ಸಾಗರ : ಶರಾವತಿ ಹಿನ್ನೀರು ಪ್ರದೇಶದ ಜನರು ಕತ್ತಲಿನಲ್ಲಿ ಇರಬಾರದು. ನಾಡಿಗೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನು ಕಳೆದುಕೊಂಡ ಹಿನ್ನೀರಿನ ಜನರಿಗೆ ದಿನದ ೨೪ ಗಂಟೆ ವಿದ್ಯುತ್ ಕೊಡುವುದು ನಮ್ಮ ಕರ್ತವ್ಯ.
ಮೆಸ್ಕಾಂ ಅಧಿಕಾರಿಗಳು ತುಮರಿ ಸೇರಿದಂತೆ ಶರಾವತಿ ಹಿನ್ನೀರು ಪ್ರದೇಶದ ಬಗ್ಗೆ ಹೆಚ್ಚು ಗಮನ ಹರಿಸಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಮೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಬೆಳಕಿನಲ್ಲಿದ್ದು ಹಿನ್ನೀರಿನ ಜನರು ಕತ್ತಲಿನಲ್ಲಿರುವುದು ಎಂತಹ ನ್ಯಾಯ. ಅವರ ಸಮಸ್ಯೆಗೆ ಸ್ಪಂದಿಸಿ ಎಂದು ಸೂಚನೆ ನೀಡಿದರು.
ಮಳೆಗಾಲ ಪ್ರಾರಂಭವಾಗಿದ್ದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೆಚ್ಚು ಜಾಗೃತೆಯಿಂದ ಕೆಲಸ ಮಾಡಬೇಕು. ರೈತರ ಯಾವುದೇ ದೂರುಗಳು ನನ್ನತನಕ ಬರಬಾರದು. ಸೊಸೈಟಿ ಮೂಲಕ ಗೊಬ್ಬರವನ್ನು ರೈತರಿಗೆ ಕೊಡಲು ಈಗಾಗಲೆ ಅಗತ್ಯಕ್ರಮ ಕೈಗೊಳ್ಳಲಾಗಿದೆ. ಬೆಳೆವಿಮೆ ಬಗ್ಗೆ ರೈತರಿಗೆ ಮಾಹಿತಿ ನೀಡಿ ಹೆಚ್ಚು ರೈತರು ವಿಮೆ ಮಾಡಿಸಿಕೊಳ್ಳುವಂತೆ ಪ್ರೇರೆಪಿಸಿ. ಮಣ್ಣು ಪರೀಕ್ಷೆಯನ್ನು ಕಾಲಕಾಲಕ್ಕೆ ನಡೆಸಿ ರೈತರು ಉತ್ತಮ ಫಸಲು ತೆಗೆಯಲು ನೆರವಾಗಿ ಎಂದು ಸೂಚಿಸಿದ ಬೇಳೂರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೂರಾರು ಕೋಟಿ ಖರ್ಚು ಮಾಡಿದೆ. ನಿಗಧಿತ ಅವಧಿಯಲ್ಲಿ ಗ್ರಾಮಗಳಿಗೆ ನೀರು ಹರಿಸಬೇಕು. ಮುಂದಿನ ಏಪ್ರಿಲ್‌ನೊಳಗೆ ಆವಿನಹಳ್ಳಿ, ಭಾರಂಗಿ ಮತ್ತು ಕಸಬಾ ಹೋಬಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಿ ಎಂದರು.
ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿ ಪ್ರತಿ ತಿಂಗಳು ಆರೋಗ್ಯ ತಪಾಸಣೆ ನಡೆಸಬೇಕು. ಬೇರೆಬೇರೆ ಊರುಗಳಿಂದ ಮಕ್ಕಳು ವಿದ್ಯಾರ್ಥಿ ನಿಲಯಕ್ಕೆ ಬರುತ್ತಾರೆ. ಅವರ ಆರೋಗ್ಯ ಕಾಳಜಿ ವಹಿಸುವುದು ನಮ್ಮ ಜವಾಬ್ದಾರಿ. ಮಕ್ಕಳಿಗೆ ಶುದ್ದವಾದ ಮತ್ತು ಗುಣಮಟ್ಟದ ಆಹಾರವನ್ನು ಪ್ರತಿದಿನ ನೀಡಬೇಕು. ಎಲ್ಲೆಲ್ಲಿ ಸೋಲಾರ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲವೋ ಅಂತಹ ಕಡೆಗಳಲ್ಲಿ ಗೀಸರ್ ಅಳವಡಿಸಿ ಬಿಸಿನೀರು ಸೌಲಭ್ಯ ಮಕ್ಕಳಿಗೆ ಕೊಡಿ. ಹಾಸ್ಟೆಲ್‌ಗಳಿಂದ ಶಾಲಾಕಾಲೇಜುಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ ಕಲ್ಪಿಸುವ ಜೊತೆಗೆ ಗಾಮೇಂಟ್ಸ್‌ನಿಂದ ಪ್ರತಿದಿನ ಸಂಜೆ ಕಾರ್ಮಿಕರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಡೇಂಗ್ಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ರಜೆ ಹಾಕದೆ ಕೆಲಸ ಮಾಡಬೇಕು. ನಿಗಧಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು. ಈಗಾಗಲೆ ಓರ್ವ ನೌಕರನನ್ನು ನಾವು ಡೇಂಗ್ಯೂವಿನಿಂದ ಕಳೆದುಕೊಂಡಿದ್ದೇವೆ. ಮುಂದೆ ಅಂತಹ ಸಾವುನೋವುಗಳು ನಮ್ಮ ತಾಲ್ಲೂಕಿನಲ್ಲಿ ಆಗಬಾರದು. ಮೃತ ನೌಕರನ ಕುಟುಂಬಕ್ಕೆ ಕನಿಷ್ಟ ೫ ಲಕ್ಷ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಗಮನ ಹರಿಸಬೇಕು. ವೈದ್ಯರು ಕರ್ತವ್ಯಕ್ಕೆ ವಿಳಂಬವಾಗಿ ಹಾಜರಾಗುವುದು, ರಜೆ ಹಾಕುವುದು ಮಾಡಿದರೆ ಅಂತಹವರಿಗೆ ನೋಟಿಸ್ ನೀಡಲು ಸಿವಿಲ್ ಸರ್ಜನ್‌ಗೆ ಸೂಚನೆ ನೀಡಿದರು.
ಉಪವಿಭಾಗಾಧಿಕಾರಿ ಯತೀಶ್ ಆರ್., ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಕಾರ್ಯನಿರ್ವಾಹಣಾಧಿಕಾರಿ ಗುರುಕೃಷ್ಣ ಶೆಣೈ, ಡಿವೈಎಸ್‌ಪಿ ಗೋಪಾಲಕೃಷ್ಣ ನಾಯ್ಕ್, ತಾಲ್ಲೂಕು ಪಂಚಾಯ್ತಿ ಆಡಳಿತಾಧಿಕಾರಿ ಸುಜಾತ, ಪೌರಾಯುಕ್ತ ಎಚ್.ಕೆ.ನಾಗಪ್ಪ ಇನ್ನಿತರ ಅಧಿಕಾರಿಗಳು ಹಾಜರಿದ್ದರು.