Site icon TUNGATARANGA

ವಜ್ರಮಹೋತ್ಸವ ಅಂಗವಾಗಿ ವಿದ್ಯಾವಂತ ನಿರುದ್ಯೋಗಿಗಳಿಗೆ ಜಿಲ್ಲೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಆರಂಭ:ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ರಿಂದ ಸಂಪೂರ್ಣ ವಿವರ

ಶಿವಮೊಗ್ಗ,ಜು.೧೩: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವಜ್ರಮಹೋತ್ಸವ ವರ್ಷಚಾರಣೆ ಅಂಗವಾಗಿ ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿಗಳಿಗೆ ಕೌಶಲ್ಯ ನೀಡುವ ಮತ್ತು ಜಿಲ್ಲೆಯ ಕೈಗಾರಿಕೋದ್ಯಮಿಗಳಿಗೆ ಹಾಗೂ ವಾಣಿಜ್ಯೋದ್ಯಮಿಗಳಿಗೆ ಪೂರಕವಾದ ಕೌಶಲ್ಯಯುಕ್ತ ಉದ್ಯೋಗಿಗಳನ್ನು ಒದಗಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ಅಡ್ವಾನ್ಸ್‌ಡ್ ಸ್ಕಿಲ್ ಅಕಾಡೆಮಿ(ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ)ಯನ್ನು ಸಂಘದ ಕಟ್ಟಡದಲ್ಲಿ ಆರಂಭಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ತಿಳಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಚಲಿತ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯದ ಕೊರತೆ ಇದ್ದು, ಶಿವಮೊಗ್ಗ ನಗರದಲ್ಲಿ ಉನ್ನತ ಮಟ್ಟದ ಕೌಶಲ್ಯ ತರಬೇತಿ ಕೇಂದ್ರದ ಅವಶ್ಯಕತೆಯನ್ನು ಮನಗಂಡು ಜಿಲ್ಲೆಯ ಯುವ ವಿದ್ಯಾವಂತ ವಿದ್ಯಾರ್ಥಿಗಳಿಗೆ ಕೌಶಲ್ಯಯುತ ತರಬೇತಿ ಕೊಟ್ಟು ೨-೩ ವರ್ಷಗಳಲ್ಲಿ ಉದ್ಯೋಗದ ಭರವಸೆ ನೀಡುವಂತದ್ದಾಗಿದೆ ಎಂದರು.


ಒಂದು ವರ್ಷದ ಪ್ರಯತ್ನದ ಫಲವಾಗಿ ಈ ಕೇಂದ್ರವನ್ನು ಆರಂಭಿಸಲಾಗುತ್ತಿದ್ದು, ಕೌಶಲ್ಯಯುಕ್ತ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ದೊರೆತಾಗ ಶಿವಮೊಗ್ಗ ನಗರಕ್ಕೆ ಹೊಸ ಹೊಸ ಸ್ಪಾರ್ಟ್ ಆಫ್ ಕಂಪನಿಗಳು ಬರಲು ಅವಕಾಶವಾಗುತ್ತದೆ. ಈ ಮೂಲಕ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರ ಬೆಳೆಯಲು ಸಾಧ್ಯವಾಗುತ್ತದೆ. ಮತ್ತು ಬೇಕಾದ ಕೆಲಸಕ್ಕೆ ಬೇಕಾದಂತಹ ಕೆಲಸಗಾರರು ಸಿಗುವಂತಹ ಕೆಲಸಗಾರರ ಸಮೂಹವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.


ಜಿಲ್ಲೆಯಲ್ಲಿರುವ ಪ್ರತಿಭಾವಂತ ಕೆಲಸಗಾರರನ್ನು ಶಿವಮೊಗ್ಗದಲ್ಲಿ ಉಳಿಸಿಕೊಳ್ಳುವಂತಹ ಸನ್ನಿವೇಶ ಸೃಷ್ಟಿಯಾಗಬೇಕು. ಕೌಶಲ್ಯ ತರಬೇತಿಗಾಗಿ ಹಲವು ಕಂಪನಿಗಳೊಂದಿಗೆ ಮತ್ತು ನಗರದ ಅನೇಕ ವಿದ್ಯಾಸಂಸ್ಥೆಗಳೊಂದಿಗೆ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.


