Site icon TUNGATARANGA

ಮುಂದುವರೆದ ಮಳೆ ಅಬ್ಬರ ಜನಜೀವನ ಅಸ್ತವ್ಯಸ್ತ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿಗಳಿಗೆ ಜೀವ ಕಳೆ

ಶಿವಮೊಗ್ಗ : ಕಳೆದ ಮೂರು ನಾಲ್ಕು ದಿನಗಳಿಂದ ಅಬ್ಬರಿಸುತ್ತಿರುವ ಪುನರ್ವಸು ಮಳೆ ಮಲೆನಾಡು ತಾಲೂಕುಗಳಲ್ಲಿ ತನ್ನ ಅರ್ಭಟವನ್ನು ಮುಂದುವರಿಸಿದೆ. ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿಗಳು ತುಂಬಿ ಹರಿಯತೊಡಗಿದ್ದು, ತುಂಗೆ ಅಪಾಯದ ಮಟ್ಟ ತಲುಪಿದೆ.

ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಮಳೆ ಬೋರ್ಗರೆಯುತ್ತಿದೆ. ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಎಡಬಿಡದೆ ಸುಡುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿಗಳಾದ ತುಂಗೆ, ಭದ್ರೆ, ಶರಾವತಿ, ಮಾಲತಿ ಸೇರಿದಂತೆ ಬಹುತೇಕ ಎಲ್ಲ ನದಿಗಳಿಗೆ ಜೀವಕಳೆ ಬಂದಿದೆ. 

ಶೃಂಗೇರಿ, ಕೊಪ್ಪ, ಆಗುಂಬೆ, ತೀರ್ಥಹಳ್ಳಿ ಭಾಗದಲ್ಲಿ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿದ್ದು, ಪ್ರವಾಹದ ಭೀತಿ ಶಿವಮೊಗ್ಗಕ್ಕೆ ಎದುರಾಗಿದೆ. ಗಾಜನೂರು ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಅಣೆಕಟ್ಟೆಯಿಂದ ಅಪಾರ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸಲಾಗುತ್ತಿದೆ. 

ಬೆಳಗ್ಗಿನ ಮಾಹಿತಿ ಪ್ರಕಾರ ನದಿಗೆ  61757 ಕ್ಯೂಸೆಕ್ ನಷ್ಟು ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಅಪಾರ ಪ್ರಮಾಣದಲ್ಲಿ  ನೀರು ಹರಿದು ಬರುತ್ತಿರುವುದರಿಂದ ಶಿವಮೊಗ್ಗದ ಕೋರ್ಪಲಯ್ಯ ಛತ್ರ ಸಮೀಪದ ಕಲ್ಲಿನ ಮಂಟಪ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದೆ. ಉಕ್ಕಿ ಹರಿಯುತ್ತಿರುವ ತುಂಗಾ ನದಿಯ ಮನಮೋಹಕ ದೃಶ್ಯ ಕಣ್ತುಂಬಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಜನರು ನದಿ ದಂಡೆಯತ್ತ ಆಗಮಿಸುತ್ತಿದ್ದಾರೆ.

ಮಂಗಳವಾರ ಬೆಳಿಗ್ಗೆಯ ಮಾಹಿತಿಯಂತೆ ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಒಂದಾಗಿರುವ ಲಿಂಗನಮಕ್ಕಿ ಜಲಾಶಯದ ಒಳಹರಿವು 77,911 ಕ್ಯೂಸೆಕ್ ಗೆ ಹೆಚ್ಚಳವಾಗಿದೆ. ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಹೀಗಾಗಿ ಗರಿಷ್ಠ 1819 ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ನೀರಿನ ಮಟ್ಟ 1782. 15 ಅಡಿಗೆ ತಲುಪಿದೆ. ಕಳೆದ 24 ಗಂಟೆಯಲ್ಲಿ 4 ಅಡಿ  ನೀರು ಸಂಗ್ರಹವಾಗಿದೆ.

