Site icon TUNGATARANGA

ಅನುದಾನ ಸಬ್ದಳಕೆ ಮಾಡಿಕೊಳ್ಳದ ಅಧಿಕಾರಿಗಳು: ಅಕ್ರೊಶ


ಶಿವಮೊಗ್ಗ: ಅನುದಾನ ಬಿಡುಗಡೆಯಾಗಿ ಬಂದಿದ್ದರೂ ಕೂಡ, ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತಳೆದಿದ್ದು, ತಾ.ಪಂ. ಸದಸ್ಯರಿಗೆ ಬೆಲೆಯೇ ಇಲ್ಲದಂತಾಗಿದೆ. ಬಂದ ಅನುದಾ ನಗಳು ವಾಪಾಸ್ಸು ಹೋಗುತ್ತಿದ್ದು, ಅಧಿಕಾರಿಗಳು ಸಭೆಗೆ ಹಾಜರಾಗುತ್ತಿಲ್ಲ ಎಂದು ತಾ.ಪಂ.ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶಿವಮೊಗ್ಗ ತಾಲ್ಲೂಕು ಪಂಚಾಯತ್ ಸಭೆಯಲ್ಲಿ ನಡೆದಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ತಾ.ಪಂ. ಕಟ್ಟಡ ನಿರ್ಮಾಣಕ್ಕೆ ೨ ಕೋಟಿ ಅನುದಾನ ಬಿಡುಗಡೆಯಾಗಿ ೨ ವರ್ಷ ಕಳೆದಿದೆ. ಆದರೂ ಇದುವರೆಗೆ ಇಂಜಿನಿಯರಿಂಗ್ ವಿಭಾಗ ಯೋಜನಾ ವರದಿ ನೀಡಿಲ್ಲ, ಟೆಂಡರ್ ಕರೆದಿಲ್ಲ, ಸ್ವತಃ ಶಾಸಕರು ಆದೇಶ ನೀಡಿದರೂ ಕೂಡ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಕೂಡಲೇ ಪಂಚಾಯತ್ ರಾಜ್ ಮುಖ್ಯ ಇಂಜಿನಿಯರ್‌ರವರನ್ನು ಸ್ಥಳಕ್ಕೆ ಕರೆಸುವಂತೆ ಸದಸ್ಯರು ಪಟ್ಟು ಹಿಡಿದರು
ಅಧಿಕಾರಿಗಳು ತಮ್ಮ ಮಾತು ಕೇಳುವುದಿಲ್ಲ, ನಮಗೆ ಇಲ್ಲಿ ಯಾವ ಬೆಲೆನೂ ಇಲ್ಲ, ದಯವಿಟ್ಟು ಮಾಧ್ಯಮದವರು ಅಧಿಕಾರಿಗಳ ಮೊಂಡು ತನದ ಬಗ್ಗೆ ಗಮನ ಸೆಳೆಯುವಂತೆ ತುಂಬಿದ ಸಭೆಯಲ್ಲಿ ಸದಸ್ಯರು ವಿನಂತಿಸಿದ ಘಟನೆಯೂ ನಡೆಯಿತು. ಇದೇ ರೀತಿ ಮುಂದುವರೆದರೆ ಎಲ್ಲಾ ಸದಸ್ಯರು ಒಟ್ಟಾಗಿ ಹೋಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಲು ಕೂಡ ತೀರ್ಮಾನಿಸಲಾಯಿತು.
ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಕೂಡಲೆ ಸ್ಥಾಪಿಸಲು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿಲ್ಲ, ಕೆರೆ ಒತ್ತುವರಿಯನ್ನು ಕೂಡ ದೂರು ನೀಡಿದರೂ ಕ್ರಮಕೈಗೊಂಡಿಲ್ಲ, ಸ್ಮಶಾನಕ್ಕೆ ಹಣ ಬಿಡುಗಡೆಯಾಗಿದ್ದರೂ ಜಾಗ ಗುರುತಿಸಿಲ್ಲ, ಸರ್ವೇ ಇಲಾಖೆ ಸಂಪೂರ್ಣ ನಿಷ್ಕ್ರೀಯವಾಗಿದ್ದು, ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಮಾವಾಸ್ಯೆ ಕ್ಯಾಂಪ್ ಬಳಿ ಸೈನಿಕರಿಗೆ ಜಾಗ ನೀಡಿದ್ದರೂ ಇದುವರೆಗೂ ಸ್ಥಳ ಪರಿಶೀಲನೆ ಮಾಡದೇ ಅಧಿಕಾರಿಗಳು ಟೇಬಲ್ ಮೇಲೆ ಕುಳಿತೇ ಆದೇಶ ಮಾಡುತ್ತಿದ್ದು, ಜಾಗ ಪಡೆದವರು ದಿನ ನಿತ್ಯ ಹೊಡೆದಾಡುವ ಪರಿಸ್ಥಿತಿ ಬಂದಿದೆ. ಕೂಡಲೇ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಶಾಸಕರ ಅನುದಾನ ಕೂಡ ಬಂದು ವಾಪಾಸ್ಸು ಹೋಗಿದ್ದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಗೀತಾ ಜಯಶೇಖರ್, ಉಪಾಧ್ಯಕ್ಷೆ ನಿರ್ಮಲಾ ಮೋಹನ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಜಿ.ಶ್ರೀಧರ್, ಇ.ಓ. ಕಲ್ಲಪ್ಪ ಹಾಗೂ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version