಾಗಲೇ ಪಾಲಿಕೆ ಆಡಳಿತವು ತಗ್ಗು ಪ್ರದೇಶಗಳ ಜನತೆಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಹಾಗೆಯೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಮಾಡಿಕೊಂಡಿದೆ.


ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಅಕ್ಷರಶಃ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಮಂಗಳವಾರ ಬೆಳಿಗ್ಗೆ ೮ ಗಂಟೆಗೆ ಕೊನೆಗೊಂಡಂತೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಮಾಣಿಯಲ್ಲಿ ೨೪೦ ಮಿ.ಮೀ. ಯಡೂರು  ೨೨೯ ಮಿ.ಮೀ., ಹುಲಿಕಲ್ಲು ೨೪೫ ಮಿ.ಮೀ., ಮಾಸ್ತಿಕಟ್ಟೆ ೨೪೭ ಮಿ.ಮೀ., ಸಾವೇಹಕ್ಲುವಿನಲ್ಲಿ ೨೧೦ ಮಿ.ಮೀ. ಮಳೆಯಾಗಿದೆ.
ಶಿವಮೊಗ್ಗ ೫೨ ಮಿ.ಮೀ., ಭದ್ರಾವತಿ ೨೬. ೪೦ ಮಿ.ಮೀ., ತೀರ್ಥಹಳ್ಳಿ ೧೨೦. ೯೦ ಮಿ.ಮೀ., ಸಾಗರ ೧೨೯. ೧೦ ಮಿ.ಮೀ., ಶಿಕಾರಿಪುರ ೫೭. ೯೦ ಮಿ.ಮೀ., ಸೊರಬ ೫೮. ೫೦ ಮಿ.ಮೀ. ಹಾಗೂ ಹೊಸನಗರದಲ್ಲಿ ೧೩೩. ೬೦ ಮಿ.ಮೀ. ಮಳೆಯಾಗಿದೆ.  

Exit mobile version