ಶಿವಮೊಗ್ಗ :- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂದೂ ಸಮಾಜದ ವಿರುದ್ಧ ಹೇಳಿಕೆ ನೀಡಿರುವುದಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ನೇರವಾಗಿ ಹಿಂದೂ ಸಮಾಜ ಟೀಕೆ ಮಾಡುವ ಧೈರ್ಯ ಯಾರು ಮಾಡಿರಲಿಲ್ಲ. ಮುಸಲ್ಮಾನರ ಬೆಂಬಲದಿಂದ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಅಂದುಕೊಂಡಿದ್ದರು.ಈಗ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿಗೆ ಪೂರ್ಣ ಬಹುಮತ ಬರದಿರುವುದು ರಾಹುಲ್ ಗಾಂದಿಗೆ ಖುಷಿಯಾಗಿದೆ. ಹಿಂದೂ ಸಮಾಜ ಹಿಂಸ ಕೃತ್ಯಕ್ಕೆ ಇಳಿದಿದೆ ಎನ್ನುವ ಹೇಳಿಕೆ ನೀಡಿದ್ದಾರೆ. ಇಡೀ ಪ್ರಪಂಚದ ಹಿಂದೂಗಳಿಗೆ ನೋವು ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಅಪರೂಕೊಮ್ಮೆ ಈ ದೇಶದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಕೊನೆವರೆಗೂ ವಿರೋಧ ಪಕ್ಷದ ನಾಯಕರಾಗಿ ಇರಲಿ. ಇದೇ ರೀತಿ ಹೇಳಿಕೆ ನೀಡುವುದನ್ನು ಮುಂದುವರಿಸಿದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಗೌರವ ಬರುವ ರೀತಿ ನಡೆದುಕೊಳ್ಳಬೇಕು. ಇಲ್ಲದಿದ್ದರೇ ಇಡೀ ಹಿಂದೂ ಸಮಾಜ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳಲಿದೆ ಎಂದರುಉ.
ವಾಲ್ಮೀಕಿ ನಿಗಮದ ಹಗರಣ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ವಾಲ್ಮೀಕಿ ಹಗರಣ ನಿಗಮ ಅಧ್ಯಕ್ಷ ರಾಜೀನಾಮೆ ನೀಡಿಲ್ಲ. ಈ ಪ್ರಕರಣ ಇಡೀ ದೇಶದ ಗಮನ ಸೆಳೆದಿದೆ. ಪರಿಶಿಷ್ಟ ವರ್ಗದವರಿಗೆ ಕಾಂಗ್ರೆಸ್ ಹೇಗೆ ಮೋಸ ಮಾಡಿಕೊಂಡು ಬಂದಿದೆ ಎನ್ನುವುದಕ್ಕೆ ಇದೊಂದು ನಿರ್ದರ್ಶನ. ಮಾಜಿ ಸಚಿವ ನಾಗೇಂದ್ರ ಮತ್ತು ನಿಗಮದ ಅಧ್ಯಕರನ್ನು ಕೂಡಲೇ ಬಂಧಿಸಬೇಕು. ಎಸ್ ಐ ಟಿ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗಬಾರದು ಎಂದರು
ಮೂಡಾ ಹಗರಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಮೂಡಾ ಹಗರಣದಲ್ಲಿ ಸಿಎಂ ಸಿಕ್ಕಿ ಬಿದ್ದಿದ್ದಾರೆ. ಅವರ ಮನೆಯಲ್ಲಿ ಇರುವ ಹೆಣ್ಣು ಮಕ್ಕಳನ್ನು ಬೀದಿಗೆ ತಂದಿದ್ದಾರೆ.ನ್ಯಾಯಾಧೀಶರ ಕೈಗೆ ಪ್ರಕರಣವನ್ನು ಕೊಟ್ಟು ತನಿಖೆ ಮಾಡಿಸಲಿ. ಸಿಎಂ ಕುಟುಂಬದವರು ಭಾಗಿಯಾಗಿದ್ದಾರೆ. ಸಿಎಂ ಕೂಡಲೇ ರಾಜೀನಾಮೆ ನೀಡಿ ಈ ಪ್ರಕರಣದ ತನಿಖೆಗೆ ಸಿಬಿಐಗೆ ವಹಿಸಬೇಕು. ತನಿಖೆ ಮುಗಿದ ನಂತರ ಮತ್ತೆ ಬೇಕಾದರೆ ಸಿಎಂ ಆಗಲಿ ಎಂದು ಹೇಳಿದರು.
ಬಿಜೆಪಿ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಸಿದ ಈಶ್ವರಪ್ಪ, ನಾನು ಬಿಜೆಪಿಯಲ್ಲಿ ಈಗಲೂ ಇದ್ದೇನೆ. ತುರ್ತು ಬಿಜೆಪಿ ಸೇರುವ ಚಿಂತನೆ ಇಲ್ಲ. ಅಪ್ಪ ಮಕ್ಕಳ ಕೈಯಲ್ಲಿ ಬಿಜೆಪಿ ಇರುವುದು ತಪ್ಪು. ಹಿಂದೂ ಹೋರಾಟಗಾರರಿಗೆ ಮತ್ತು ಹಿಂದುತ್ವಕ್ಕೆ ನ್ಯಾಯ ಸಿಗಲಿ ಎಂದು ಚುನಾವಣೆಗೆ ನಿಂತಿದ್ದೆ ಎಂದ ಅವರು, ಪುನಃ ರಾಯಣ್ಣ ಬ್ರಿಗೇಡ್ ಆರಂಭಿಸುವ ಚಿಂತನೆಯಿದೆ. ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದ ಹೇಳಿದರು.