Site icon TUNGATARANGA

ಕೆಲ “ಕಾಂಗ್ರೆಸ್” ನಾಯಕರ ನಡುವೆ ಶಾಸಕರಾದ ಬಲ್ಕೀಷ್ ಭಾನು ಅವರು ಗ್ರೇಟ್.., ಮನದಾಳದ ಮಾತು

ಎಸ್. ಕೆ. ಗಜೇಂದ್ರ ಸ್ವಾಮಿ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ನಿಜಕ್ಕೂ ಒಂದೊಳ್ಳೆ ಆಯ್ಕೆ ಮಾಡಿದೆ. ವಿಧಾನಪರಿಷತ್ ಸದಸ್ಯರ ನೇಮಕದ ವಿಷಯದಲ್ಲಿ ಶಿವಮೊಗ್ಗ ಜಿಲ್ಲೆಗೆ ಆದ್ಯತೆ ನೀಡಲು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಸದ್ದಿಲ್ಲದ ಸೇವಾ ಮನೋಭಾವದ ಮಹಿಳೆಯನ್ನು ಇದೇ ಮೊದಲ ಬಾರಿಗೆ ವಿಧಾನಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿರುವುದು ವಿಶೇಷ.


ಸರಿಸುಮಾರು 35 ರಿಂದ 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿರುವ ಭದ್ರಾವತಿ ಮೂಲದ ಬಲ್ಕೀಷ್ ಬಾನು ಅವರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ನ ಹೈಕಮಾಂಡ್ ನಿಜಕ್ಕೂ ಒಂದು ಒಳ್ಳೆ ನಿರ್ಧಾರ ತೆಗೆದುಕೊಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.


ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಂತರ ಅವರು ಕಾಂಗ್ರೆಸ್ ಪಕ್ಷದ ವಿವಿಧ ಆಯಾಮಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿದ್ದರು. ಯಾವುದೇ ಗತ್ತು, ದರ್ಪ ಇಲ್ಲದೆ ಸರಳ ಸಜ್ಜನಕೆಯಿಂದ ಎಲ್ಲರನ್ನು ನಗುಮೊಗದಿಂದಲೇ ಮಾತನಾಡಿಸುತ್ತಾ, ಪ್ರೀತಿ ವಿಶ್ವಾಸದಿಂದ ಎಲ್ಲರ ಜೊತೆ ಬೆರೆಯುತ್ತಿದ್ದ ಬಲ್ಕಿಷ್ ಬಾನು ಅವರ ಆಯ್ಕೆ ನಿಜಕ್ಕೂ ಕಾಂಗ್ರೆಸ್ ಪಕ್ಷದ ಹೊಸ ತಲೆಮಾರಿಗೆ ಸಂತಸ ನೀಡಿದೆ.
ಬಾನು ಅವರು ಮಹಿಳಾ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್, ರಾಜ್ಯ ಕೆಪಿಸಿಸಿ, ಎಐಸಿಸಿ ತನಕ ಸಕ್ರಿಯರಾಗಿ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು.


ಈಗಲೂ ಅದೇ ನಗುಮೊಗದ ಅಕ್ಕನಾಗಿ ಅವರು ಎಲ್ಲರ ಮುಂದೆ ಕಾಣಿಸಿಕೊಳ್ಳುತ್ತಾರೆ. ಶಿವಮೊಗ್ಗ ಜಿಲ್ಲಾ ಕೆಲ ಅಧಿಕಾರ ಆಕಾಂಕ್ಷಿತ ಕಾಂಗ್ರೆಸ್ ನಾಯಕರ ನಡುವೆ ಬಲ್ಕಿಷ್ ಬಾನು ವಿಶೇಷವಾಗಿ ನಿಲ್ಲುತ್ತಾರೆ. ಏಕೆಂದರೆ ಯಾವಾಗಲೂ ಅಧಿಕಾರದ ಹಿಂದೆ ಬೆನ್ನು ಹತ್ತದೆ, ತನಗೆ ವಹಿಸಿದ ಪಕ್ಷದ ಕೆಲಸವನ್ನು ನಿರ್ವಹಿಸಿದ ಹಿರಿಮೆ ಅವರದು.
ನಿನ್ನೆ ಶಿವಮೊಗ್ಗ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅವರ ಕಚೇರಿ ಉದ್ಘಾಟನಾ ಸಮಾರಂಭ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಪ್ರಮುಖರು, ಕಾರ್ಯಕರ್ತರು, ಅಷ್ಟೇ ಏಕೆ ವಿವಿಧ ಪಕ್ಷಗಳ ಪ್ರಮುಖರು ಅವರಿಗೆ ಶುಭ ಕೋರಿದ್ದು ವಿಶೇಷ.
ಸಚಿವ ಮಧು ಬಂಗಾರಪ್ಪ ಅವರು ಆಗಮಿಸಿ, ಅವರಿಗೆ ಶುಭ ಕೋರಿದರು ಹಾಗೂ ಕಚೇರಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ನೀಡಲಾಗಿದೆ ಎಂದು ಹೇಳಿದರು. ಬಲ್ಕಿಷ್ ಬಾನು ಯಾವಾಗಲೂ ಅಲ್ಪಸಂಖ್ಯಾತರು ಎಂದು ಹೇಳಿಸಿಕೊಳ್ಳಲೇ ಇಲ್ಲ . ಎಲ್ಲರ ಜೊತೆ ನಾನು ಒಬ್ಬಾಕೆ ಎಂದು ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದುದು ಅವರನ್ನು ಇಂದಿನ ಈ ಸ್ಥಾನಮಾನಕ್ಕೆ ತರಲು ಕಾರಣವೆಂದರೆ ತಪ್ಪಾಗಲಿಕ್ಕಿಲ್ಲ.


ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.
ಕಾಂಗ್ರೆಸ್ ನಾಯಕರು ಈ ಆಯ್ಕೆ ವಿಷಯದಲ್ಲಿ ಒಂದೊಳ್ಳೆ ನಿರ್ಧಾರ ತೆಗೆದುಕೊಂಡಿದ್ದಾರೆ. ಪಕ್ಷದ Kindly ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರಿಗೆ ಅದರಲ್ಲೂ ಹಿರಿಯ ನಾಯಕರಿಗೆ ಇಂತಹ ಅವಕಾಶ ದೊರೆತಿರುವುದು ವಿಶೇಷ ಹಾಗೂ ಗೌರವಾನ್ವಿತವೇ ಹೌದು.

Exit mobile version