ಸಂಘದ ನಿರ್ದೇಶಕ ಗಣೇಶ್ ಎಂ. ಅಂಗಡಿ ಮಾತನಾಡಿ, ತರಬೇತಿ ಕೇಂದ್ರವನ್ನು ಜು.೧೪ರ ನಾಳೆ ಬೆಳಿಗ್ಗೆ ೧೦.೩೦ಕ್ಕೆ ಸಂಘದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ.ರಾಘವೇಂದ್ರ, ಸಂಘದ ಮಾಜಿ ಅಧ್ಯಕ್ಷರು ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ, ವಿಧಾನಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ ಆಗಮಿಸಲಿದ್ದು, ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.


ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್ ಮಾತನಾಡಿ, ವಿದ್ಯಾಭ್ಯಾಸವನ್ನು ಬಿಟ್ಟ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ, ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡಲು ಸಾಧ್ಯವಾಗುವುದಲ್ಲದೆ, ಇದರಿಂದ ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳು ಬರುವುದರೊಂದಿಗೆ ಜಿಲ್ಲೆಯ ಆರ್ಥಿಕ ಅಭಿವೃದ್ಧಿ ಕೊಡುಗೆ ನೀಡುವ ನಿಟ್ಟಿನಲ್ಲಿ ಅಡ್ವಾನ್ಸ್‌ಡ್ ಸ್ಕಿಲ್ ಅಕಾಡೆಮಿಯು ಕಾರ್ಯ ನಿರ್ವಹಿಸುವ ಉದ್ದೇಶವನ್ನು ಹೊಂದಿದೆ ಎಂದರು.


ಉದ್ಯೋಗಕಾಂಕ್ಷಿಗಳು ಬಯಸಿದಂತೆ ತರಬೇತಿಯನ್ನು ನೀಡಲಾಗುತ್ತದೆ. ಒಂದು ಬ್ಯಾಚ್‌ನಲ್ಲಿ ೩೦ ಜನರಿಗೆ ಅವಕಾಶವಿದೆ. ೩ ತಿಂಗಳ ಕಾಲ ತರಬೇತಿ ನೀಡಲಾಗುವುದು. ಇದರಲ್ಲಿ ಒಂದು ತಿಂಗಳು ಕಂಪನಿ ಅಥವಾ ಕಾರ್ಖಾನೆಗಳಲ್ಲಿ ನೀಡುತ್ತಾರೆ. ಈ ಅವಧಿಯಲ್ಲಿ ಸಂಬಂಧಪಟ್ಟ ಕಂಪನಿ ಮತ್ತು ಕಾರ್ಖಾನೆಗಳವರು ಸ್ಟೈಪಂಡ್ ನೀಡುತ್ತಾರೆ ಎಂದ ಅವರು ಉಳಿದಂತೆ ೨ ತಿಂಗಳ ತರಬೇತಿಗೆ ಸರಳ ಶುಲ್ಕವನ್ನು ವಿಧಿಸಲಾಗುವುದು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಸಂಘದ ಸಹಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಖಜಾಂಚಿ ಎಂ.ರಾಜು, ನಿರ್ದೇಶಕರಾದ ಪ್ರದೀಪ್ ವಿ.ಯೆಲಿ,ಇ.ಪರಮೇಶ್ವರ, ಮರಿಸ್ವಾಮಿ, ಎಂ.ಆರ್. ರಮೇಶ್ ಹೆಗಡೆ ಉಪಸ್ಥಿತರಿದ್ದರು.

Exit mobile version