ಯಡೂರು, ಮಾಸ್ತಿಕಟ್ಟೆ, ಹುಲಿಕಲ್ ಘಾಟ್, ನಗರ, ಸಂಪೇಕಟ್ಟೆ ಸೇರಿದಂತೆ ಹೊಸನಗರ ತಾಲೂಕಿನಲ್ಲಿ ಮಳೆ ಒಂದೇ ಸಮನೆ ಅರ್ಭಟಿಸತೊಡಗಿದೆ. ಧಾರಾಕಾರ ಮಳೆಯಿಂದಾಗಿ ಹೊಸನಗರ ತಾಲೂಕಿನ ಹಳಗುಂದ ಗ್ರಾಮದಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ತೀರ್ಥಹಳ್ಳಿ, ಮಾಸ್ತಿಕಟ್ಟೆ, ಕುಂದಾಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಮಂಗಳೂರು, ಉಡುಪಿ, ಕುಂದಾಪುರ. ಮಣಿಪಾಲ್ ಗೆ ಹೋಗುವ  ಪ್ರಯಾಣಿಕರು ಪರದಾಡುವಂತಾಯಿತು. ಬೆಳಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವುಗಳಿಸಿದ್ದಾರೆ. 

ಇತ್ತ ಭದ್ರಾ ಜಲಾದಯದ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬಿಆರ್ಪಿ ಯಲ್ಲಿರುವ ಭದ್ರ ಜಲಾಶಯಕ್ಕೆ 27,839 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 166 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಗರಿಷ್ಠ ಮಟ್ಟ 186 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಇದೀಗ ನೀರಿನ ಮಟ್ಟ  144.7 ಅಡಿಗೆ ತಲುಪಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ  ಸರಿಸುಮಾರು 3.5 ಅಡಿಯಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನದಂದು ಭದ್ರಾ ಡ್ಯಾಂನಲ್ಲಿ 141. 3 ಅಡಿಯಷ್ಟು ನೀರು ಸಂಗ್ರಹವಾಗಿತ್ತು.

ಉಳಿದಂತೆ ತುಂಗಾ ಜಲಾಶಯವು ಈಗಾಗಲೇ ಗರಿಷ್ಠ ಮಟ್ಟವಾದ 588. 24 ಮೀಟರ್ ತಲುಪಿದೆ. ಮಂಗಳವಾರ ಬೆಳಿಗ್ಗೆಯ ಮಾಹಿತಿಯಂತೆ ಒಳಹರಿವು 42,683 ಕ್ಯೂಸೆಕ್ ಇದ್ದರೆ, 41,583 ಕ್ಯೂಸೆಕ್ ನೀರನ್ನು  ತುಂಗಾಭದ್ರಾ ಜಲಾಶಯಕ್ಕೆ ಹರಿಸಲಾಗುತ್ತಿದೆ.

ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಮಾಣಿಯಲ್ಲಿ 240 ಮಿ.ಮೀ., ಯಡೂರು 229 ಮಿ.ಮೀ., ಹುಲಿಕಲ್ಲು  245 ಮಿ.ಮೀ., ಮಾಸ್ತಿಕಟ್ಟೆ 247 ಮಿ.ಮೀ., ಸಾವೇಹಕ್ಲುವಿನಲ್ಲಿ 210 ಮಿ.ಮೀ. ಮಳೆಯಾಗಿದೆ.

ಶಿವಮೊಗ್ಗ 52 ಮಿ.ಮೀ., ಭದ್ರಾವತಿ 26. 40 ಮಿ.ಮೀ., ತೀರ್ಥಹಳ್ಳಿ 120. 90 ಮಿ.ಮೀ., ಸಾಗರ 129. 10 ಮಿ.ಮೀ., ಶಿಕಾರಿಪುರ  57. 90 ಮಿ.ಮೀ., ಸೊರಬ 58. 50 ಮಿ.ಮೀ. ಹಾಗೂ ಹೊಸನಗರದಲ್ಲಿ 133. 60 ಮಿ.ಮೀ. ಮಳೆಯಾಗಿದೆ.  

Exit mobile version